20 ವರ್ಷಗಳ ಬಳಿಕ ನಟನೆಗೆ ಮರಳಿದ ಪವನ್ ಕಲ್ಯಾಣ್ ಮಾಜಿ ಪತ್ನಿ
Renu Desai: ಪವನ್ ಕಲ್ಯಾಣ್ರ ಮಾಜಿ ಪತ್ನಿ ರೇಣು ದೇಸಾಯಿ ಬರೋಬ್ಬರಿ 20 ವರ್ಷಗಳ ಬಳಿಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಸಿನಿಮಾ ಯಾವುದು? ಪಾತ್ರವೇನು?
ಒಂದು ಕಾಲದಲ್ಲ ಜನಪ್ರಿಯ ನಟಿಯಾಗಿದ್ದ ರೇಣು ದೇಸಾಯಿ (Renu Desai) ಬರೋಬ್ಬರಿ 20 ವರ್ಷಗಳ ಬಳಿಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಎತ್ತರಕ್ಕೆ ಬೆಳೆಯುವ ಎಲ್ಲ ಅವಕಾಶಗಳು ಇದ್ದಾಗಲೇ ಪ್ರೀತಿ-ಮದುವೆಯ ಕಾರಣಕ್ಕೆ ಚಿತ್ರರಂಗದಿಂದ ಹಿಂದೆ ಸರಿದಿದ್ದ ರೇಣು ದೇಸಾಯಿ ಬರೋಬ್ಬರಿ 20 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯಬೇಕಾಯ್ತು. ಇದೀಗ ರೇಣು ದೇಸಾಯಿ ಚಿತ್ರರಂಗಕ್ಕೆ ಮರಳಿದ್ದಾರೆ.
2000 ರಲ್ಲಿ ‘ಬದ್ರಿ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರೇಣು ದೇಸಾಯಿ ಅದೇ ವರ್ಷ ಪ್ರಭುದೇವಾ, ಪಾರ್ತಿಬನ್ ಜೊತೆಗೆ ತಮಿಳಿನ ಸಿನಿಮಾ ಒಂದರಲ್ಲಿ ನಟಿಸಿದರು. ಆದರೆ ‘ಬದ್ರಿ’ ಸಿನಿಮಾದ ಸಮಯದಲ್ಲಿ ಆ ಸಿನಿಮಾದ ನಾಯಕ ಪವನ್ ಕಲ್ಯಾಣ್ ಜೊತೆಗೆ ಪ್ರೀತಿಯಲ್ಲಿ ಬಿದ್ದರು. ಅದಾದ ಬಳಿಕ 2003ರಲ್ಲಿ ಪವನ್ ಕಲ್ಯಾಣ್ ನಿರ್ದೇಶನ ಮಾಡಿದ ‘ಜಾನಿ’ ಸಿನಿಮಾದಲ್ಲಿ ನಟಿಸಿದರು. ಅದೇ ಅವರ ಕೊನೆಯ ಸಿನಿಮಾ.
