‘ಧುರಂಧರ್’ ಹೊಗಳುವ ನೆಪದಲ್ಲಿ ‘ಟಾಕ್ಸಿಕ್’ ತೆಗಳಿದ್ರಾ ರಾಮ್ ಗೋಪಾಲ್ ವರ್ಮಾ?

ಆರಂಭದಲ್ಲಿ ‘ಧುರಂಧರ್’ ಮತ್ತು ‘ಟಾಕ್ಸಿಕ್’ ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿದ್ದವು. ಆದರೆ ‘ಟಾಕ್ಸಿಕ್’ ತಂಡ ಬಿಡುಗಡೆಯ ದಿನಾಂಕವನ್ನು ಮುಂದೂಡಿತ್ತು. ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಯಿತು. ಈಗಲೂ ಕೂಡ ಈ ಎರಡು ಸಿನಿಮಾಗಳ ನಡುವಿನ ಹೋಲಿಕೆ ಮತ್ತು ಚರ್ಚೆಗಳು ನಿಂತಿಲ್ಲ.

‘ಧುರಂಧರ್’ ಹೊಗಳುವ ನೆಪದಲ್ಲಿ ‘ಟಾಕ್ಸಿಕ್’ ತೆಗಳಿದ್ರಾ ರಾಮ್ ಗೋಪಾಲ್ ವರ್ಮಾ?
Ranveer Singh, Ram Gopal Varma, Yash

Updated on: Aug 31, 2026 | 10:38 PM

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ (Dhurandhar) ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅದೇ ವೇಳೆಗೆ ಅವರು ಹೆಸರು ಹೇಳದೇ ‘ಟಾಕ್ಸಿಕ್’ (Toxic) ಸಿನಿಮಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಈ ಪೋಸ್ಟ್ ನೋಡಿದರೆ ಯಶ್ ನಟನೆಯ ‘ಟಾಕ್ಸಿಕ್’ ಬಗ್ಗೆಯೇ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಅನಿಸಿಕೆ ಹಂಚಿಕೊಂಡಿರುವುದು ಎಂಬುದು ತಿಳಿಯುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ಶುರುವಾಗಿದೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರವನ್ನು ಕೊಂಡಾಡಿರುವ ವರ್ಮಾ, ‘ಸಿನಿಮಾದಲ್ಲಿ ಪಾತ್ರಗಳನ್ನು ಹೇಗೆ ನೈಜವಾಗಿ ರೂಪಿಸಬೇಕು ಎಂಬುದನ್ನು ಪ್ರತಿ ನಿರ್ದೇಶಕನೂ ಈ ಸಿನಿಮಾದಿಂದ ಕಲಿಯಬೇಕು. ನಾನು ನಿರ್ದೇಶಿಸಿದ ‘ಸತ್ಯ’ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ನೈಜವಾಗಿ ಕಾಣುತ್ತಿತ್ತು. ಆದರೆ ಆದಿತ್ಯ ಧರ್ ಅದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ’ ಎಂದಿದ್ದಾರೆ.

ಮುಂದುವರಿದು, ‘ಧುರಂಧರ್ ಸಿನಿಮಾದಲ್ಲಿ ಹೀರೋನನ್ನು ದೇವರೆಂಬಂತೆ ಪೂಜಿಸುವುದಿಲ್ಲ. ಆತ ವೇಟರ್ ಕೆಲಸ ಮಾಡುವುದು, ಮಾತನಾಡದೆ ಸುಮ್ಮನೆ ಕೇಳುಗನಾಗಿರುವುದು, ಲೆಕ್ಕಾಚಾರ ತಪ್ಪುವುದು ಮತ್ತು ಇತರೆ ಸಣ್ಣ ಪಾತ್ರಗಳ ಎದುರು ಸಣ್ಣವನಾಗಿ ಕಾಣಿಸುವುದನ್ನು ತೋರಿಸಲಾಗಿದೆ. ನಿರ್ದೇಶಕರು ನಾಯಕನಿಗೆ ನೀಡಿದಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಇತರ ಪಾತ್ರಗಳಿಗೂ ನೀಡಿದ್ದಾರೆ’ ಎಂದು ಆರ್‌ಜಿವಿ ವಿಶ್ಲೇಷಿಸಿದ್ದಾರೆ.

