‘ನನ್ನ ಪತ್ನಿಗೊಂದು ಚಾನ್ಸ್ ಕೊಡಿ’; ‘ಮ್ಯಾಕ್ಸ್’ ನಿರ್ಮಾಪಕನ ಬಳಿ ಕೋರಿಕೆ ಇಟ್ಟ ರಂಭಾ ಗಂಡ
90ರ ದಶಕದ ಬಹುಭಾಷಾ ನಟಿ ರಂಭಾ ಅವರು ಮತ್ತೆ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಅವರ ಪತಿ ಇಂದ್ರಕುಮಾರ್ ಅವರು ಚಿತ್ರ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿ ಪತ್ನಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ರಂಭಾ ಅವರು ಕನ್ನಡದಲ್ಲಿ 'ಸರ್ವರ್ ಸೋಮಣ್ಣ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಬಹುಭಾಷಾ ನಟಿ ರಂಭಾ ಅವರು 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗು, ಮಲಯಾಳಂ ಜೊತೆಗೆ ಕನ್ನಡದಲ್ಲೂ ಬಹುಬೇಡಿಕೆ ನಟಿಯಾದರು. ಈಗ ರಂಭಾ ಅವರು ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಈಗ ಮತ್ತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಹುಟ್ಟಿದಂತಿದೆ. ಅವರ ಪತಿ ಇಂದ್ರಕುಮಾರ್ ಅವರು ‘ಮ್ಯಾಕ್ಸ್’ ಚಿತ್ರದ (Max Movie) ನಿರ್ಮಾಪಕನ ಬಳಿ ಮಾತುಕತೆ ನಡೆಸಿದ್ದು, ಪತ್ನಿಗೆ ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ರಂಭಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 15ನೇ ವಯಸ್ಸಿಗೆ. ಅವರು ಕನ್ನಡದಲ್ಲಿ ಮೊದಲು ನಟಿಸಿದ ಸಿನಿಮಾ ‘ಸರ್ವರ್ ಸೋಮಣ್ಣ’. 1993ರಲ್ಲಿ ಈ ಚಿತ್ರ ರಿಲೀಸ್ ಆಯಿತು. ಜಗ್ಗೇಶ್ ಅವರು ಚಿತ್ರದ ಹೀರೋ. 2006ರಲ್ಲಿ ‘ಗಂಡುಗಲಿ ಕುಮಾರ ರಾಮ’ ಸಿನಿಮಾದಲ್ಲಿ ರಂಭಾ ನಾಯಕಿ ಪಾತ್ರ ಮಾಡಿದ್ದೇ ಕೊನೆ, ಆ ಬಳಿಕ ಕನ್ನಡ ಕಡೆ ಅವರು ಮುಖ ಮಾಡಿಲ್ಲ.
ರಂಭಾ 2010ರಲ್ಲಿ ಕೆನಡಾದಲ್ಲಿ ಸೆಟಲ್ ಆದ ಭಾರತ ಮೂಲದ ಉದ್ಯಮಿ ಇಂದ್ರಕುಮಾರ್ ಪದ್ಮನಾಭನ್ ಅವರನ್ನು ವಿವಾಹ ಆದರು. ಆ ಬಳಿಕ ರಂಭಾ ಅಲ್ಲಿಯೇ ಸೆಟಲ್ ಆದರು. ಆ ಬಳಿಕ ರಂಭಾ ಸಿನಿಮಾಗಳನ್ನು ಮಾಡಿಲ್ಲ. ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ ಬಣ್ಣದ ಲೋಕದ ಜೊತೆ ಅವರು ನಂಟು ಬೆಳೆಸುವ ಪ್ರಯತ್ನ ಮಾಡಿಲ್ಲ. ಈಗ ಅವರು ‘ಜೋಡಿ: ಆರ್ ಯೂ ರೆಡಿ’ ಟಿವಿ ಶೋಗೆ ಜಡ್ಜ್ ಆಗುತ್ತಾರೆ ಎನ್ನಲಾಗಿದೆ. ಈ ಮಧ್ಯೆ ಅವರಿಗೆ ಬಣ್ಣದ ಲೋಕದ ಬಗ್ಗೆ ಆಸಕ್ತಿ ಮೂಡಿದೆ.
ಇತ್ತೀಚೆಗೆ ನಡೆದ ಸಿನಿಮೋತ್ಸವದಲ್ಲಿ ‘ಮ್ಯಾಕ್ಸ್’ ನಿರ್ಮಾಪಕ ಕಲೈಪುಲಿ ಧಾನು ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ ಎನ್ನಲಾಗಿದೆ. ‘ರಂಭಾ ಅವರ ಆಸ್ತಿ ಸುಮಾರು 2 ಸಾವಿರ ಕೋಟಿ ರೂಪಾಯಿ. ಅವರ ಗಂಡ ನನಗೆ ಕರೆ ಮಾಡಿದ್ದರು. ಪತ್ನಿಗೆ ಒಂದು ಚಾನ್ಸ್ ಕೊಡಿ ಎಂದು ಕೇಳಿದರು. ಒಳ್ಳೆಯ ಪ್ರಾಜೆಕ್ಟ್ನ ಹುಡುಕಿ ಕೊಡುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ’ ಎಂಬುದಾಗಿ ಕಲೈಪುಲಿ ಹೇಳಿದ್ದಾರೆ.
ಇದನ್ನೂ ಓದಿ: ಪತಿಗೆ ವಿಚ್ಛೇದನ ನೀಡಿ, 14 ವರ್ಷದ ಬಳಿಕ ಚಿತ್ರರಂಗಕ್ಕೆ ಮರಳಲಿರುವ ರಂಭಾ
ಇಂದ್ರಕುಮಾರ್ ಅವರು ಕೆನಡಾದಲ್ಲಿ ವಿವಿಧ ಉದ್ಯಮ ನಡೆಸುತ್ತಾರೆ. ‘ಮ್ಯಾಜಿಕ್ ವುಡ್ಸ್’ ಇಂಟೀರಿಯರ್ ಕಂಪನಿಯ ಡೈರೆಕ್ಟರ್ ಆಗಿದ್ದಾರೆ. ಇದನ್ನು ಬಿಟ್ಟು ಐದು ಕಂಪನಿಗಳನ್ನು ಅವರು ನಡೆಸುತ್ತಿದ್ದಾರೆ. ಒಂದು ಕಂಪನಿಗೆ ಅವರು ಪತ್ನಿಯ ಹೆಸರನ್ನು ಇಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Mon, 10 March 25