ಒಟಿಟಿಯಲ್ಲಿ ‘ಬೀಸ್ಟ್’ ಸಿನಿಮಾ; ‘ಕೆಜಿಎಫ್ 2’ ಎದುರು ಬಂದ ಸಿನಿಮಾಗೆ ಲಾಭವೋ? ನಷ್ಟವೋ?
ನೆಲ್ಸನ್ ದಿಲೀಪ್ಕುಮಾರ್ ಅವರು ‘ಬೀಸ್ಟ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 13ರಂದು ತೆರೆಗೆ ಬಂದ ಈ ಚಿತ್ರ ‘ಕೆಜಿಎಫ್ 2’ ಎದುರು ಮಂಕಾದರೂ ಲಾಭ ಕಂಡಿದೆ.
‘ಕೆಜಿಎಫ್ 2’ ಸಿನಿಮಾಗೂ (KGF: Chapter 2) ಒಂದು ದಿನ ಮೊದಲು ತೆರೆಗೆ ಬಂದ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಹೇಳ ಹೆಸರಿಲ್ಲದೆ ಹೋಯಿತು. ಈ ಚಿತ್ರ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಇನ್ನು, ‘ಕೆಜಿಎಫ್ 2’ಗೆ ಮೆಚ್ಚುಗೆ ವ್ಯಕ್ತವಾದ ಕಾರಣ ‘ಬೀಸ್ಟ್’ ಸಿನಿಮಾ (Beast Movie) ನೋಡಲು ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರದತ್ತ ತೆರಳಲಿಲ್ಲ. ಸಿನಿಮಾ ತೆರೆಗೆ ಬಂದು ಒಂದು ತಿಂಗಳು ಕಳೆಯುವುದರೊಳಗೆ ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಇಂದು (ಮೇ 11) ‘ಬೀಸ್ಟ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ (Netflix) ರಿಲೀಸ್ ಆಗಿದೆ. ಈ ಸಿನಿಮಾ ಮೆಚ್ಚುಗೆ ಗಳಿಸಿಕೊಳ್ಳದ ಹೊರತಾಗಿಯೂ ಲಾಭ ಕಂಡಿದೆ ಎಂಬುದು ವಿಶೇಷ.
ಮಾಜಿ ರಾ ಏಜೆಂಟ್ ವೀರ ರಾಘವನ್ (ದಳಪತಿ ವಿಜಯ್) ಅವರು ಚೆನ್ನೈನ ಮಾಲ್ ಒಂದರಲ್ಲಿ ಸೇರಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಆ ಮಾಲ್ ಹೈಜಾಕ್ ಆಗುತ್ತದೆ. ಎಲ್ಲರನ್ನೂ ವೀರ ರಾಘವನ್ ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಕಥೆ. ‘ಡಾಕ್ಟರ್’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನೆಲ್ಸನ್ ದಿಲೀಪ್ಕುಮಾರ್ ಅವರು ‘ಬೀಸ್ಟ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 13ರಂದು ತೆರೆಗೆ ಬಂದ ಈ ಚಿತ್ರ ‘ಕೆಜಿಎಫ್ 2’ ಎದುರು ಮಂಕಾದರೂ ಲಾಭ ಕಂಡಿದೆ. ಇದು ದಳಪತಿ ವಿಜಯ್ ಪವರ್ ಎಂದು ಫ್ಯಾನ್ಸ್ ಹೊಗಳುತ್ತಿದ್ದಾರೆ.
ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ‘ಬೀಸ್ಟ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 170 ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳುನಾಡು ಒಂದರಲ್ಲೇ ಈ ಸಿನಿಮಾ 120 ಕೋಟಿ ರೂಪಾಯಿ ಗಳಿಸಿದೆ. ಕರ್ನಾಟಕದಲ್ಲಿ 14.25, ಕೇರಳದಲ್ಲಿ 11.5 ಕೋಟಿ ರೂಪಾಯಿ, ಆಂಧ್ರದಲ್ಲಿ 18.75 ಕೋಟಿ ರೂಪಾಯಿ ಹಾಗೂ ಉಳಿದ ಭಾಗಗಳಿಂದ ಸಿನಿಮಾ 5 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 170 ಕೋಟಿ ರೂಪಾಯಿ ಆಗಿದೆ. ಒಟಿಟಿ ಹಕ್ಕು ದೊಡ್ಡ ಮಟ್ಟದಲ್ಲೇ ಮಾರಾಟ ಆಗಿದೆ ಎನ್ನಲಾಗುತ್ತಿದೆ.
ಈ ಸಿನಿಮಾದಲ್ಲಿ ವಿಜಯ್ ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೂಜಾ ಹೆಗ್ಡೆ, ಯೋಗಿ ಬಾಬು ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಜನರು ಒಟಿಟಿಯಲ್ಲಿ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಮಲಯಾಳಂ, ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.