Priyanka Chopra: ‘ಮಗಳಿಗಾಗಿ ಕೆಲಸ ತೊರೆದು, ದೇಶ ಬಿಟ್ಟುಹೋಗಲು ಸಿದ್ಧ’: ಪ್ರಿಯಾಂಕಾ ಚೋಪ್ರಾ ಜೋನಸ್
Malti Marie Chopra Jonas: ಮಗಳ ಭವಿಷ್ಯಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರು ಯಾವುದೇ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಒಂದು ಕಾಲದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆದರೆ ಈಗ ಅವರು ಕೇವಲ ಹಾಲಿವುಡ್ (Hollywood) ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮದುವೆ, ಮಗು ಆದ ನಂತರವೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಕುಟುಂಬ ಮತ್ತು ವೃತ್ತಿಜೀವನವನ್ನು ಅವರು ಸಮನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿರುವ ಅವರು ಹಲವು ಕಡೆಗಳಲ್ಲಿ ಸುತ್ತಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ‘ಸಿಟಾಡೆಲ್’ ವೆಬ್ ಸರಣಿಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ‘ಲವ್ ಅಗೇನ್’ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಮಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಪುತ್ರಿ ಮಾಲ್ತಿ ಮೇರಿ ಚೋಪ್ರಾ ಜೋನಸ್ (Malti Marie Chopra Jonas) ಸಲುವಾಗಿ ಅವರು ಯಾವುದೇ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೂ ಸಿದ್ಧ ಎಂದು ಹೇಳಿದ್ದಾರೆ.
2022ರ ಜನವರಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಪಡೆದರು. ಮಗುವಿನ ಫೋಟೋವನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅಚ್ಚರಿ ಎಂದರೆ ಮಗಳ ಭವಿಷ್ಯಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರು ಯಾವುದೇ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಈ ಹಿಂದಿನ ಬಾಯ್ಫ್ರೆಂಡ್ಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು: ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾಗೆ ಈ ಗುಣ ಬಂದಿರುವುದು ಅವರ ತಂದೆ-ತಾಯಿಯಿಂದ. ಪ್ರಿಯಾಂಕಾ 17ನೇ ವಯಸ್ಸಿನಲ್ಲಿದ್ದಾಗ ಅವರ ತಂದೆ-ತಾಯಿ ಬರೇಲಿಯಲ್ಲಿ ಆಸ್ಪತ್ರೆ ನಡೆಸುತ್ತಿದ್ದರು. ಆದರೆ ಮಗಳ ಭವಿಷ್ಯಕ್ಕಾಗಿ ಅವರು ಎಲ್ಲವನ್ನೂ ತೊರೆದು ಮುಂಬೈಗೆ ಶಿಫ್ಟ್ ಆಗಿದ್ದರು. ಆ ಸಂದರ್ಭವನ್ನು ಪ್ರಿಯಾಂಕಾ ಚೋಪ್ರಾ ಅವರು ಈಗ ನೆನಪಿಸಿಕೊಂಡಿದ್ದಾರೆ. ತಮ್ಮ ಪೋಷಕರ ರೀತಿ ತಾವು ಕೂಡ ಮಗಳಿಗಾಗಿ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾಗೆ ‘ಮತ್ತೆ ಪ್ರೀತಿ’? ಗಂಡನ ಎದುರಲ್ಲೇ ಬೇರೆ ನಟನ ಜೊತೆ ಕಿಸ್
‘ಆ ಸಂದರ್ಭದಲ್ಲಿ ಅಪ್ಪ-ಅಮ್ಮನ ತ್ಯಾಗವನ್ನು ನಾನು ಹಗುರವಾಗಿ ತೆಗೆದುಕೊಂಡೆ. ಇದನ್ನೆಲ್ಲ ಪಾಲಕರು ಮಾಡಲೇಬೇಕು, ಅದು ಅವರ ಕೆಲಸ ಅಂತ ಭಾವಿಸಿದ್ದೆ. ನನಗೆ ನನ್ನ ಭವಿಷ್ಯ ಮುಖ್ಯವಾಗಿತ್ತು. ನಾನು ಒಂದು ಪುಸ್ತಕ ಬರೆಯುವವರೆಗೂ ಅವರ ತ್ಯಾಗದ ಬಗ್ಗೆ ನಾನು ಯೋಚಿಸಿರಲಿಲ್ಲ. ಈಗ ನನಗೆ 40 ವರ್ಷ ವಯಸ್ಸಾಗಿದೆ. ಮಗಳಿಗಾಗಿ ನನ್ನ ಕೆಲಸ ಬಿಟ್ಟು, ಬೇರೆ ದೇಶಕ್ಕೆ ಹೋಗಬೇಕಾದ ಪ್ರಸಂಗ ಬಂದರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.