ಭಾರತದ ಅತ್ಯಂತ ದುಬಾರಿ ನಟಿಯಾದ ಪ್ರಿಯಾಂಕಾ ಚೋಪ್ರಾ, ಎಲ್ಲ ರಾಜಮೌಳಿ ಕೃಪೆ
Priyanka Chopra: ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿಯರು ಯಾರೆಂದರೆ ಬರುತ್ತಿದ್ದಿದ್ದು ಎರಡೇ ಹೆಸರು ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ. ಆದರೆ ಇವರಿಬ್ಬರನ್ನೂ ಹಿಂದೆ ತಳ್ಳಿರುವ ಪ್ರಿಯಾಂಕಾ ಚೋಪ್ರಾ, ಭಾರತದ ಯಾವ ನಟಿಯೂ ಪಡೆಯದಷ್ಟು ಸಂಭಾವನೆಯನ್ನು ತಮ್ಮ ಮುಂದಿನ ಸಿನಿಮಾಕ್ಕೆ ಪಡೆದಿದ್ದಾರೆ. ಎಲ್ಲವೂ ರಾಜಮೌಳಿ ಕೃಪೆ.

ಪ್ರಿಯಾಂಕಾ ಚೋಪ್ರಾ, ಬಾಲವುಡ್ ಅನ್ನು ತೊರೆದು ವರ್ಷಗಳೇ ಆಗಿವೆ. 2016 ರಲ್ಲಿ ಬಿಡುಗಡೆ ಆದ ‘ಜೈ ಗಂಗಾಜಲ್’ ಸಿನಿಮಾದ ಬಳಿಕ ‘ಬಾಲಿವುಡ್’ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿಲ್ಲ. ಅದಾದ ಬಳಿಕ ಎರಡು ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಅವು ಸಂಪೂರ್ಣವಾಗಿ ಹಿಂದಿ ಅಥವಾ ಬಾಲಿವುಡ್ ಸಿನಿಮಾಗಳಲ್ಲ. ಇದೀಗ ಹಲವು ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಭಾರತೀಯ ಸಿನಿಮಾಕ್ಕೆ ಮರಳಿದ್ದಾರೆ. ಆದರೆ ಅದೂ ಸಹ ಬಾಲಿವಡ್ ಸಿನಿಮಾ ಅಲ್ಲ. ವಿಶೇಷವೆಂದರೆ ನಟಿಸುತ್ತಿರುವ ಹೊಸ ಸಿನಿಮಾ ಮೂಲಕ ಪ್ರಿಯಾಂಕಾ ಚೋಪ್ರಾ, ಭಾರತದ ಅತ್ಯಂತ ದುಬಾರಿ ನಟಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಇದಕ್ಕೆಲ್ಲ ರಾಜಮೌಳಿ ಕಾರಣ.
ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮುಹೂರ್ತ ಕೆಲ ವಾರಗಳ ಹಿಂದಷ್ಟೆ ನಡೆದಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಈ ಸಿನಿಮಾ ಪ್ರಾಜೆಕ್ಟ್ ಕನಿಷ್ಟ ಎರಡು ವರ್ಷವಾದರೂ ನಡೆಯಲಿದ್ದು, ಪ್ರಿಯಾಂಕಾ ಹಾಗೂ ಮಹೇಶ್ ಬಾಬು ಎರಡು ವರ್ಷ ಸಮಯವನ್ನು ಈ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರಿಯಾಂಕಾ ಚೋಪ್ರಾಗೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆಯಂತೆ. ಭಾರತದ ಇನ್ಯಾವುದೇ ನಟಿ ಒಂದು ಸಿನಿಮಾಕ್ಕಾಗಿ ಇಷ್ಟು ದೊಡ್ಡ ಸಂಭಾವನೆಯನ್ನು ಪಡೆದಿದ್ದಿಲ್ಲ. ಇದೇ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ, ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಹೇಶ್ ಬಾಬು-ರಾಜಮೌಳಿ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಪೃಥ್ವಿರಾಜ್
ರಾಜಮೌಳಿಯ ಈ ಹಿಂದಿನ ಸಿನಿಮಾ ‘ಆರ್ಆರ್ಆರ್’ನಲ್ಲಿ ನಟಿಸಿದ್ದ ಆಲಿಯಾ ಭಟ್ ಬರೋಬ್ಬರಿ 9 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಕೇವಲ ಕೆಲವೇ ದೃಶ್ಯಗಳು ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲು ಆಲಿಯಾ ಭಟ್ಗೆ 9 ಕೋಟಿ ನೀಡಲಾಗಿತ್ತು. ಆಗ ಆಲಿಯಾ ಭಟ್, ಭಾರತದ ದುಬಾರಿ ನಟಿ ಎನಿಸಿಕೊಂಡಿದ್ದರು. ಈಗ ಪ್ರಿಯಾಂಕಾ ಎಲ್ಲ ದಾಖಲೆಗಳನ್ನು ಒಂದೇ ಬಾರಿಗೆ ಮುರಿದು ಬಿಸಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಸಹ ಪ್ರತಿ ಸಿನಿಮಾಕ್ಕೆ 8 ಅಥವಾ ಒಂಬತ್ತು ಕೋಟಿ ಸಂಭಾವನೆ ಪಡೆಯುತ್ತಾರಂತೆ. ಆಲಿಯಾ ಭಟ್ ಸಹ 9 ಅಥವಾ 10 ಕೋಟಿ ಪಡೆಯುತ್ತಾರೆ. ಆದರೆ ಪ್ರಿಯಾಂಕಾ ಅವರೆಲ್ಲರಿಗಿಂತಲೂ ದುಪ್ಪಟ್ಟು ಮೊತ್ತವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ.
ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಸಿನಿಮಾದ ಒಟ್ಟು ಬಜೆಟ್ನ 50% ಹಣ ನಟ-ನಟಿ, ತಂತ್ರಜ್ಞರ ಸಂಭಾವನೆಗೆ ಖರ್ಚು ಮಾಡಲಾಗುತ್ತಿದೆ. ಇದೇ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಮಹೇಶ್ ಬಾಬುಗೆ 100 ಕೋಟಿಗೂ ಹೆಚ್ಚು ಹಣವನ್ನು ಸಂಭಾವನೆಯಾಗಿ ನೀಡಲಾಗುತ್ತಿದೆ. ಮಹೇಶ್ ಬಾಬು ಅಷ್ಟೆ ನಿರ್ದೇಶಕ ರಾಜಮೌಳಿಗೂ ಸಹ 100 ಕೋಟಿಗೂ ಹೆಚ್ಚು ಮೊತ್ತದ ಸಂಭಾವನೆ ನೀಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