ಬೆಳ್ಳಿ ತೆರೆಯಲ್ಲಿ 29ರ ಸಂಭ್ರಮ, ಸಾಧನೆಗೆ ಸಾಥ್ ಕೊಟ್ಟವರಿಗೆ ಕಿಚ್ಚನ ಥ್ಯಾಂಕ್ಸ್
Kichcha Sudeep: ಕನ್ನಡ ಚಿತ್ರರಂಗದ ಮಾತ್ರವೇ ಅಲ್ಲದೆ ಭಾರತೀಯ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ಕಿಚ್ಚ ಸುದೀಪ್, ಚಿತ್ರರಂಗದ ಈ ಸುಂದರ ಪಯಣ ಆರಂಭಿಸಿ 29 ವರ್ಷಗಳಾಗಿವೆ. 29 ವರ್ಷದಲ್ಲಿ ತಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಸುದೀಪ್ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್, ಕನ್ನಡ ಚಿತ್ರರಂಗದ ಮಾತ್ರವಲ್ಲ ಭಾರತೀಯ ಚಿತ್ರರಂಗದ ಅಪರೂಪದ ನಟ. ಬಹುಮುಖ ಪ್ರತಿಭೆಯ ಸುದೀಪ್ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿರುವುದು ನಟನೆಯಲ್ಲಿ. ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ, ಭಿನ್ನ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಜನರನ್ನು ರಂಜಿಸುತ್ತಲೇ ಬಂದಿರುವ ಸುದೀಪ್ ಅವರ ಸಿನಿಮಾ ಪಯಣಕ್ಕೆ ಇದೀಗ 29 ವರ್ಷ. ಇದೀಗ ಮೂರನೇ ದಶಕಕ್ಕೆ ಕಿಚ್ಚ ಸುದೀಪ್ ಕಾಲಿಟ್ಟಿದ್ದಾರೆ. ಈ ಅಪೂರ್ವ ಸಮಯದಲ್ಲಿ ತಮ್ಮ ಈ ಸಾಧನೆಗೆ ಪ್ರೋತ್ಸಾಹ ನೀಡಿದವರಿಗೆ, ಹಾರೈಸಿದವರಿಗೆ ಧನ್ಯವಾದ ಹೇಳಿದ್ದಾರೆ ಸುದೀಪ್.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಸುದೀಪ್, ‘ಈ ಅದ್ಭುತವಾದ ಪಯಣವನ್ನು ನಡೆಸುತ್ತಿರುವುದಕ್ಕೆ ನನ್ನಲ್ಲಿ ಕೃತಜ್ಞ ಭಾವನೆ ಇದೆ. ಪ್ರೇಕ್ಷಕರನ್ನು ರಂಜಿಸುವುದು, ಅಸಂಖ್ಯೆ ಜನರನ್ನು ಪ್ರತಿನಿಧಿಸುವ ಕತೆಗಳಿಗೆ ನಾನು ಪಾತ್ರವಾಗುವುದು ನನ್ನ ಪಾಲಿಗೆ ಅತ್ಯಂತ ಗೌರವದ ಕಾರ್ಯ. ನಿಮ್ಮಿಂದ ಸತತವಾಗಿ ಸಿಗುತ್ತಿರುವ ಈ ಅದ್ಭುತ ಪ್ರೀತಿ, ಪ್ರೋತ್ಸಾಹ ನನ್ನಲ್ಲಿ ಸ್ಪೂರ್ತಿ ತುಂಬುತ್ತಲೇ ಬರುತ್ತಿದೆ. ನನ್ನ ಈ ಕಾರ್ಯಕ್ಕೆ ಸಿಕ್ಕಿರುವ ಅಭಿಮಾನಿಗಳು ನನ್ನ ಪಾಲಿಗೆ ಐಶ್ವರ್ಯ. ನೀವುಗಳು ನೀಡುತ್ತಿರುವ ಈ ಬೆಂಬಲವೇ ವೃತ್ತಿಯಲ್ಲಿನ ಪ್ರತಿ ಸವಾಲನ್ನು ಎದುರಿಸುವ ಹುಮ್ಮಸ್ಸು ನೀಡುತ್ತದೆ. ಇದು ಎಷ್ಟು ಮಹತ್ವವಾದುದು ಎಂಬುದನ್ನು ವಿವರಿಸಲು ಸಹ ಅಸಾಧ್ಯ. ನನ್ನ ಹೃದಯಾಂತರಾಳದಿಂದ ಧನ್ಯವಾದವನ್ನು ಮಾತ್ರ ಹೇಳಬಲ್ಲೆ. ಈ ಅದ್ಭುತವಾದ ಪಯಣದಲ್ಲಿ ಜೊತೆಯಾಗಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ:ಬಿಗ್ ಬಾಸ್ ಮುಗಿಸಿದ ತ್ರಿವಿಕ್ರಮ್ಗೆ ‘ಸಿಸಿಎಲ್’ನಲ್ಲಿ ಇಲ್ಲ ಚಾನ್ಸ್ ? ಉತ್ತರಿಸಿದ ಸುದೀಪ್
ಸುದೀಪ್ ನಟಿಸಿದ ಮೊದಲ ಸಿನಿಮಾ ‘ತಾಯವ್ವ’ 1997 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ‘ಪ್ರತ್ಯರ್ಥ’ ಸಿನಿಮಾದಲ್ಲಿ ರಮೇಶ್ ಅರವಿಂದ್ ಜೊತೆಗೆ ಸುದೀಪ್ ನಟಿಸಿದರು. ಅದಾದ ಬಳಿಕ ಬಿಡುಗಡೆ ಆದ ‘ಸ್ಪರ್ಷ’ ಸಿನಿಮಾ ಮೂಲಕ ನಾಯಕ ನಟನಾದರು ಸುದೀಪ್, 2001 ರಲ್ಲಿ ಬಿಡುಗಡೆ ಆದ ‘ಹುಚ್ಚ’ ಸಿನಿಮಾ ಸುದೀಪ್ ಅವರನ್ನು ಕನ್ನಡ ಚಿತ್ರರಂಗದ ಭಾಗವನ್ನಾಗಿ ಮಾಡಿಬಿಟ್ಟಿತು. ‘ಹುಚ್ಚ’ ಸಿನಿಮಾದ ಬಳಿಕ ಸುದೀಪ್ ಹಿಂತಿರುಗಿ ನೋಡಿದ್ದೇ ಇಲ್ಲ. ಸುದೀಪ್ ವರ್ಷದಲ್ಲಿ 9, 10 ಸಿನಿಮಾಗಳಲ್ಲಿ ನಟಿಸಿದ ಉದಾಹರಣೆಯೂ ಇದೆ.
ಕಳೆದ 29 ವರ್ಷದಿಂದ ಒಮ್ಮೆಯೂ ಬೇಡಿಕೆ ಕಳೆದುಕೊಳ್ಳದೆ, ಒಂದರ ಮೇಲೊಂದು ಹಿಟ್, ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ ಕಿಚ್ಚ ಸುದೀಪ್. ಈ 29 ವರ್ಷಗಳಲ್ಲಿ ಹಲವು ನಟರು ಬಂದು ಮಿಂಚಿ ಮರೆಯಾಗಿ ಸಹ ಹೋಗಿದ್ದಾರೆ. ಆದರೆ ಸುದೀಪ್ ಹಾಗೆಯೇ ಉಳಿದುಕೊಂಡಿದ್ದಾರೆ ಇಂದಿಗೂ ಮಿಂಚುತ್ತಲೇ ಇದ್ದಾರೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇದೀಗ ‘ಬಿಲ್ಲ ರಂಗ ಭಾಷ’ ಮತ್ತು ಹೆಸರಿಡದ ಇನ್ನೊಂದು ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