
ಭಾರಿ ನಿರೀಕ್ಷೆ ಮೂಡಿಸಿದ್ದ ‘ಸಲಾರ್’ ಸಿನಿಮಾ (Salaar Movie) ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿದೆ. ಅಂದುಕೊಂಡ ರೀತಿಯೇ ಈ ಚಿತ್ರಕ್ಕೆ ಜನಮೆಚ್ಚುಗೆ ಸಿಗುತ್ತಿದೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ನಡುವೆಯೂ ಒಳ್ಳೆಯ ಒಪನಿಂಗ್ ಪಡೆದುಕೊಂಡಿತು. ಪ್ರಭಾಸ್ (Prabhas) ಅವರಿಗೆ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿದೆ. ಪ್ರಶಾಂತ್ ನೀಲ್ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಎರಡು ದಿನಕ್ಕೆ ‘ಸಲಾರ್’ ಕಲೆಕ್ಷನ್ (Salaar Box Office Collection) 145 ಕೋಟಿ ರೂಪಾಯಿ ಆಗಿದೆ. ಮೂರನೇ ದಿನ ಕೂಡ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಅನೇಕ ಕಲಾವಿದರು ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿರುವ ‘ಸಲಾರ್’ ಸಿನಿಮಾಗೆ ಎಲ್ಲ ಕಡೆಗಳಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿದೆ.
ಇದನ್ನೂ ಓದಿ: ‘ಉಗ್ರಂ’, ‘ಕೆಜಿಎಫ್’ ಚಿತ್ರಗಳನ್ನು ನೆನಪಿಸಿದ ‘ಸಲಾರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ (ಡಿಸೆಂಬರ್ 22) ‘ಸಲಾರ್’ ಗಳಿಸಿದ್ದು ಬರೋಬ್ಬರಿ 90 ಕೋಟಿ ರೂಪಾಯಿ. ಎರಡನೇ ದಿನವಾದ ಶನಿವಾರ (ಡಿಸೆಂಬರ್ 23) ಈ ಚಿತ್ರಕ್ಕೆ 55 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿ ಆಗಿದೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಪ್ರಭಾಸ್ ಅಭಿಮಾನಿ ಸಾವು; ‘ಸಲಾರ್’ ಬಿಡುಗಡೆ ಖುಷಿಯ ನಡುವೆ ಕಹಿ ಸುದ್ದಿ
ಕ್ರಿಸ್ಮಸ್ ರಜೆಯ ಲಾಭ ಪಡೆಯಲು ‘ಸಲಾರ್’ ಸಿನಿಮಾ ಡಿ.22ರಂದು ಬಿಡುಗಡೆ ಆಯಿತು. ಅದೇ ರೀತಿ, ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿ.21ರಂದು ತೆರೆಕಂಡಿತು. ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ಸಮಯದಲ್ಲಿ ಬಿಡುಗಡೆ ಆಗಿರುವುದರಿಂದ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಉಂಟಾಗಿದೆ. ‘ರಾಧೆ ಶ್ಯಾಮ್’, ‘ಸಾಹೋ’, ‘ಆದಿಪುರುಷ್’ ಸಿನಿಮಾಗಳಿಂದ ಸೋತಿದ್ದ ಪ್ರಭಾಸ್ ಅವರು ‘ಸಲಾರ್’ ಚಿತ್ರದಿಂದ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.