ಕೈಯಲ್ಲಿ 2 ರೂಪಾಯಿ, ಎದುರು ನಿಂತು ನಗುತ್ತಿರುವ ಗೆಳೆಯ: ಹಳೆಯ ಘಟನೆ ನೆನಪಿಸಿಕೊಂಡ ರಜಿನಿ
Rajinikanth: ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಯ್ತು. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಜನೀಕಾಂತ್ ಸೇರಿದಂತೆ ಹಲವರು ಮಾತನಾಡಿದರು. ತಾವು ಸಿನಿಮಾಗಳಿಗೆ ಬರುವ ಮುಂಚೆ ನಡೆದ ಘಟನೆಯೊಂದನ್ನು ರಜನೀಕಾಂತ್ ವೇದಿಕೆ ಮೇಲೆ ಹಂಚಿಕೊಂಡರು.

ರಜನೀಕಾಂತ್ (Rajinikanth), ಭಾರತದ ಸೂಪರ್ ಸ್ಟಾರ್ ನಟ. ಅಮಿತಾಬ್ ಬಚ್ಚನ್ಗೂ ಹೆಚ್ಚಿನ ಅಭಿಮಾನಿಗಳನ್ನು ದೇಶ-ವಿದೇಶಗಳಲ್ಲಿ ರಜನೀಕಾಂತ್ ಸಂಪಾದನೆ ಮಾಡಿದ್ದಾರೆ. ವಯಸ್ಸು 70 ದಾಟಿದ್ದರೂ ಈಗಲೂ ಸಹ ರಜನೀಕಾಂತ್ ಅವರನ್ನು ನಾಯಕನ ಪಾತ್ರಗಳಲ್ಲಿ ನೋಡಲು ಜನ ಕಾಯುತ್ತಾರೆ. ಅವರ ಸಿನಿಮಾಗಳು ಈಗಲೂ ಹೌಸ್ಫುಲ್ ಆಗುತ್ತವೆ. ರಜನೀಕಾಂತ್, ಸಿನಿಮಾಗಳಿಗೆ ಇರುವಷ್ಟೆ ಅವರ ಭಾಷಣಕ್ಕೂ ಅಭಿಮಾನಿಗಳಿದ್ದಾರೆ. ಅವರು ಮಾತನಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಎನ್ನಿಸುವಂತೆ ಆಪ್ತವಾಗಿ, ಯಾವುದೇ ಹೀರೋಯಿಸಂ ಇಲ್ಲದೆ, ಸುಳ್ಳುಗಳಿಲ್ಲದೆ ಸ್ವಚ್ಛ ಮನಸ್ಸಿನಿಂದ ಅವರು ಮಾತನಾಡುತ್ತಾರೆ.
ನಿನ್ನೆಯಷ್ಟೆ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಯ್ತು. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಜನೀಕಾಂತ್, ಸತ್ಯರಾಜ್, ಶ್ರುತಿ ಹಾಸನ್, ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ, ಲೋಕೇಶ್ ಕನಗರಾಜ್, ಅನಿರುದ್ಧ್ ರವಿಚಂದ್ರನ್ ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆದರೆ ಎಂದಿನಂತೆ ಹೈಲೆಟ್ ಆಗಿದ್ದು ಮಾತ್ರ ರಜನೀಕಾಂತ್ ಭಾಷಣ.
ಸಿನಿಮಾದ ಬಗ್ಗೆ, ಸಹನಟರುಗಳ ಬಗ್ಗೆ ರಜನೀಕಾಂತ್ ಹಲವಾರು ವಿಷಯಗಳನ್ನು ಮಾತನಾಡಿದರು. ವಿಶೇಷವಾಗಿ ಭಾಷಣದ ಕೊನೆಯಲ್ಲಿ ಅವರು ಸಿನಿಮಾಕ್ಕೆ ಸೇರುವ ಮುಂಚೆ ಕಣ್ಣೀರು ಹಾಕಿದ ಘಟನೆಯನ್ನು ನೆನಪು ಮಾಡಿಕೊಂಡರು. ಎಲ್ಲರಿಗೂ ಗೊತ್ತಿರುವಂತೆ ರಜನೀಕಾಂತ್ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆದರೆ ಅದಕ್ಕೆ ಮುಂಚೆ ಅವರು ಕೂಲಿ ಆಗಿ ಸಹ ಕೆಲಸ ಮಾಡಿದ್ದರು.
ಇದನ್ನೂ ಓದಿ:‘ಕೂಲಿ’ ಟ್ರೈಲರ್ ಬಿಡುಗಡೆ: ರಜನಿ ಅಭಿಮಾನಿಗಳಿಗೆ ಹಬ್ಬ ಗ್ಯಾರೆಂಟಿ
ಒಮ್ಮೆ ಕೂಲಿ ಆಗಿ ಕೆಲಸ ಮಾಡುವಾಗ ರಜನೀಕಾಂತ್ ಅವರನ್ನು ವ್ಯಕ್ತಿಯೊಬ್ಬ ತನ್ನ ಸಾಮಾನುಗಳನ್ನು ಎತ್ತಿ ಗಾಡಿಯಲ್ಲಿ ಇಡುವಂತೆ ಹೇಳಿದರಂತೆ ಅದರಂತೆ ರಜನೀಕಾಂತ್ ಸಹ ಆ ಸಾಮಾನುಗಳನ್ನು ಎತ್ತಿ ವಾಹನದಲ್ಲಿಟ್ಟರಂತೆ. ಆಗ ಆ ವ್ಯಕ್ತಿ ಎರಡು ರೂಪಾಯಿ ರಜನೀಕಾಂತ್ ಕೈಯಲ್ಲಿಟ್ಟು ನಗಲು ಆರಂಭಿಸಿದರಂತೆ. ರಜನೀಕಾಂತ್ಗೆ ಆಗ ಗೊತ್ತಾಯ್ತಂತೆ, ಕೂಲಿ ಕೊಟ್ಟ ವ್ಯಕ್ತಿ ತನ್ನ ಕಾಲೇಜು ದಿನಗಳ ಗೆಳೆಯನೆಂದು. ಕಾಲೇಜು ದಿನಗಳಲ್ಲಿ ಅವನನ್ನು ಬಹಳ ಗೋಳಾಡಿಸಿದ್ದೆ. ಆದರೆ ಜೀವನ ಅಂದು ನನ್ನನ್ನು ಗೋಳಾಡಿಸಿ, ಅವನನ್ನು ದೊಡ್ಡವನನ್ನಾಗಿ ಮಾಡಿತ್ತು. ಅಂದು ನಾನು ಬಹಳ ಅತ್ತೆ, ಜೀವನದಲ್ಲಿ ಮೊದಲ ಬಾರಿ ಅತ್ತೆ’ ಎಂದಿದ್ದಾರೆ ರಜನೀಕಾಂತ್.
ಎಷ್ಟೇ ಹಣ, ಆಸ್ತಿ ಎಲ್ಲವೂ ಇರಬಹುದು ಮನೆಯಲ್ಲಿ ನೆಮ್ಮದಿ, ಹೊರಗಡೆ ತುಸು ಗೌರವ ಇಲ್ಲದ ಮೇಲೆ ಏನೇ ಇದ್ದರೂ ಸಹ ಎಲ್ಲವೂ ವ್ಯರ್ಥ ಎಂದಿದ್ದಾರೆ ರಜನೀಕಾಂತ್. ಅಂದಹಾಗೆ ‘ಕೂಲಿ’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Sun, 3 August 25




