ಈ ವಾರ ಕನ್ನಡದ ಎರಡು ದೊಡ್ಡ ಸಿನಿಮಾಗಳು ರಿಲೀಸ್; ಎರಡರಲ್ಲೂ ರಚಿತಾ ನಟನೆ
ಜನವರಿ 23ರಂದು ಕನ್ನಡದ ಎರಡು ಬಹುನಿರೀಕ್ಷಿತ ಸಿನಿಮಾಗಳಾದ 'ಕಲ್ಟ್' ಮತ್ತು 'ಲ್ಯಾಂಡ್‌ಲಾರ್ಡ್' ತೆರೆ ಕಾಣಲಿವೆ. ಎರಡರಲ್ಲೂ ನಟಿ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ 'ಕಲ್ಟ್' A ಪ್ರಮಾಣಪತ್ರ ಚಿತ್ರವಾದರೆ, ಜಡೇಶ್ ಕುಮಾರ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಜಾತಿ ತಾರತಮ್ಯದ ವಿಷಯ ಆಧರಿಸಿದೆ. ಕನ್ನಡ ಚಿತ್ರಪ್ರೇಮಿಗಳಿಗೆ ಇದೊಂದು ಡಬಲ್ ಧಮಾಕಾ.

ಸಂಕ್ರಾಂತಿ ಸಂದರ್ಭದಲ್ಲಿ ತೆಲುಗು ಸಿನಿಮಾಗಳು ರಿಲೀಸ್ ಆಗಿ ಅಬ್ಬರಿಸಿದವು. ಈಗ ಜನವರಿ 26 ಬರುತ್ತಿದೆ. ಇದರ ಲಾಭ ಪಡೆಯಲು ಕನ್ನಡದ ನಿರ್ಮಾಪಕರು ಮುಂದಾಗಿದ್ದಾರೆ. ಜನವರಿ 23ರಂದು ಕನ್ನಡದ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದು ಎ ಪ್ರಮಾಣ ಪತ್ರ ಪಡೆದ ಸಿನಿಮಾ (Cinema) ಆದರೆ ಮತ್ತೊಂದು ಯುಎ ಪ್ರಮಾಣ ಪತ್ರ ಪಡೆದ ಚಿತ್ರ. ಈ ಎರಡೂ ಸಿನಿಮಾಗಳು ಧೂಳೆಬ್ಬಿಸಲು ರೆಡಿ ಆಗಿದೆ.
ಕಲ್ಟ್
‘ಉಪಾಧ್ಯಕ್ಷ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದ ಅನಿಲ್ ಕುಮಾರ್ ಅವರು ‘ಕಲ್ಟ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ರಾಜಕಾರಣಿ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಹೀರೋ. ರಚಿತಾ ರಾಮ್, ಮಲೈಕಾ ವಾಸುಪಾಲ್, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ.
ಈ ಚಿತ್ರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಸಿನಿಮಾದ ಅವಧಿ 2 ಗಂಟೆ 43 ನಿಮಿಷ ಇದೆ. ಡ್ರಾಮಾ ಹಾಗೂ ರೊಮ್ಯಾಂಟಿಕ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ರಚಿತಾಗೆ ಎರಡು ಶೇಡ್ ಹಾಗೂ ಝೈದ್ ಖಾನ್ಗೆ ಮೂರು ಶೇಡ್ ಇದೆ ಎಂದು ತಂಡ ಹೇಳಿದೆ. ಜನವರಿ 23ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಟ್ರೇಲರ್ ಮೂಲಕ ಸಿನಿಮಾ ಈಗಾಗಲೇ ಗಮನ ಸೆಳೆದಿದೆ.
ಲ್ಯಾಂಡ್ ಲಾರ್ಡ್
ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾ ಕೂಡ ಜನವರಿ 23ಕ್ಕೆ ತೆರೆಗೆ ಬರುತ್ತಿದೆ. ದುನಿಯಾ ವಿಜಯ್ ಅವರು ಲ್ಯಾಂಡ್ ಲಾರ್ಡ್ ಅಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ರಾಜ್ ಬಿ ಶೆಟ್ಟಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ರಾಕೇಶ್ ಅಡಿಗ, ಅಚ್ಯುತ್ ಕುಮಾರ್ ಮೊಲಾದವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನ ರಚಿತಾ ರಾಮ್ ಎರಡು ಸಿನಿಮಾಗಳು ರಿಲೀಸ್; ಫ್ಯಾನ್ಸ್ಗೆ ಹಬ್ಬ
ಸತ್ಯ ಪ್ರಕಾಶ್ ನಿರ್ಮಾಣದ ಈ ಚಿತ್ರ ಜಾತಿ ತಾರತಮ್ಯದ ವಿಷಯವನ್ನು ಹೇಳಲಿದೆ ಎನ್ನಲಾಗಿದೆ. ಈಗಾಗಲೇ ಸಿನಿಮಾದ ಹಾಡುಗಳು ಮೆಚ್ಚುಗೆ ಪಡೆದಿವೆ. ಟ್ರೇಲರ್ ಕೂಡ ರಿಲೀಸ್ ಆಗಿ ಭೇಷ್ ಎನಿಸಿಕೊಂಡಿದೆ. ರಾಜ್ ಬಿ ಶೆಟ್ಟಿ ಅವರ ಡಿಫರೆಂಟ್ ಲುಕ್ ಗಮನ ಸೆಳೆಯೋ ರೀತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




