Ananya Panday: ‘ಕಾಫಿ ವಿತ್ ಕರಣ್’ ಶೋನಲ್ಲಿ ಪುತ್ರಿ ಅನನ್ಯಾ ಪಾಂಡೆ ಬೋಲ್ಡ್ ಮಾತುಗಳಿಗೆ ತಂದೆ ಚಂಕಿ ಪಾಂಡೆ ಬೆಂಬಲ
Chunky Pandey | Koffee With Karan: ಅನನ್ಯಾ ಪಾಂಡೆ ಮಾತುಗಳಿಗೆ ಚಂಕಿ ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕಾಫಿ ವಿತ್ ಕರಣ್ 7’ ಶೋನಲ್ಲಿ ಒಟ್ಟಾರೆಯಾಗಿ ಪುತ್ರಿ ನಡೆದುಕೊಂಡ ರೀತಿಗೆ ಅವರು ಭೇಷ್ ಎಂದಿದ್ದಾರೆ.
ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋ (Koffee With Karan) ತುಂಬ ಫೇಮಸ್ ಆಗಿದೆ. ಅದರ 7ನೇ ಸೀಸನ್ ಈಗ ನಡೆಯುತ್ತಿದೆ. ಪ್ರತಿ ಗುರುವಾರ ಜನಪ್ರಿಯ ತಾರೆಯರ ಎಪಿಸೋಡ್ಗಳು ಪ್ರಸಾರ ಆಗುತ್ತವೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಈ ಶೋ ಬಿತ್ತರ ಆಗುತ್ತಿದೆ. ಎಂದಿನಂತೆ ಈ ಬಾರಿ ಕೂಡ ಇಲ್ಲಿ ಸೆಲೆಬ್ರಿಟಿಗಳು ಓಪನ್ ಆಗಿಯೇ ಮಾತನಾಡುತ್ತಿದ್ದಾರೆ. ಲವ್, ಡೇಟಿಂಗ್, ಲೈಂಗಿಕತೆ, ಬ್ರೇಕಪ್, ವಿಚ್ಛೇದನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕರಣ್ ಜೋಹರ್ ಪ್ರಶ್ನೆ ಕೇಳುತ್ತಾರೆ. ಇಂಥ ಪ್ರಶ್ನೆಗಳಿಗೆ ಉತ್ತರಿಸಿದಾಗ ಕಿರಿಕ್ ಆಗುವುದು ಸಹಜ. ಇತ್ತೀಚಿನ ಎಪಿಸೋಡ್ನಲ್ಲಿ ನಟಿ ಅನನ್ಯಾ ಪಾಂಡೆ (Ananya Panday) ಅವರು ಅತಿಥಿಯಾಗಿ ಬಂದಿದ್ದರು. ಅವರ ಮಾತುಗಳಿಗೆ ತಂದೆ ಚಂಕಿ ಪಾಂಡೆ (Chunky Pandey) ಭೇಷ್ ಎಂದಿದ್ದಾರೆ.
ಬಾಲಿವುಡ್ನಲ್ಲಿ ಚಂಕಿ ಪಾಂಡೆ ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಪುತ್ರಿ ಅನನ್ಯಾ ಪಾಂಡೆ ಕೂಡ ಈಗ ಬ್ಯುಸಿ ಆಗಿದ್ದಾರೆ. ‘ಲೈಗರ್’ ಸಿನಿಮಾದಲ್ಲಿ ಅವರು ವಿಜಯ್ ದೇವರಕೊಂಡ ಜೊತೆ ನಟಿಸಿದ್ದಾರೆ. ಹಾಗಾಗಿ ‘ಕಾಫಿ ವಿತ್ ಕರಣ್ ಶೋ’ಗೆ ಅವರಿಬ್ಬರು ಜೋಡಿಯಾಗಿ ಬಂದಿದ್ದರು. ಈ ಎಪಿಸೋಡ್ ನೋಡಿ ಚಂಕಿ ಪಾಂಡೆ ಖುಷಿಪಟ್ಟಿದ್ದಾರೆ.
ಕೊನೆಯ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ ಎಂದು ವಿಜಯ್ ದೇವರಕೊಂಡಗೆ ಕರಣ್ ಜೋಹರ್ ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರ ಊಹಿಸಲು ಅನನ್ಯಾ ಪಾಂಡೆ ಮುಂದಾಗಿದ್ದರು. ಈ ವಿಚಾರಕ್ಕಾಗಿ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಆದರೆ ಮಗಳ ಮಾತುಗಳಿಗೆ ಚಂಕಿ ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶೋನಲ್ಲಿ ಒಟ್ಟಾರೆಯಾಗಿ ಪುತ್ರಿ ನಡೆದುಕೊಂಡ ರೀತಿಗೆ ಅವರು ಭೇಷ್ ಎಂದಿದ್ದಾರೆ.
‘ನನಗೆ ತುಂಬ ಖುಷಿ ಆಗುತ್ತಿದೆ. ಕಾಫಿ ವಿತ್ ಕರಣ್ ಶೋನಲ್ಲಿ ಆಕೆ ತುಂಬ ಚೆನ್ನಾಗಿ ನಡೆದುಕೊಂಡಳು. ಆಕೆಯ ಬಗ್ಗೆ ನನಗೆ ಸಖತ್ ಹೆಮ್ಮೆ ಇದೆ. ಈ ಪ್ರಾಮಾಣಿಕತೆಯನ್ನು ಅವಳು ಎಂದಿಗೂ ಕಳೆದುಕೊಳ್ಳಬಾರದು’ ಎಂದು ಚಂಕಿ ಪಾಂಡೆ ಹೇಳಿದ್ದಾರೆ. ಈ ಹಿಂದೆ ಅನನ್ಯಾ ಪಾಂಡೆ ಅವರ ಡ್ರೆಸ್ ಬಗ್ಗೆ ಕೆಟ್ಟ ಕಮೆಂಟ್ಗಳನ್ನು ಮಾಡಲಾಗಿತ್ತು. ಆಗಲೂ ಅವರು ಮಗಳ ಪರವಾಗಿ ಬ್ಯಾಟ್ ಬೀಸಿದ್ದರು.
Published On - 8:06 am, Mon, 1 August 22