ಟಾಕ್ಸಿಕ್: ದಕ್ಷಿಣದ ಹೀರೋಗಳ ಆರಾಧನೆ ಅಂತ್ಯ ಆಗಬಹುದು; ಆರ್​ಜಿವಿ ಭವಿಷ್ಯ

ಈ ವರ್ಷ ಮಾರ್ಚ್ 19ರಂದು ‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಸಿನಿಮಾಗಳು ತೆರೆಕಾಣಲಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಹೇಗೆ ಇರಬಹುದು ಎಂಬುದನ್ನು ಆರ್​ಜಿವಿ ಊಹಿಸಿದ್ದಾರೆ.

ಟಾಕ್ಸಿಕ್: ದಕ್ಷಿಣದ ಹೀರೋಗಳ ಆರಾಧನೆ ಅಂತ್ಯ ಆಗಬಹುದು; ಆರ್​ಜಿವಿ ಭವಿಷ್ಯ
Ram Gopal Varma, Yash

Updated on: Jan 13, 2026 | 7:20 PM

2026ರ ಅತಿ ದೊಡ್ಡ ಕ್ಲ್ಯಾಶ್ ಎಂದರೆ ‘ಧುರಂಧರ್ 2’ (Dhurandhar 2) ವರ್ಸಸ್ ‘ಟಾಕ್ಸಿಕ್’ ಸಿನಿಮಾಗಳದ್ದು. ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಯಶ್ ನಟಿಸಿದ್ದರೆ, ‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಬೇರೆ ಬೇರೆ ಕಾರಣಗಳಿಂದ ಸಖತ್ ನಿರೀಕ್ಷೆ ಹುಟ್ಟುಹಾಕಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

‘ಧುರಂದರ್ 2’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ನಡುವೆ ಇರಬಹುದಾದ ವ್ಯತ್ಯಾಸವನ್ನು ರಾಮ್ ಗೋಪಾಲ್ ವರ್ಮಾ ಅವರು ಊಹಿಸಿದ್ದಾರೆ. ‘ಧುರಂದರ್ 2’ ನೈಜತೆಗೆ ಹತ್ತಿರವಾದ ಸಿನಿಮಾ. ಆದರೆ ‘ಟಾಕ್ಸಿಕ್’ ನೈಜತೆ ಇಲ್ಲದ ಸಿನಿಮಾ ಎಂದು ಅವರು ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಹೇಗಿರಬಹುದು ಎಂಬ ಯಾವ ಅಂದಾಜು ಇಲ್ಲದೇ ರಾಮ್ ಗೋಪಾಲ್ ವರ್ಮಾ ಅವರು ಈಗಲೇ ಜಡ್ಜ್​ಮೆಂಟ್ ನೀಡಲು ಆರಂಭಿಸಿದ್ದಾರೆ.

‘ಟಾಕ್ಸಿಕ್ ಸಿನಿಮಾದ ಕಥಾನಾಯಕ ಹುಟ್ಟುತ್ತಲೇ ಬುಲೆಟ್​ಫ್ರೂಫ್. ಟಾಕ್ಸಿಕ್ ಜಗತ್ತು ಇರುವುದೇ ಹೀರೋನ ಆರಾಧಿಸಲು. ಆ ಸಿನಿಮಾ ಕಿರುಚಾಡುತ್ತದೆ. ಆದರೆ ಧುರಂಧರ್ 2 ಸಿನಿಮಾ ಮೌನದಲ್ಲೇ ಮಾತನಾಡುತ್ತದೆ. ಧುರಂಧರ್ ಕಥಾನಾಯಕ ಒಬ್ಬ ಮನುಷ್ಯ. ಅವರಿಗೆ ಇತಿಮಿತಿಗಳು ಇವೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.

‘ಮಾರ್ಚ್ 19ರಂದು ಈ ಎರಡು ಸಿನಿಮಾಗಳ ನಡುವೆ ನಡೆಯುವ ಪೈಪೋಟಿಯು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಇದು ಬರೀ ಕ್ಲ್ಯಾಶ್ ಅಲ್ಲ. ಸತ್ಯ ಮತ್ತು ಸ್ಟೈಲಿಂಗ್ ನಡುವಿನ ಘರ್ಷಣೆ ಆಗಲಿದೆ. ಅದಕ್ಕಿಂತಲೂ ದೊಡ್ಡದು ಸಂಭವಿಸಬಹುದು. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸ್ಟಾರ್​​ಗಳು ಶುರು ಮಾಡಿದ ಹೀರೋ ಆರಾಧನೆಗೆ ಅಂತ್ಯ ಹಾಡಲು ಇದು ನಾಂದಿ ಆಗಬಹುದು’ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ

‘ಧುರಂಧರ್’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಾಗಿ ಅದರ ಸೀಕ್ವೆಲ್ ಬಗ್ಗೆ ಪ್ರೇಕ್ಷಕರಿಗೆ ಸಖತ್ ನಿರೀಕ್ಷೆ ಇದೆ. ಅದೇ ರೀತಿ, ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಬಳಿಕ ನಟಿಸಿದ ಸಿನಿಮಾ ಆದ್ದರಿಂದ ‘ಟಾಕ್ಸಿಕ್’ ಕೂಡ ಬಹಳ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಬಿಡುಗಡೆ ಆದ ಟೀಸರ್ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.