ಒಟಿಟಿಗೆ ಬಂದಿರೋ ‘ವಲವಾರ’ ಸಿನಿಮಾನ ಮಿಸ್ ಮಾಡಲೇಬೇಡಿ; ನಮ್ಮ ಮಣ್ಣಿನ ಸುಂದರ ಕತೆ
ಕನ್ನಡದ 'ವಲವಾರ' ಚಲನಚಿತ್ರವು ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಗಳಿಸದೆ, ಈಗ ಒಟಿಟಿ (Zee5) ಮೂಲಕ ಅಪಾರ ಪ್ರೇಕ್ಷಕರನ್ನು ತಲುಪಿ ಗೆದ್ದಿದೆ. ಸಕಲೇಶಪುರದ ಗ್ರಾಮೀಣ ಸೊಗಡಿನಲ್ಲಿ ಅಣ್ಣ-ತಮ್ಮಂದಿರ ಬಾಂಧವ್ಯ, ತಾರತಮ್ಯ ಮತ್ತು ಹಸು ಹುಡುಕುವ ಒಂದು ಹುಡುಗನ ಜೀವನಾನುಭವವನ್ನು ಹೇಳುವ ಈ ಹೃದಯಸ್ಪರ್ಶಿ ಕಲಾಕೃತಿ ವಿಮರ್ಶಕರ ಮೆಚ್ಚುಗೆ ಗಳಿಸಿದೆ.

ಕನ್ನಡದಲ್ಲಿ ಸಾಕಷ್ಟು ಸುಂದರ ಸಿನಿಮಾಗಳು ಥಿಯೇಟರ್ಗೆ ಬಂದು ಸದ್ದಿಲ್ಲದೆ ಹೋದ ಉದಾಹರಣೆಗಳಿವೆ. ‘ಚಿತ್ರ ಚೆನ್ನಾಗಿದ್ದರೂ ಹೆಚ್ಚು ಜನರಿಗೆ ತಲುಪಲಿಲ್ಲ’ ಎಂಬ ಕೊರಗು ಸಿನಿಮಾ ತಂಡವನ್ನು ಸದಾ ಕಾಡುತ್ತಿರುತ್ತದೆ. ಆದರೆ, ಇಂತಹ ಸಿನಿಮಾಗಳು ಒಟಿಟಿಗೆ (OTT) ಬಂದ ಬಳಿಕ ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ತಲುಪಿ, ಗೆದ್ದ ಇತಿಹಾಸವಿದೆ. ಈಗ ಇದೇ ಸಾಲಿಗೆ ‘ವಲವಾರ’ ಚಿತ್ರವೂ ಸೇರ್ಪಡೆ ಆಗಿದೆ. ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾ ಹಾಗೂ ಚಿತ್ರರಂಗದ ಗಣ್ಯರಿಂದ ಭಾರಿ ಪ್ರಶಂಸೆ ಪಡೆದಿದ್ದ ಈ ಅತ್ಯಂತ ಸುಂದರ ಹಾಗೂ ಹೃದಯಸ್ಪರ್ಶಿ ಕಲಾಕೃತಿ, ಈಗ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುತ್ತಿದೆ.
ಸಕಲೇಶಪುರದ ಹಸಿರು ಪರಿಸರದಲ್ಲಿ ನಡೆಯುವ ಗ್ರಾಮೀಣ ಕಥೆ. ಹಳ್ಳಿ ಜನರ ಮುಗ್ಧತೆ, ಅಣ್ಣ-ತಮ್ಮಂದಿರ ಬಾಂಧವ್ಯ ಮತ್ತು ಇಬ್ಬರು ಮಕ್ಕಳಿದ್ದಾಗ ತಂದೆ ಮಾಡುವ ತಾರತಮ್ಯದ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ‘ವಲವಾರ’ ಪದದ ಅರ್ಥ ಕೂಡ ತಾರತಮ್ಯ ಎಂದೇ.
ಕಥೆ ಏನು?
ಒಂದು ಬಡ ಕುಟುಂಬದಲ್ಲಿ ಹುಟ್ಟುವ ಕುಂಡೇಸಿ ಹಾಗೂ ಕೊಸುಡಿಯ ಕಥೆ ಇದು. ತಂದೆಗೆ ಕಿರಿಯ ಮಗ ಕೊಸುಡಿ ಅಂದರೆ ಪ್ರೀತಿ. ಹಿರಿ ಮಗ ಕುಂಡೇಸಿ ಅಷ್ಟಕ್ಕಷ್ಟೇ. ತಂದೆ ಪೇಟೆಗ ಹೋದಾಗ ಅಣ್ಣ-ತಮ್ಮಂದಿರು ತಮ್ಮ ಮನೆಯ ಗರ್ಭಿಣಿ ಹಸು ‘ಗೌರ’ಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಾರೆ. ಆದರೆ, ಆ ಹಸು ಕಾಣೆಯಾಗುತ್ತದೆ. ಒಂದೇ ರಾತ್ರಿಯಲ್ಲಿ ಆ ಹಸುವನ್ನು ಹುಡುಕುವ ಪ್ರಕ್ರಿಯೆಯಲ್ಲಿ ಆ ಪುಟ್ಟ ಹುಡುಗನಿಗೆ ಸಿಗುವ ಜೀವನಾನುಭವವೇ ಚಿತ್ರದ ಮುಖ್ಯ ಕಥಾವಸ್ತು.
ಇದನ್ನೂ ಓದಿ: ‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ
ಸುತನ್ ಗೌಡ ಅವರು ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ಬಾಲ ನಟರಾದ ಮಾಸ್ಟರ್ ವೇದಿಕ್ ಕುಶಾಲ್ (ಕುಂಡೇಸಿ) ಮತ್ತು ಮಾಸ್ಟರ್ ಶಯಾನ್ (ಕೊಸುಡಿ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅಭಯ್ (ಯದು ಕುಮಾರ), ಮಾಲತೇಶ್ ಮತ್ತು ಹರ್ಷಿತಾ ಗೌಡ ನಟಿಸಿದ್ದಾರೆ. ಸುಂದರ ಹಳ್ಳಿ ಕಥೆಯ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಹಿನ್ನೆಲೆ ಸಂಗೀತ ಮತ್ತಷ್ಟು ತೂಕ ಕೊಟ್ಟಿದೆ. ಗಿರಿಧರ್ ಜಯಕುಮಾರ್, ಅನಿರುದ್ಧ್ ಗೌತಮ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಜೀ5 ಒಟಿಟಿಯಲ್ಲಿ ಕನ್ನಡದ ಜೊತೆಗೆ ಹಲವು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




