ಹೆಚ್ಚು ಜಾಹೀರಾತು ತೋರಿಸಿದ್ದಕ್ಕೆ ದಂಡ ಕಟ್ಟಿದ ಪಿವಿಆರ್
PVR-Inox Multiplex: ಪಿವಿಆರ್-ಐನಾಕ್ಸ್ ಇನ್ನಿತರೆ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ನೋಡಲು ಹೋದ ಪ್ರೇಕ್ಷಕರಿಗೆ ಅನಗತ್ಯವಾಗಿ ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಕೆಲವೊಮ್ಮೆಯಂತೂ ಉದ್ದೇಶಪೂರ್ವಕವಾಗಿ 20-30 ನಿಮಿಷಗಳ ಕಾಲ ಜಾಹೀರಾತು ತೋರಿಸಲಾಗುತ್ತದೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಇದೇ ಕಾರಣಕ್ಕೆ ಪಿವಿಆರ್-ಐನಾಕ್ಸ್ ಮೇಲೆ ಕೇಸು ದಾಖಲಿಸಿ, ದಂಡ ಕಟ್ಟುವಂತೆ ಮಾಡಿದ್ದಾರೆ.

ಪಿವಿಆರ್, ಐನಾಕ್ಸ್ ಇನ್ನಿತರೆ ಮಲ್ಟಿಪ್ಲೆಕ್ಸ್ಗಳು ಸಿನಿಮಾಗಳ ಜೊತೆಗೆ ಭರಪೂರವಾಗಿ ಜಾಹೀರಾತುಗಳನ್ನು ಪ್ರೇಕ್ಷಕರಿಗೆ ತೋರಿಸುತ್ತವೆ. ಸಿನಿಮಾಗಳಿಂದ ಮಾತ್ರವಲ್ಲದೆ ಜಾಹೀರಾತು ಪ್ರದರ್ಶನದಿಂದ ಅಷ್ಟೆ ಮೊತ್ತದ ಲಾಭವನ್ನು ಈ ಮಲ್ಟಿಪ್ಲೆಕ್ಸ್ಗಳು ಪಡೆಯುತ್ತವೆ. ಮಲ್ಟಿಪ್ಲೆಕ್ಸ್ಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಜಾಹೀರಾತು ಪ್ರದರ್ಶಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ ಆದರೆ ಈ ಕಿರಿಕಿರಿಯಂತೂ ನಿಂತಿಲ್ಲ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬ ಪಿವಿಆರ್ನ ವಿರುದ್ಧ ದಾವೆ ಹೂಡಿ ದಂಡ ಕಟ್ಟುವಂತೆ ಮಾಡಿದ್ದಾರೆ.
2024 ರಲ್ಲಿ ಬಿಡುಗಡೆ ಆದ ‘ಸ್ಯಾಮ್ ಬಹದ್ಧೂರ್’ ಸಿನಿಮಾ ನೋಡಲು ಬೆಂಗಳೂರಿನ ಅಭಿಷೇಕ್ ಎಂಆರ್ ಎಂಬುವರು ಬುಕ್ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪಿವಿಆರ್-ಐನಾಕ್ಸ್ (ಈಗ ಎರಡು ಒಂದೇ) ಮಲ್ಟಿಪ್ಲೆಕ್ಸ್ಗೆ ಹೋಗಿದ್ದರು. ಆದರೆ ಮಲ್ಟಿಪ್ಲೆಕ್ಸ್ನವರು ಸತತವಾಗಿ ಜಾಹೀರಾತುಗಳನ್ನು ಹಾಕಿ ಬರೋಬ್ಬರಿ 25 ನಿಮಿಷ ತಡವಾಗಿ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಇದರಿಂದ, ಅಭಿಷೇಕ್ಗೆ ನಿಗದಿತ ಸಮಯಕ್ಕೆ ಕಚೇರಿಗೆ ವಾಪಸ್ ತೆರಳಲು ಸಾಧ್ಯವಾಗಿಲ್ಲ.
ಟಿಕೆಟ್ ಮೇಲೆ ನಮೂದಾಗಿದ್ದ ಸಿನಿಮಾದ ಶೋ ಸಮಯಕ್ಕೂ ನಿಜವಾಗಿ ಸಿನಿಮಾ ಅನ್ನು ಪ್ರಾರಂಭ ಮಾಡಿದ ಸಮಯಕ್ಕೂ ಭಾರಿ ಅಂತರ ಇದ್ದ ಕಾರಣ ಹಾಗೂ ಅನವಶ್ಯಕವಾಗಿ ಅತಿಯಾಗಿ ಜಾಹೀರಾತು ತೋರಿ ತನ್ನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅಭಿಷೇಕ್ ಅವರು ಗ್ರಾಹಕರ ವೇದಿಕೆಯಲ್ಲಿ ಕೇಸು ದಾಖಲಿಸಿದ್ದರು, ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಇದೀಗ ಪಿವಿಆರ್-ಐನಾಕ್ಸ್, ದೂರುದಾರ ಅಭಿಷೇಕ್ಗೆ 28 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ. ಅಲ್ಲದೆ, ಇನ್ನು ಮುಂದೆ ನಿಖರವಾಗಿ ಸಿನಿಮಾ ಶೋ ಪ್ರಾರಂಭ ಆಗುವ ಸಮಯವನ್ನೇ ಟಿಕೆಟ್ನಲ್ಲಿ ನಮೂದಿಸಬೇಕು, ಜಾಹೀರಾತು ಪ್ರದರ್ಶಿಸುವ ಸಮಯವನ್ನು ನಮೂದಿಸುವಂತೆ ಇಲ್ಲ ಎಂದು ಗ್ರಾಹಕರ ವೇದಿಕೆ ಪಿವಿಆರ್-ಐನಾಕ್ಸ್ಗೆ ಸೂಚಿಸಿದೆ.
ಇದನ್ನೂ ಓದಿ:ಸಿನಿಮಾ ಜಾಹೀರಾತು ಕ್ಷೇತ್ರದಲ್ಲಿ ಧೂಳೆಬ್ಬಿಸಲು ಖುಷಿ ಜೊತೆ ಪಿವಿಆರ್-ಐನಾಕ್ಸ್ ಡೀಲ್
ಈ ಹಿಂದೆ ಸಹ ಪಿವಿಆರ್ ಮೇಲೆ ಇಂಥಹಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೊರಗಡೆಯಿಂದ ತೆಗೆದುಕೊಂಡು ಹೋಗುವ ಆಹಾರ ಮತ್ತು ನೀರಿಗೆ ನಿರ್ಬಂಧ ಹೇರಿರುವ ಬಗ್ಗೆ, ಅತಿಯಾಗಿ ಜಾಹೀರಾತು ಪ್ರದರ್ಶನ ಮಾಡುವ ಬಗ್ಗೆ ಹೀಗೆ ಇನ್ನೂ ಕೆಲವು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಪಿವಿಆರ್ ಮೇಲೆ ಹೂಡಲಾಗಿದೆ. ಆದರೆ ಯಾವುದೂ ಸಹ ಫಲಪ್ರದವಾಗಿಲ್ಲ. ಈಗಲೂ ಸಹ ಬೆಂಗಳೂರು ಸೇರಿದಂತೆ ಕೆಲವು ಮಹಾನಗರಗಳ ಮಲ್ಟಿಪ್ಲೆಕ್ಸ್ಗಳಲ್ಲಿ ಹೊರಗಿನಿಂದ ತೆಗೆದುಕೊಂಡು ಹೋಗುವ ಆಹಾರ ಮತ್ತು ನೀರು ನಿರ್ಬಂಧಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