ನಟನೆ ಹೇಳಿಕೊಟ್ಟ ಗುರುವಿಗೆ ದುಬಾರಿ ಉಡುಗೊರೆ ನೀಡಿದ ನಟ ಪ್ರಭಾಸ್
Prabhas: ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಬೆಳೆದಿರುವ ಪ್ರಭಾಸ್, ತಮಗೆ ನಟನೆಯ ಮೊದಲ ಪಾಠಗಳನ್ನು ಹೇಳಿಕೊಟ್ಟ ಗುರುವನ್ನು ಇತ್ತೀಚೆಗೆ ಭೇಟಿಯಾಗಿ ದುಬಾರಿ ಉಡುಗೊರೆಯೊಂದನ್ನು ಗುರುಗಳಿಗೆ ನೀಡಿದ್ದಾರೆ.

ಪ್ರಭಾಸ್ (Prabhas) ಇಂದು ಪ್ಯಾನ್ ವರ್ಲ್ಡ್ ನಟ. ‘ಬಾಹುಬಲಿ’ ಬಳಿಕ ಪ್ರಭಾಸ್ರ ಜನಪ್ರಿಯತೆ, ಬೇಡಿಕೆ ಆಗಸ ಮುಟ್ಟಿದೆ. ಅವರ ಸಿನಿಮಾಕ್ಕಾಗಿ ಕೋಟ್ಯಂಟತರ ಅಭಿಮಾನಿಗಳು ಕಾಯುತ್ತಾರೆ, ಅವರ ಡೇಟ್ಸ್ ಸಿಕ್ಕರೆ ಸಾಕೆಂದು ನಿರ್ಮಾಪಕರು ಸಾಲುಗಟ್ಟಿದ್ದಾರೆ. ಒಮ್ಮೆ ಪ್ರಭಾಸ್ಗೆ ಆಕ್ಷನ್-ಕಟ್ ಹೇಳುವ ಕನಸಿಟ್ಟುಕೊಂಡಿರುವ ಹಲವು ನಿರ್ದೇಶಕರು ಭಾರತದ ಹಲವು ಚಿತ್ರರಂಗದಲ್ಲಿದ್ದಾರೆ. ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿರುವ ಪ್ರಭಾಸ್, ವಿನಯತೆ ಮೀರಿಲ್ಲ, ತಾವು ಬಳೆದು ಬಂದ ದಾರಿಯನ್ನು ಮರೆತಿಲ್ಲ. ನಟನೆ ಪ್ರಾರಂಭಿಸಿದಾಗ ತಮಗೆ ದಾರಿ ತೋರಿ ಧೈರ್ಯ ತುಂಬಿದ ಗುರುವಿಗೆ ಪ್ರಭಾಸ್ ದುಬಾರಿ ಉಡುಗೊರೆಯೊಂದನ್ನು ಇತ್ತೀಚೆಗೆ ನೀಡಿದ್ದಾರೆ.
ಬರಹಗಾರ ಹಾಗೂ ನಟರಿಗೆ ತರಬೇತಿ ನೀಡುವ ಸತ್ಯಾನಂದ, ಪ್ರಭಾಸ್ಗೆ ಗುರು, ಮೊದಲ ಸಿನಿಮಾ ‘ಈಶ್ವರ್’ನಲ್ಲಿ ನಟಿಸುವ ಮುನ್ನ ಪ್ರಭಾಸ್, ಇವರ ಬಳಿಯೇ ನಟನೆಯ ಪಟ್ಟುಗಳನ್ನು ಕಲಿತಿದ್ದರು. ನಟನೆ ಹೇಳಿಕೊಟ್ಟ ಗುರು ಸತ್ಯಾನಂದ್ ಅವರನ್ನು ಇತ್ತೀಚೆಗಷ್ಟೆ ಭೇಟಿ ಆಗಿದ್ದ ನಟ ಪ್ರಭಾಸ್, ಗುರುಗಳೊಟ್ಟಿಗೆ ಆತ್ಮೀಯವಾಗಿ ಸಮಯ ಕಳೆವ ಜೊತೆಗೆ ಅವರಿಗೆ ಅತ್ಯಂತ ದುಬಾರಿ ಉಡುಗೊರೆಯೊಂದನ್ನು ಸಹ ನೀಡಿದ್ದಾರೆ.
