ಜೈಲಿನಿಂದ ಬಂದು ಸೇಡಿನ ಮಾತಾಡಿದ್ರಾ ಕೆಆರ್ಕೆ? ಸ್ಪಷ್ಟನೆ ನೀಡಿದ ವಿವಾದಾತ್ಮಕ ವಿಮರ್ಶಕ
Kamaal R Khan | KRK: ಕಮಾಲ್ ಆರ್. ಖಾನ್ ಅವರದ್ದು ನಿಷ್ಠುರದ ವ್ಯಕ್ತಿತ್ವ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ಅವರು ಎದುರು ಹಾಕಿಕೊಂಡಿದ್ದಾರೆ.
ನಟ, ವಿಮರ್ಶಕ ಕಮಾಲ್ ಆರ್. ಖಾನ್ (Kamaal R Khan) ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ತಮ್ಮ ಮೇಲೆ ಎದುರಾದ ಕೆಲವು ಆರೋಪಗಳಿಂದಾಗಿ ಅವರು ಜೈಲು ವಾಸ ಅನುಭವಿಸುವಂತಾಯಿತು. ಎರಡು ಪ್ರತ್ಯೇಕ ಕೇಸ್ಗಳಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದರು. ಈಗ ಜಾಮೀನು ಪಡೆದು ಅವರು ಹೊರಬಂದಿದ್ದಾರೆ. ಜಾಮೀನು ಪಡೆದ ಬಳಿಕ ಅವರು ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಅದನ್ನು ಕಮಾಲ್ ಆರ್. ಖಾನ್ (KRK) ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಸೇಡು ತೀರಿಸಿಕೊಳ್ಳುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಕಮಾಲ್ ಆರ್. ಖಾನ್ ಅವರದ್ದು ನಿಷ್ಠುರದ ವ್ಯಕ್ತಿತ್ವ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮೀ’ ಸಿನಿಮಾ ಹಾಗೂ ಇನ್ನಿತರ ಸೆಲೆಬ್ರಿಟಿಗಳ ಬಗ್ಗೆ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೂಡ ಅವರ ಮೇಲಿದೆ. ಸದ್ಯ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಅವರ ಮುಂದಿನ ನಡೆ ಏನು ಎಂಬುದನ್ನು ಇನ್ನಷ್ಟು ಗೊತ್ತಾಗಬೇಕಿದೆ.
‘ನನ್ನ ಸೇಡಿಗಾಗಿ ನಾನು ವಾಪಸ್ ಬಂದಿದ್ದೇನೆ’ ಅಂತ ಕಮಾಲ್ ಆರ್. ಖಾನ್ ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದರ ಬಗ್ಗೆ ಅವರಿಂದ ಪ್ರತಿಕ್ರಿಯೆ ಬಂದಿದೆ. ‘ಮಾಧ್ಯಮಗಳು ಹೊಸ ಕಥೆ ಕಟ್ಟುತ್ತಿವೆ. ನಾನು ವಾಪಸ್ ಬಂದಿದ್ದೇನೆ ಮತ್ತು ಮನೆಯಲ್ಲಿ ಸುರಕ್ಷಿತವಾಗಿದ್ದೇನೆ. ನನಗೆ ಆದ ಎಲ್ಲ ಕೆಟ್ಟ ಘಟನೆಗಳನ್ನು ನಾನು ಮರೆತಿದ್ದೇನೆ. ನನ್ನ ಹಣೆಯಲ್ಲಿ ಅದು ಬರೆದಿದ್ದು ಅಂತ ನಂಬಿದ್ದೇನೆ’ ಎಂದು ಕಮಾಲ್ ಆರ್. ಖಾನ್ ಹೇಳಿದ್ದಾರೆ.
Media is creating new stories. I am back and safe at my home. I don’t need any revenge from anyone. I have forgotten whatever bad thing happened with me. I believe, it was written in my destiny.
— KRK (@kamaalrkhan) September 11, 2022
ಸೆಪ್ಟೆಂಬರ್ 8ರಂದು ಕಮಾಲ್ ಆರ್. ಖಾನ್ ಅವರ ಮಗ ಫೈಸಲ್ ಕಮಾಲ್ ಮಾಡಿದ ಟ್ವೀಟ್ ಅಚ್ಚರಿ ಮೂಡಿಸಿತ್ತು. ‘ಮುಂಬೈನಲ್ಲಿ ಕೆಲವರು ನನ್ನ ತಂದೆಗೆ ಸಾಯುವಂತೆ ಟಾರ್ಚರ್ ನೀಡುತ್ತಿದ್ದಾರೆ. 23 ವರ್ಷದವನಾದ ನಾನು ಲಂಡನ್ನಲ್ಲಿ ವಾಸಿಸುತ್ತಿದ್ದೇನೆ. ಅಪ್ಪನಿಗೆ ಹೇಗೆ ಸಹಾಯ ಮಾಡಬೇಕೋ ನನಗೆ ತಿಳಿಯುತ್ತಿಲ್ಲ. ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ ಮತ್ತು ದೇವೇಂದ್ರ ಫಡ್ನವಿಸ್ ಅವರು ಅಪ್ಪನ ಪ್ರಾಣ ಉಳಿಸಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ. ಅಪ್ಪ ಇಲ್ಲದಿದ್ದರೆ ನಾನು ಮತ್ತು ನನ್ನ ಸಹೋದರಿ ಸಾಯುತ್ತೇವೆ’ ಎಂದು ಫೈಸಲ್ ಕಮಾಲ್ ಟ್ವೀಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.