AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​​ಗೆ ಹೇರಿದ್ದು ಬ್ಯಾನ್ ಅಲ್ಲ, ಅಸಹಕಾರ ಅಷ್ಟೇ; ಸಿಕ್ತು ಸ್ಪಷ್ಟನೆ

ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ಹೊರನಡೆದ ಕಾರಣ ಎಫ್‌ಡಬ್ಲ್ಯೂಐಸಿಇ ಅಸಹಕಾರ ಆದೇಶ ಹೊರಡಿಸಿದೆ. ನೋಟಿಸ್‌ಗಳಿಗೆ ರಣವೀರ್ ಸ್ಪಂದಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದು ನಿಷೇಧವಲ್ಲ, ಬದಲಿಗೆ ತಾತ್ಕಾಲಿಕ ಅಸಹಕಾರ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು FWICE ಆಶಿಸಿದೆ.

ರಣವೀರ್​​ಗೆ ಹೇರಿದ್ದು ಬ್ಯಾನ್ ಅಲ್ಲ, ಅಸಹಕಾರ ಅಷ್ಟೇ; ಸಿಕ್ತು ಸ್ಪಷ್ಟನೆ
ರಣವೀರ್ ಸಿಂಗ್ Image Credit source: Dhurandhar
 ಶ್ರೀಲಕ್ಷ್ಮೀ ಎಚ್
| Edited By: |

Updated on: May 27, 2026 | 12:20 PM

Share

ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಬಹುನಿರೀಕ್ಷಿತ ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ನಾಯಕ ಎಂದು ಈ ಹಿಂದೆ ಅಧಿಕೃತವಾಗಿ ಘೋಷಿಸಲಾಗಿತ್ತು. ಚಿತ್ರದ ಪೂರ್ವ ಸಿದ್ಧತೆಗಳಿಗಾಗಿ ಚಿತ್ರತಂಡ ಈಗಾಗಲೇ 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆದರೆ, ರಣವೀರ್ ಸಿಂಗ್ ಕೊನೆಯ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಸಿನಿಮಾದಿಂದ ಹೊರನಡೆದಿದ್ದಾರೆ. ಇದರಿಂದ ಭಾರೀ ನಷ್ಟ ಅನುಭವಿಸಿದ ಫರ್ಹಾನ್ ಅಖ್ತರ್, ಚಿತ್ರರಂಗದ ಪ್ರಮುಖ ಒಕ್ಕೂಟವಾದ ‘ಎಫ್‌ಡಬ್ಲ್ಯೂಐಸಿಇ’ (FWICE) ಸಂಸ್ಥೆಗೆ ದೂರು ನೀಡಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ತಮ್ಮ ವಾದವನ್ನು ಮಂಡಿಸಲು ರಣವೀರ್ ಸಿಂಗ್ ಅವರಿಗೆ FWICE ಒಕ್ಕೂಟವು ಮೂರು ಬಾರಿ ನೋಟಿಸ್ ನೀಡಿ ಕರೆಸಿತ್ತು. ಆದರೆ, ರಣವೀರ್ ಒಮ್ಮೆಯೂ ಹಾಜರಾಗಲಿಲ್ಲ. ಇದರಿಂದ ಬೇಸತ್ತ ಸಂಸ್ಥೆಯು ತನ್ನ ವ್ಯಾಪ್ತಿಗೆ ಬರುವ ನಿರ್ದೇಶಕರು, ಕ್ಯಾಮೆರಾಮನ್ ಮತ್ತು ತಾಂತ್ರಿಕ ಸಿಬ್ಬಂದಿಗೆ ರಣವೀರ್ ಸಿಂಗ್ ಜೊತೆ ಕೆಲಸ ಮಾಡದಂತೆ ‘ಅಸಹಕಾರ ಆದೇಶ’ ಹೊರಡಿಸಿತು. ಇದರಿಂದಾಗಿ ರಣವೀರ್ ಅವರನ್ನು ಚಿತ್ರರಂಗದಿಂದ ನಿಷೇಧಿಸಲಾಗಿದೆ ಎಂಬ ವದಂತಿ ಹಬ್ಬಿತ್ತು.

