‘ಜೈ ಭೀಮ್’ ಚಿತ್ರ ಮಾಡಿದ್ದ ಸೂರ್ಯ, ಜ್ಯೋತಿಕಾ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ
Jai Bhim Movie | Vanniyar: ಈ ಪ್ರಕರಣದ ವಿಚಾರಣೆ ಏ.29ರಂದು ನಡೆಯಿತು. ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಕಾಲಿವುಡ್ನ ಖ್ಯಾತ ನಟ ಸೂರ್ಯ (Suriya) ಅಭಿನಯಿಸಿರುವ ‘ಜೈ ಭೀಮ್’ ಸಿನಿಮಾ ಸಖತ್ ಸದ್ದು ಮಾಡಿತ್ತು. ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕೆಲವರು ‘ಜೈ ಭೀಮ್’ ಚಿತ್ರದ ಬಗ್ಗೆ ಆಕ್ಷೇಪ ಎತ್ತಿದ್ದರು. ವನ್ನಿಯಾರ್ (Vanniyar) ಸಮುದಾಯದ ಜನರನ್ನು ಈ ಸಿನಿಮಾದಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ತಕರಾರು ತೆಗೆದಿದ್ದರು. ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲು ಏರಿದೆ. ಸಿನಿಮಾದ ನಟ ಸೂರ್ಯ, ನಿರ್ಮಾಪಕಿಯೂ ಆಗಿರುವ ಅವರ ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಚೆನ್ನೈನ ನ್ಯಾಯಾಲಯವೊಂದು ಆದೇಶಿಸಿದೆ. ಇದರಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. 2021ರ ನವೆಂಬರ್ 2ರಂದು ‘ಜೈ ಭೀಮ್’ ಸಿನಿಮಾ (Jai Bhim Movie) ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ರಿಲೀಸ್ ಆಗಿತ್ತು. ಬುಡಕಟ್ಟು ಸಮುದಾಯದ ಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಕುರಿತು ಈ ಚಿತ್ರದಲ್ಲಿ ಹೇಳಲಾಗಿದೆ. ಆದರೆ ಸಿನಿಮಾದ ಕೆಲವು ದೃಶ್ಯಗಳು ವನ್ನಿಯಾರ್ ಸಮುದಾಯವನ್ನು ಅವಹೇಳಕಾರಿಯಾಗಿ ಚಿತ್ರಿಸಿವೆ ಎಂದು ಆ ಸಮುದಾಯದ ಕೆಲವರು ಕಾನೂನಿನ ಸಮರ ಸಾರಿದ್ದಾರೆ.
‘ರುದ್ರ ವನ್ನಿಯಾರ್ ಸೇನಾ’ ಸಂಘಟನೆಯವರು ಈ ಕೇಸ್ ದಾಖಲಿಸಿದ್ದಾರೆ. ಏ.29ರಂದು ಈ ಪ್ರಕರಣದ ವಿಚಾರಣೆ ನಡೆಯಿತು. ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲ್ ಅವರು ವಿಚಾರಣೆಯಲ್ಲಿ ಹಾಜರಾಗಿಲ್ಲ. ‘ವನ್ನಿಯರ್ ಸಮುದಾಯವನ್ನು ಕೆಟ್ಟದಾಗಿ ತೋರಿಸುವ ಸಲುವಾಗಿಯೇ ಈ ಸಿನಿಮಾವನ್ನು ಮಾಡಲಾಗಿದೆ’ ಎಂದು ದೂರುದಾರರು ಆರೋಪಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ಸೂರ್ಯ, ಜ್ಯೋತಿಕಾ ಮತ್ತು ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಚೆನ್ನೈ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 20ರಂದು ನಡೆಯಲಿದೆ.
ಕೆಲವು ಸತ್ಯ ಘಟನೆಗಳನ್ನು ಆಧರಿಸಿ ‘ಜೈ ಭೀಮ್’ ಸಿನಿಮಾ ಮೂಡಿಬಂದಿದೆ. ಈ ಚಿತ್ರ ರಿಲೀಸ್ ಆದಾಗಲೇ ವನ್ನಿಯಾರ್ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಸಿನಿಮಾದಲ್ಲಿನ ವಿಲನ್ ಪಾತ್ರಗಳನ್ನು ವನ್ನಿಯಾರ್ ಸಮುದಾಯದವರು ಎಂದು ತೋರಿಸಲಾಗಿದೆ. ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಲಾಗಿದೆ. ಸಮಾಜದಲ್ಲಿ ತಮ್ಮ ಸಮುದಾಯಕ್ಕೆ ಅವಮಾನ ಆದಂತಾಗಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸೂರ್ಯ ಮತ್ತು ಜ್ಯೋತಿಕಾ ಒಡೆತನದ ‘2ಡಿ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ‘ಜೈ ಭೀಮ್’ ಸಿನಿಮಾ ಮೂಡಿಬಂದಿದೆ. ವಕೀಲ ಚಂದ್ರು ಅವರ ರಿಯಲ್ ಲೈಫ್ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಬುಡಕಟ್ಟು ಸಮುದಾಯದ ಜನರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ರಿಯಲ್ ಹೀರೋ ಎನಿಸಿಕೊಂಡ ಚಂದ್ರು ಅವರ ಪಾತ್ರದಲ್ಲಿನ ಸೂರ್ಯ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈಗ ಈ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ‘ಜೈ ಭೀಮ್’ ತಂಡ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.
ಭಿನ್ನ ರೀತಿಯ ಸಿನಿಮಾಗಳನ್ನು ಮಾಡುವ ಮೂಲಕ ಸೂರ್ಯ ಗುರುತಿಸಿಕೊಂಡಿದ್ದಾರೆ. ‘ಜೈ ಭೀಮ್’ ಚಿತ್ರಕ್ಕಿಂತಲೂ ಮುನ್ನ ಅವರು ಮಾಡಿದ್ದ ‘ಸೂರರೈ ಪೊಟ್ರು’ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾ ಸಹ ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ರಿಲೀಸ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.