ಯಾವ ಸಿನಿಮಾದ ಹೆಸರನ್ನೂ ನೇರವಾಗಿ ಹೇಳದೆ ಇತರ ಸ್ಟಾರ್ ಸಿನಿಮಾಗಳನ್ನು ಟೀಕಿಸಿದ ವರ್ಮಾ, ‘ಇತರ ಸಿನಿಮಾಗಳು ಬರೀ ಹೀರೋಗಳ ಬಿಲ್ಡಪ್‌ಗಾಗಿಯೇ ನಿರ್ಮಾಣವಾಗುತ್ತವೆ. ಅವುಗಳಲ್ಲಿ ಸ್ಲೋ-ಮೋಷನ್ ಮತ್ತು ಹೊಗೆಯ ದೃಶ್ಯಗಳು ಪಾತ್ರಗಳ ಭಾವನೆಗಳಿಗಿಂತ ಹೆಚ್ಚು ಸಮಯ ಇರುತ್ತವೆ. ಅಲ್ಲಿ ಮಹಿಳೆಯರು ಜೀವಂತ ವ್ಯಕ್ತಿಗಳಂತೆ ಕಾಣಿಸುವುದಿಲ್ಲ. ಬದಲಾಗಿ ಹೀರೋ ಸುತ್ತ ಸುತ್ತುತ್ತಾರೆ ಅಷ್ಟೇ. ನಾಯಕ ಫ್ರೇಮ್‌ನಲ್ಲಿ ಇಲ್ಲದಿದ್ದಾಗ ಆ ಪಾತ್ರಗಳು ಏನು ಮಾಡುತ್ತಿವೆ ಎಂಬುದೇ ತಿಳಿಯುವುದಿಲ್ಲ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ನೋಡಿ ಮೆಚ್ಚಿಕೊಂಡ ಸುದೀಪ್; ಕಿಚ್ಚನ ಚಪ್ಪಾಳೆ ಪಡೆದ ಯಶ್

‘ಧುರಂಧರ್ ಸಿನಿಮಾದಲ್ಲಿನ ಹಿಂಸೆಗೆ ಒಂದು ಹಿನ್ನೆಲೆ ಮತ್ತು ಪರಿಣಾಮ ಇರುತ್ತದೆ. ಆದರೆ ಇತರ ಸಿನಿಮಾಗಳಲ್ಲಿ ಹಿಂಸೆ ಎಂಬುದು ಯಾವುದೇ ಸಂದರ್ಭ ಅಥವಾ ಅರ್ಥವಿಲ್ಲದ ಬರೀ ಮಜಾ ಅಷ್ಟೇ. ಅಲ್ಲಿ ಆಟಿಟ್ಯೂಡ್‌ಗಳೇ ಕಥೆಯಾಗಿರುತ್ತವೆ. ಬರವಣಿಗೆಯಲ್ಲಿ ಇಲ್ಲದ ಗಂಭೀರತೆಯನ್ನು ಎಡಿಟಿಂಗ್ ಮೂಲಕ ಕೃತಕವಾಗಿ ಸೃಷ್ಟಿಸಲಾಗುತ್ತದೆ. ಪೋಸ್ಟರ್‌ಗೆ ಒಂದು ಡೈನಾಮಿಕ್ ಫೋಟೋ ಬೇಕು ಎಂಬ ಕಾರಣಕ್ಕೆ ಪಾತ್ರಗಳು ನಟಿಸುತ್ತವೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ‘ಟಾಕ್ಸಿಕ್’ ಅಭಿಮಾನಿಗಳು ಮತ್ತು ಆರ್‌ಜಿವಿ ಅಭಿಮಾನಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us