‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ಪವನ್ ನಾಯಕ ಮಾತ್ರ ಅಲ್ಲ, ನಿರ್ವಹಿಸಿದ್ದಾರೆ ಮತ್ತೊಂದು ಜವಾಬ್ದಾರಿ
Pawan Kalyan: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಾಳೆ (ಜುಲೈ 24) ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ನಿಧಿ ಅಗರ್ವಾಲ್ ನಾಯಕಿ. ಅಂದಹಾಗೆ ಈ ಸಿನಿಮಾನಲ್ಲಿ ಪವನ್ ಕಲ್ಯಾಣ್ ನಾಯಕ ಮಾತ್ರವೇ ಅಲ್ಲ. ಇನ್ನೊಂದು ಪ್ರಮುಖ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದಾರೆ.

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಾಳೆ (ಜುಲೈ 24) ಬಿಡುಗಡೆ ಆಗುತ್ತಿದೆ. ಇಂದು (ಜುಲೈ 23) ರಾತ್ರಿಯೇ ಹಲವಾರು ಕಡೆ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಪವನ್ ಕಲ್ಯಾಣ್ ಡಿಸಿಎಂ ಆದ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದಾಗಿದೆ. ಚಿತ್ರೀಕರಣ ಶುರುವಾಗಿ ಆರು ವರ್ಷಗಳ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ನಾಯಕ ನಟನಾಗಿ ಪವನ್ ನಟಿಸಿದ್ದಾರೆ. ಹಾಗೆಂದು ಅವರು ಕೇವಲ ನಾಯಕ ನಟನ ಪಾತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಇನ್ನೂ ಒಂದು ಜವಾಬ್ದಾರಿಯನ್ನು ಪವನ್, ಸಿನಿಮಾನಲ್ಲಿ ನಿರ್ವಹಿಸಿದ್ದಾರೆ.
ಪವನ್ ಕಲ್ಯಾಣ್, ನಟನೆಯ ಜೊತೆಗೆ ತಮ್ಮ ಮಾರ್ಷಲ್ ಆರ್ಟ್ ಪ್ರತಿಭೆಯಿಂದಲೂ ಜನಪ್ರಿಯರು. ಕೆಲವು ಸಮರ ಕಲೆಗಳನ್ನು ಕಲಿತಿರುವ ಪವನ್ ಕಲ್ಯಾಣ್, ಅವುಗಳನ್ನು ತಮ್ಮ ಸಿನಿಮಾಗಳಲ್ಲಿ ಬಳಸಿಕೊಂಡಿದ್ದಾರೆ. ‘ಖುಷಿ’, ಅವರೇ ನಿರ್ದೇಶಿಸಿದ ‘ಜಾನಿ’, ‘ಜಲ್ಸಾ’ ಇನ್ನೂ ಕೆಲವು ಸಿನಿಮಾಗಳಿಗೆ ಪವನ್ ಅವರೇ ಫೈಟ್ ಕೊರಿಯೋಗ್ರಫ್ ಸಹ ಮಾಡಿದ್ದು, ಆ ಫೈಟ್ಗಳಲ್ಲೆಲ್ಲ ಬಹಳ ಭಿನ್ನವಾಗಿ ಮೂಡಿ ಬಂದಿವೆ. ಆದರೆ ಹಲವಾರು ವರ್ಷಗಳಿಂದ ಪವನ್ ಫೈಟ್ ಕೊರಿಯೋಗ್ರಫಿ ಬಿಟ್ಟಿದ್ದರು. ಈಗ ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೆ ಮತ್ತೆ ಫೈಟ್ ಕೊರಿಯೋಗ್ರಫಿ ಮಾಡಿದ್ದಾರಂತೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ‘ರಾಜಕೀಯಕ್ಕೆ ಬಂದ ಮೇಲೆ ನಿಜವಾದ ಗುಂಡಾಗಳನ್ನು ರೌಡಿಗಳನ್ನು ಎದುರಿಸಿದ್ದೆನೆ. ಆದರೆ ಸಿನಿಮಾಗಳಲ್ಲಿ ಫೈಟ್ ಮಾಡುವುದನ್ನೇ ಮರೆತುಬಿಟ್ಟಿದ್ದೆ. ಹಾರಿ ವೈರಿಗಳನ್ನು ಹೊಡೆಯುವುದು ಕಷ್ಟವಾಗಿಬಿಟ್ಟಿತ್ತು. ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕಾಗಿ ನಾನು ಮತ್ತೆ ಮಾರ್ಷಲ್ ಆರ್ಟ್ಸ್ ತರಬೇತಿ ತೆಗೆದುಕೊಂಡು ಫೈಟ್ ದೃಶ್ಯಗಳಲ್ಲಿ ಪಾಲ್ಗೊಂಡೆ’ ಎಂದಿದ್ದಾರೆ.‘
ಇದನ್ನೂ ಓದಿ:ನಟನೆಯನ್ನು ಬಹುತೇಕ ತ್ಯಜಿಸಿದ ಪವನ್ ಕಲ್ಯಾಣ್; ದಿಟ್ಟ ನಿರ್ಧಾರ ಘೋಷಿಸಿದ ನಟ
ಮಾತು ಮುಂದುವರೆಸಿ, ‘ಸಿನಿಮಾದ ಕೊನೆಯ 18 ನಿಮಿಷ ಅತ್ಯಂತ ಮಹತ್ವವಾದುದು. ಆ 18 ನಿಮಿಷಗಳ ಫೈಟ್ ದೃಶ್ಯಗಳನ್ನು ನಾನು ಕೊರಿಯೋಗ್ರಾಫ್ ಮಾಡಿದ್ದೇನೆ. ಬಹಳ ವರ್ಷಗಳ ಬಳಿಕ ಫೈಟ್ ದೃಶ್ಯಗಳನ್ನು ನಾನು ಕೊರಿಯೋಗ್ರಫಿ ಮಾಡಿದ್ದೇನೆ. ಆ ಕೊನೆಯ 18 ನಿಮಿಷ ಸಿನಿಮಾಕ್ಕೆ ಬಹಳ ಮಹತ್ವವಾದುದು, ಆ 18 ನಿಮಿಷ ಖಂಡಿತ ನಿಮಗೆ ನೆನಪಿನಲ್ಲಿ ಉಳಿಯಲಿದೆ’ ಎಂದಿದ್ದಾರೆ ಪವನ್ ಕಲ್ಯಾಣ್.
‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಕ್ರಿಶ್ ನಿರ್ದೇಶನ ಮಾಡುವವರಿದ್ದರು. ಸಿನಿಮಾ ಚಿತ್ರೀಕರಣ ತಡವಾದ ಕಾರಣ ಅವರು ಸಿನಿಮಾದಿಂದ ಹೊರ ನಡೆದರು. ಬಳಿಕ ನಿರ್ಮಾಪಕ ಎಎಂ ರತ್ನಮ್ ಪುತ್ರ ಎಎಂ ಜ್ಯೋತಿ ಕೃಷ್ಣ ಅವರು ಸಿನಿಮಾ ನಿರ್ದೇಶನ ಮಾಡಿ ಸಿನಿಮಾ ಪೂರ್ಣಗೊಳಿಸಿದರು. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




