ಜೂ. ಎನ್ಟಿಆರ್, ಪ್ರಶಾಂತ್ ನೀಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಐಟಂ ಡ್ಯಾನ್ಸ್?
ಪ್ರಶಾಂತ್ ನೀಲ್ ಅವರ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಐಟಂ ಸಾಂಗ್ ಬಗ್ಗೆ ಒಂದು ಸ್ಪೆಷಲ್ ಗಾಸಿಪ್ ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಅವರಿಗೆ ಈ ಚಿತ್ರತಂಡದಿಂದ ಆಫರ್ ನೀಡಲಾಗಿದೆಯಂತೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಬಿರುಸಿನಿಂದ ಶೂಟಿಂಗ್ ನಡೆಯುತ್ತಿದೆ.

ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ (Jr NTR) ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೈವೋಲ್ಟೇಜ್ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಈ ಸಿನಿಮಾಗೆ ಈಗ ಚಿತ್ರೀಕರಣ ನಡೆಯುತ್ತಿದೆ. ‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’, ‘ಸಲಾರ್’ ಸಿನಿಮಾಗಳ ಯಶಸ್ಸಿನ ಬಳಿಕ ಪ್ರಶಾಂತ್ ನೀಲ್ (Prashanth Neel) ಅವರು ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಒಂದು ಇಂಟರೆಸ್ಟಿಂಗ್ ಮಾಹಿತಿ ಕೇಳಿಬಂದಿದೆ. ವರದಿಗಳ ಪ್ರಕಾರ, ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದು ಕೂಡ ಐಟಂ ಡ್ಯಾನ್ಸ್ನಲ್ಲಿ ಎಂಬುದು ವಿಶೇಷ.
ಹೀರೋಯಿನ್ಗಳು ಐಟಂ ಡ್ಯಾನ್ಸ್ ಮಾಡುವುದು ಹೊಸದೇನಲ್ಲ. ಆದರೆ ನಟಿ ರಶ್ಮಿಕಾ ಮಂದಣ್ಣ ಅವರು ಈವರೆಗೂ ಅಂಥ ಹಾಡಿನಲ್ಲಿ ಕಾಣಿಸಿಕೊಂಡಿಲ್ಲ. ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಲು ರಶ್ಮಿಕಾ ಮಂದಣ್ಣಗೆ ಆಫರ್ ನೀಡಲಾಗಿದೆ ಎಂದು ‘ಫಿಲ್ಮ್ ಫೇರ್’ ವರದಿ ಮಾಡಿದೆ.
ಈ ಹಾಡು ತುಂಬ ಚೆನ್ನಾಗಿ ಮೂಡಿಬರಬೇಕು ಎಂಬುದು ಚಿತ್ರತಂಡದ ಉದ್ದೇಶ. ಯಾವುದೇ ಹೀರೋಯಿನ್ ಮೊದಲ ಬಾರಿಗೆ ಐಟಂ ಡ್ಯಾನ್ಸ್ ಮಾಡಿದರೆ ಜನರ ನಿರೀಕ್ಷೆ ಹೆಚ್ಚಿರುತ್ತದೆ. ಅಂಥ ಹಾಡಿಗೆ ರೀಚ್ ಕೂಡ ಜಾಸ್ತಿ ಇರುತ್ತದೆ. ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಅವರು ಐಟಂ ಡ್ಯಾನ್ಸ್ ಮಾಡಿದ್ದೇ ಈ ಮಾತಿಗೆ ಬೆಸ್ಟ್ ಉದಾಹರಣೆ. ಈಗ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಂತಹ ಮ್ಯಾಜಿಕ್ ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕು.
ಐಟಂ ಡ್ಯಾನ್ಸ್ ಬಗ್ಗೆ ರಶ್ಮಿಕಾ ಮಂದಣ್ಣ ಅವರ ಜೊತೆ ಮಾತುಕಥೆ ಆಗಿದೆಯೋ ಇಲ್ಲವೋ ಎಂದು ಚಿತ್ರತಂಡದವರು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಗಾಸಿಪ್ ಹಬ್ಬಿದೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ. ಹಾಗಾಗಿ ಫ್ಯಾನ್ಸ್ ಈ ಗಾಸಿಪ್ ಕೇಳಿ ಖುಷಿ ಆಗಿದ್ದಾರೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಕೆಲವರು ಈ ಸಿನಿಮಾದ ಟೈಟಲ್ ‘ಡ್ರ್ಯಾಗನ್’ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ರಶ್ಮಿಕಾ, ದೀಪಿಕಾಗೆ ಮೈಸೂರು ಸ್ಯಾಂಡಲ್ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾ ಮಂದಣ್ಣ ಅವರಿಗೆ ಕೈ ತುಂಬ ಆಫರ್ಗಳಿವೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ಹಾಗಾಗಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಇದೆ. ಈ ಸಂದರ್ಭದಲ್ಲಿ ಅವರು ಐಟಂ ಡ್ಯಾನ್ಸ್ ಮಾಡಲು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಸದ್ಯದಲ್ಲೇ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.