ಚಿತ್ರಮಂದಿರದಲ್ಲಿ ಸೋತ ‘ಹರಿ ಹರ ವೀರ ಮಲ್ಲು’ ಒಟಿಟಿಗೆ ಬರುವುದು ಯಾವಾಗ?
ಜುಲೈ 24ರಂದು ತೆರೆಕಂಡ ‘ಹರಿ ಹರ ವೀರ ಮಲ್ಲು’ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಿಲ್ಲ. ಈ ಮೊದಲು ಪ್ಲ್ಯಾನ್ ಮಾಡಿದ್ದಕ್ಕಿಂತಲೂ ಒಂದು ವಾರ ಮುಂಚಿತವಾಗಿ ಈ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ. ಯಾವ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬರಲಿದೆ? ಯಾವ ದಿನಾಂಕದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ..

ನಟ ಪವನ್ ಕಲ್ಯಾಣ್ (Pawan Kalyan) ಅವರ ಅಭಿಮಾನಿಗಳು ‘ಹರಿ ಹರ ವೀರ ಮಲ್ಲು’ (Hari Hara Veera Mallu) ಸಿನಿಮಾ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಇದು ಪವನ್ ಕಲ್ಯಾಣ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಆ ಕಾರಣದಿಂದಲೂ ನಿರೀಕ್ಷೆ ಜೋರಾಗಿತ್ತು. ಆದರೆ ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದರು. ದಿನದಿಂದ ದಿನಕ್ಕೆ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್ ತಗ್ಗುತ್ತಲೇ ಹೋಯಿತು. ಈಗ ಈ ಸಿನಿಮಾವನ್ನು ಒಟಿಟಿಯಲ್ಲಿ (OTT) ಬಿಡುಗಡೆ ಮಾಡಲು ನಿರ್ಮಾಪಕರು ಆಲೋಚಿಸಿದ್ದಾರೆ. ಆ ಬಗ್ಗೆ ಟಾಲಿವುಡ್ ಅಂಗಳದಿಂದ ಸುದ್ದಿ ಕೇಳಿಬರುತ್ತಿದೆ.
ಒಂದುವೇಳೆ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದರೆ ಇದರ ಒಟಿಟಿ ರಿಲೀಸ್ ತಡವಾಗುತ್ತಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಕಳಪೆ ಪ್ರದರ್ಶನ ಮಾಡಿದ್ದರಿಂದ ಆದಷ್ಟು ಬೇಗ ಒಟಿಟಿಯಲ್ಲಿ ಬಿಡುಗಡೆ ಮಾಡುವುದೇ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿದಂತಿದೆ. ಈ ಮೊದಲು ಅಂದುಕೊಂಡ ದಿನಾಂಕಕ್ಕಿಂತಲೂ ಮುಂಚಿತವಾಗಿಯೂ ಈ ಚಿತ್ರ ಒಟಿಟಿಗೆ ಬರಲಿದೆ.
ವರದಿಗಳ ಪ್ರಕಾರ, ಆಗಸ್ಟ್ 22ರಂದು ‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕಳಪೆ ಆಗಿರುವುದರಿಂದ ಒಂದು ವಾರ ಮುಂಚಿತವಾಗಿ, ಅಂದರೆ ಆಗಸ್ಟ್ 15ರಂದು ಒಟಿಟಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾತುಕಥೆ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಚಿತ್ರತಂಡದಿಂದ ಅಧಿಕೃವಾಗಿ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಜೆ ಇರಲಿದೆ. ಅಂದು ಹೆಚ್ಚು ವೀಕ್ಷಣೆ ಕಾಣುವ ಸಾಧ್ಯತೆ ಇರುತ್ತದೆ. ಹಾಗಾಗಿ ಆ ದಿನಾಂಕದಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಒಟಿಟಿಗೆ ಎಂಟ್ರಿ ನೀಡುವ ಸಾಧ್ಯತೆ ದಟ್ಟವಾಗಿದೆ. ಚಿತ್ರಮಂದಿರಗಳಲ್ಲಿ ಜನಮೆಚ್ಚುಗೆ ಪಡೆಯದ ಈ ಸಿನಿಮಾಗೆ ಒಟಿಟಿಯಲ್ಲಿ ಎಷ್ಟರಮಟ್ಟಿಗೆ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕಲ್ಯಾಣ್ ಕನಸು ಭಗ್ನ
‘ಹರಿ ಹರ ವೀರ ಮಲ್ಲು’ ಸಿನಿಮಾಗೆ ಕ್ರಿಷ್ ಜಗರ್ಲಮುಡಿ ಮತ್ತು ಜ್ಯೋತಿ ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ನಿಧಿ ಅಗರ್ವಾಲ್ ನಟಿಸಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಎಂಎಂ ಕೀರವಾಣಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








