Vakeel Saab: ವಕೀಲ್ ಸಾಬ್ ಚಿತ್ರಕ್ಕೆ ವಿಘ್ನ! ಪವನ್ ಕಲ್ಯಾಣ್ ಅಭಿಮಾನಿಗಳ ಆಸೆಗೆ ತಣ್ಣೀರು ಎರಚುತ್ತಾ ಕೊರೊನಾ?
Pawan Kalyan: ತೆಲಂಗಾಣದಲ್ಲಿ ಹೈಕೋರ್ಟ್ ನೀಡಿದ ಎಚ್ಚರಿಕೆ ಮೇರೆಗೆ ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡರೆ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ‘ವಕೀಲ್ ಸಾಬ್’ ಚಿತ್ರಕ್ಕೆ ದೊಡ್ಡ ನಷ್ಟ ಆಗಲಿದೆ.
ನಟ ಪವನ್ ಕಲ್ಯಾಣ್ ಅವರಿಗೆ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಯಾವುದೇ ಸಿನಿಮಾ ರಿಲೀಸ್ ಆದರೂ ಫಸ್ಟ್ ಡೇ ಫಸ್ಟ್ ಶೋ ನೋಡಲು ಫ್ಯಾನ್ಸ್ ಮುಗಿಬೀಳುತ್ತಾರೆ. ಈಗ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರ ಬಿಡುಗಡೆ ಆದರೂ ಅಂಥದ್ದೇ ವಾತಾವರಣ ನಿರ್ಮಾಣ ಆಗಲಿದೆ. ಆದರೆ ಅದಕ್ಕೂ ಮುನ್ನ ಚಿತ್ರತಂಡಕ್ಕೆ ಒಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕೊರೊನಾ ವೈರಸ್ ಎರಡನೇ ಅಲೆ ಕಾರಣದಿಂದ ವಕೀಲ್ ಸಾಬ್ ಹವಾ ಮಂಕಾಗುವ ಲಕ್ಷಣ ಗೋಚರಿಸುತ್ತಿದೆ.
ಕೊರೊನಾ ವೈರಸ್ ಲಸಿಕೆ ಬಂದ ನಂತರವೂ ಈ ಮಹಾಮಾರಿಯ ಕಾಟ ಕಮ್ಮಿ ಆಗಿಲ್ಲ. ಕೊವಿಡ್ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಎಲ್ಲ ರಾಜ್ಯಗಳಲ್ಲೂ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚು ಜನರು ಗುಂಪು ಸೇರುವಂತಹ ಸಿನಿಮಾ ಥಿಯೇಟರ್, ಬಾರ್, ಪಬ್, ಈಜುಕೊಳಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಚಿತ್ರಮಂದಿಗಳು ಬಂದ್ ಆಗಿವೆ. ತೆಲಂಗಾಣದಲ್ಲಿ ಈ ಬಗ್ಗೆ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ತೆಲಂಗಾಣ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ತೆಲಂಗಾಣದಲ್ಲಿ ಹೈಕೋರ್ಟ್ ನೀಡಿದ ಎಚ್ಚರಿಕೆ ಮೇರೆಗೆ ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡರೆ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಬರುತ್ತದೆ. ಶೇ.50ರಷ್ಟು ಆಸನ ಮಿತಿ ಅಥವಾ ಸಂಪೂರ್ಣ ಚಿತ್ರಮಂದಿಗಳನ್ನು ಬಂದ್ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಇಂಥ ಪರಿಸ್ಥಿತಿ ಬಂದರೆ ವಕೀಲ್ ಸಾಬ್ ಚಿತ್ರಕ್ಕೆ ದೊಡ್ಡ ನಷ್ಟ ಆಗಲಿದೆ. ಏ.9ರಂದು ವಕೀಲ್ ಸಾಬ್ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ.
‘ಪವರ್ ಸ್ಟಾರ್’ ಪವನ್ ಕಲ್ಯಾಣ್ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ತೆಲಂಗಾಣದ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿತ್ತರಿಸಲಾಗಿತ್ತು. ಆ ವೇಳೆ ಟ್ರೇಲರ್ ನೋಡಲು ಪವನ್ ಕಲ್ಯಾಣ್ ಅಭಿಮಾನಿಗಳು ಬಿಗಿ ಬಿದ್ದಿದ್ದರು. ಯಾವುದೇ ಕೊವಿಡ್ ನಿಯಮಗಳನ್ನು ಪಾಲಿಸದೇ ನೂಕುನುಗ್ಗಲು ಉಂಟಾಗಿತ್ತು. ಚಿತ್ರಮಂದಿರದ ಗಾಜುಗಳು ಒಡೆದುಹೋಗುವ ಮಟ್ಟಕ್ಕೆ ಪವನ್ ಕಲ್ಯಾಣ್ ಫ್ಯಾನ್ಸ್ ವರ್ತಿಸಿದ್ದರು.
ಇದನ್ನೆಲ್ಲ ಗಮನಿಸಿದರೆ ವಕೀಲ್ ಸಾಬ್ ಮೇಲೆ ಅಭಿಮಾನಿಗಳಿಗೆ ಎಷ್ಟು ನಿರೀಕ್ಷೆ ಇದೆ ಎಂಬುದು ಗೊತ್ತಾಗುತ್ತದೆ. ಆದರೆ ಕೊವಿಡ್ ಎರಡನೇ ಅಲೆ ತಡೆಯಲು ತೆಲಂಗಾಣ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿರುವುದರಿಂದ ವಕೀಲ್ ಸಾಬ್ ವ್ಯವಹಾರಕ್ಕೆ ತೊಂದರೆ ಆಗುವುದನ್ನು ತಳ್ಳಿಹಾಕುವಂತಿಲ್ಲ. ಇನ್ನು, ಕರ್ನಾಟಕದಲ್ಲಿ ಏ.7ರವರೆಗೆ ಮಾತ್ರ ಹೌಸ್ಫುಲ್ ಪ್ರದರ್ಶನಕ್ಕೆ ಅವಕಾಶ ಇದೆ. ಏ.8ರಿಂದ ಹೊಸ ನಿಯಮಗಳು ಜಾರಿಯಾದರೆ ಶೇ.50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಬೇಕಾಗುತ್ತದೆ. ಇಂಥ ವಾತಾವರಣದಲ್ಲಿ ವಕೀಲ್ ಸಾಬ್ಗೆ ತೀವ್ರ ನಷ್ಟ ಆಗಲಿದೆ.
ಇದನ್ನೂ ಓದಿ: Roberrt: ರಾಬರ್ಟ್ ಎತ್ತಂಗಡಿ ಮಾಡಿಸಲು ಬಂದ ಪವನ್ ಕಲ್ಯಾಣ್ ಸಿನಿಮಾಗೆ ದರ್ಶನ್ ಫ್ಯಾನ್ಸ್ ಕೊಟ್ರು ಸಖತ್ ಡಿಚ್ಚಿ!
Are You A Virgin ಎಂದು ಕೇಳಿದ್ರು ನಟ ಪವನ್ ಕಲ್ಯಾಣ್!
(Pawan Kalyan starrer Vakeel Saab film may face difficulty in box office due to covid guidelines)