ಗುರು ಸತ್ಯಾನಂದ್ ಅವರನ್ನು ಸೋಫಾ ಮೇಲೆ ಕೂಡಿಸಿ ಅವರ ಪಟ್ಟಕದಲ್ಲಿ ಕೂತು ಆತ್ಮೀಯವಾಗಿ ‘ಗುರುಗಾರು’ ಎಂದು ಮಾತನಾಡಿರುವ ಪ್ರಭಾಸ್, ಸತ್ಯಾನಂದ್ ಅವರಿಗೆ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರೇ ತಮ್ಮ ಗುರುವಿಗೆ ಗಡಿಯಾರವನ್ನು ತೊಡಿಸಿದ್ದಾರೆ. ವಿಡಿಯೋನಲ್ಲಿ ಅವರಿಬ್ಬರು ಮಾತನಾಡಿಕೊಂಡಿರುವಂತೆ ಅದು ಅತ್ಯಂತ ದುಬಾರಿಯಾದ ಚಿನ್ನದ ಕೈಗಡಿಯಾರವಂತೆ. ‘ನಾನು ನೀಲಿ ಬಣ್ಣದ ಡಯಲ್ ನೋಡಿದ್ದೆ. ಆದರೆ ಅದು ನಿಮಗೆ ಇಷ್ಟ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಬಂತು, ನಿಮ್ಮ ಮಗಳೊಟ್ಟಿಗೆ ಮಾತನಾಡಿದಾಗ ನಿಮಗೆ ಬಿಳಿ ಇಷ್ಟ ಎಂಬುದು ಗೊತ್ತಾಯ್ತು. ಹಾಗಾಗಿ ಬಿಳಿ ಬಣ್ಣದ ಡಯಲ್ ಇರುವ ವಾಚು ಖರೀದಿಸಿದೆ’ ಎಂದು ಗುರುವಿನ ಬಳಿ ಹೇಳಿದ್ದಾರೆ ಪ್ರಭಾಸ್.
ಇದನ್ನೂ ಓದಿ:ವಿಜಯ್, ರಣ್ಬೀರ್, ಪ್ರಭಾಸ್ ಬಳಿಕ ಮತ್ತೊಬ್ಬ ಸ್ಟಾರ್ ಜೊತೆ ಸಂದೀಪ್ ಸಿನಿಮಾ
ಶಿಷ್ಯ ನೀಡಿರುವ ಉಡುಗೊರೆ ಕಂಡು ಸತ್ಯಾನಂದ್ ಸಖತ್ ಖುಷಿ ಪಟ್ಟಿದ್ದಾರೆ. ‘ಚಿನ್ನದ ವಾಚು ಕೊಟ್ಟಿದ್ದೀಯ. ಯಾರಾದರೂ ಚೆನ್ನಾಗಿ ಡ್ಯಾನ್ಸ್ ಮಾಡಿದರೆ, ಒಳ್ಳೆಯ ಪ್ರದರ್ಶನ ಕೊಟ್ಟರೆ, ರಾಜರ ರೀತಿ, ಈ ವಾಚನ್ನು ತೆಗೆದು ತಗೋ ಎಂದು ಇನಾಮು ಎಂದು ಬಿಸಾಡಬಹುದು ಅಲ್ಲವೇ’ ಎಂದು ಜೋಕ್ ಮಾಡಿ ನಕ್ಕಿದ್ದಾರೆ ಸತ್ಯಾನಂದ್.
‘ಗುರುಗಳೇ ಉಡುಗೊರೆ ಇಷ್ಟವಾಯಿತಾ?’ ಎಂದು ಪದೇ ಪದೇ ಪ್ರಭಾಸ್ ಸತ್ಯಾನಂದ್ ಅವರನ್ನು ಕೇಳಿದ್ದಾರೆ. ಅದಕ್ಕೆ ಸತ್ಯಾನಂದ್ ಖಂಡಿತ ನನಗೆ ಬಹಳ ಇಷ್ಟವಾಯಿತು ಎಂದಿದ್ದಾರೆ. ಪ್ರಭಾಸ್ ತಮ್ಮ ಗುರುವಿಗೆ ಉಡುಗೊರೆ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪ್ರಭಾಸ್ರ ಸರಳತೆಗೆ, ಗುರು ಭಕ್ತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಇದೇ ತಿಂಗಳು 22ಕ್ಕೆ ಬಿಡುಗಡೆ ಆಗಲಿದೆ. ಅದರ ಬಳಿಕ ‘ಕಲ್ಕಿ’ ಸಿನಿಮಾ ತೆರೆಗೆ ಬರಲಿದೆ. ಇದೀಗ ಮಾರುತಿ ನಿರ್ದೇಶನದ ಹೊಸ ಹಾರರ್ ಸಿನಿಮಾದಲ್ಲಿ ಪ್ರಭಾಸ್ ನಟಿಸಲು ಆರಂಭಿಸಿದ್ದಾರೆ. ಆ ಸಿನಿಮಾ 2024ರ ಅಂತ್ಯದಲ್ಲಿ ಬಿಡುಗಡೆ ಆಗಲಿದೆ. ಅದರ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಕ ‘ಸ್ಪಿರಿಟ್’ ಸಿನಿಮಾ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Tue, 5 December 23