ನಿಷೇಧಿಸಿಲ್ಲ, ಇದು ಅಸಹಕಾರ ಆದೇಶ: ಸ್ಪಷ್ಟನೆ

ಈ ಗೊಂದಲಕ್ಕೆ ತೆರೆ ಎಳೆದಿರುವ FWICE ಮುಖ್ಯ ಸಲಹೆಗಾರ ಹಾಗೂ ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, “ನಾವು ಯಾವುದೇ ನಟನನ್ನು ನಿಷೇಧಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. “ಯಾರನ್ನೂ ನಿಷೇಧಿಸಲು ನಾವು ನ್ಯಾಯಾಲಯವಲ್ಲ. ಆದರೆ, ನಮ್ಮ ಒಕ್ಕೂಟದ ಅಡಿಯಲ್ಲಿ ಬರುವ 30 ಕ್ಕೂ ಹೆಚ್ಚು ವಿಭಾಗದವರಿಗೆ ಈ ವಿವಾದ ಬಗೆಹರಿಯುವವರೆಗೆ ರಣವೀರ್ ಜೊತೆ ಕೆಲಸ ಮಾಡದಂತೆ ಸೂಚಿಸಿದ್ದೇವೆ. ಅವರೊಂದಿಗೆ ಕೆಲಸ ಮಾಡಬೇಕೋ ಬೇಡವೋ ಎಂಬುದು ನಮ್ಮ ಸದಸ್ಯರ ನಿರ್ಧಾರ” ಎಂದು ಅವರು ವಿವರಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ಸಿನಿಮಾದಿಂದ ಹಿಂದೆ ಸರಿಯುವ ಇಂತಹ ಧೋರಣೆಗಳು ಚಿತ್ರರಂಗದಲ್ಲಿ ತಪ್ಪು ಪ್ರವೃತ್ತಿಯನ್ನು ಹುಟ್ಟುಹಾಕುತ್ತವೆ ಎಂದು ಅಶೋಕ್ ಪಂಡಿತ್ ಕಳವಳ ವ್ಯಕ್ತಪಡಿಸಿದ್ದಾರೆ. ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ನಂತಹ ದೊಡ್ಡ ಸಂಸ್ಥೆಗಳು ಕೋಟ್ಯಂತರ ರೂಪಾಯಿ ನಷ್ಟವನ್ನು ತಡೆದುಕೊಳ್ಳಬಲ್ಲವು. ಆದರೆ ಸಣ್ಣ ನಿರ್ಮಾಪಕರಿಗೆ ಇಂತಹ ಪರಿಸ್ಥಿತಿ ಎದುರಾದರೆ ಅವರು ಬರ್ಬಾದ್ ಆಗುತ್ತಾರೆ, ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ಇಷ್ಟೆಲ್ಲಾ ಉದ್ವಿಗ್ನತೆಯ ನಡುವೆಯೂ ಈ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದು FWICE ನಂಬಿದೆ. ಪತ್ರಿಕಾಗೋಷ್ಠಿ ನಡೆಸುವ ಮುನ್ನ ರಣವೀರ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿತ್ತು ಎಂದು ತಿಳಿಸಿರುವ ಅಶೋಕ್ ಪಂಡಿತ್, “ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ಒಟ್ಟಿಗೆ ಕುಳಿತು ಚರ್ಚಿಸಿದರೆ ಈ ವಿವಾದ ಸುಲಭವಾಗಿ ಇತ್ಯರ್ಥವಾಗುತ್ತದೆ, ಅದಕ್ಕಾಗಿ ಒಂದು ಸಭೆ ನಡೆಯಬೇಕಿದೆ” ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More