ಇದೀಗ ರವಿತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾದಲ್ಲಿ ಪ್ರಖ್ಯಾತ ಸಾಮಾಜಿಕ ಹೋರಾಟಗಾರ್ತಿ ಹೇಮಲತಾ ಲವಣಂ ಪಾತ್ರದಲ್ಲಿ ನಟಿಸಿದ್ದಾರೆ. ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾವು ಅಕ್ಟೋಬರ್ 20ರಂದು ತೆರೆಗೆ ಬರಲಿದ್ದು, ಇದು ರವಿತೇಜ ಅವರು ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ರೇಣು ದೇಸಾಯಿ ನಟಿಸಿರುವ ಹೇಮಲತಾ ಲವಣಂ ಅವಿಭಜಿತ ಆಂಧ್ರ ಪ್ರದೇಶದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ್ತಿ. ತಮ್ಮ ಪತಿ ಲವಣಂ ಜೊತೆ ಸೇರಿ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಿದ ಮಹಿಳೆ. ಧೀಮಂತ ಮಹಿಳೆಯ ಪಾತ್ರದ ಮೂಲಕ ರೇಣು ದೇಸಾಯಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಹರಿಹಾಯ್ದ ಮಾಜಿ ಪತ್ನಿ ರೇಣು ದೇಸಾಯಿ
2003 ರಲ್ಲಿ ‘ಜಾನಿ’ ಸಿನಿಮಾದಲ್ಲಿ ನಟಿಸಿದ ರೇಣು ದೇಸಾಯಿ ಆ ಬಳಿಕ ಪವನ್ ಕಲ್ಯಾಣ್ ಜೊತೆ ಪ್ರೇಮ ಸಂಬಂಧದಲ್ಲಿದ್ದರು. ಪವನ್ ಕಲ್ಯಾಣ್ ಅದಾಗಲೇ ವಿವಾಹವಾಗಿತ್ತು, ಅವರಿಗೆ ವಿಚ್ಛೇದನ ಸಹ ಲಭಿಸಿರಲಿಲ್ಲ. ಆದರೂ ರೇಣು, ಪವನ್ ಜೊತೆ ಸಂಸಾರ ಬೆಳೆಸಿದ್ದಲ್ಲದೆ ಗಂಡು ಮಗುವಿಗೆ ಜನ್ಮವಿತ್ತರು. ಆ ಬಳಿಕ 2009ರಲ್ಲಿ ಪವನ್ ಕಲ್ಯಾಣ್ ಅನ್ನು ವಿವಾಹವಾದರು. 2010ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. 2011 ರಲ್ಲಿ ಪವನ್ ಕಲ್ಯಾಣ್ ಜೊತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 2012ರಲ್ಲಿ ಅಧಿಕೃತವಾಗಿ ಈ ದಂಪತಿ ದೂರಾದರು.
ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಮೂದಲಿಕೆ, ಟ್ರೋಲಿಂಗ್, ಟೀಕೆಗಳಿಗೆ ಗುರಿಯಾಗಿರುವ ರೇಣು ದೇಸಾಯಿ ಇತ್ತೀಚೆಗೆ ಧೈರ್ಯವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ರೇಣು ದೇಸಾಯಿ ಮತ್ತೊಬ್ಬರನ್ನು ಮದುವೆಯಾಗಲು ಸಹ ಪವನ್ ಅಭಿಮಾನಿಗಳು ವಿರೋಧ ವ್ಯಕ್ತಪಡಿದ್ದರು. ತೀವ್ರ ಆನ್ಲೈನ್ ಟ್ರೋಲಿಂಗ್ಗೆ ಒಳಗಾಗಿದ್ದ ರೇಣು, ಕೊನೆಗೂ ಧೈರ್ಯ ಮಾಡಿ ನಟನೆಗೆ ಮರಳಿದ್ದಾರೆ.
2003ರ ‘ಜಾನಿ’ ಸಿನಿಮಾದಲ್ಲಿ ನಟಿಸಿದ ಬಳಿಕ ಪವನ್ ಕಲ್ಯಾಣ್ರ ‘ಖುಷಿ’ ‘ಬಾಲು’ ಸಿನಿಮಾಗಳಿಗೆ ಎಡಿಟರ್ ಆಗಿ ಕೆಲಸ ಮಾಡಿದರು. ಅದರ ಜೊತೆಗೆ ಪವನ್ರ ಇನ್ನೂ ಕೆಲವು ಸಿನಿಮಾಗಳಿಗೆ ಫ್ಯಾಷನ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಪವನ್ರಿಂದ ದೂರಾದ ಬಳಿಕ 2014ರಲ್ಲಿ ಮರಾಠಿ ಸಿನಿಮಾ ‘ಇಷ್ಕ್ ವಾಲಾ ಲವ್’ ಸಿನಿಮಾ ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡಿದ್ದರು. 2012ರಲ್ಲಿ ಮತ್ತೊಂದು ಮರಾಠಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 2021ರಲ್ಲಿ ಧಾರಾವಾಹಿಯೊಂದರಲ್ಲಿ ದೇವಿ ಪಾರ್ವತಿಯ ಪಾತ್ರದಲ್ಲಿ ನಟಿಸಿದ್ದರು. ಅದ ಅತಿಥಿ ಪಾತ್ರ ಮಾತ್ರವೇ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