1.5 ಕೋಟಿ ರೂ. ಬೆಲೆಯ ಕಾರು ಗಿಫ್ಟ್ ಪಡೆದ ‘ಕಿಲಾಡಿ’ ನಿರ್ದೇಶಕ; ಆದರೆ ಚಿತ್ರವೇ ಇನ್ನೂ ರಿಲೀಸ್ ಆಗಿಲ್ಲ
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಕಿಲಾಡಿ’ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ. ರಿಲೀಸ್ಗೂ ಮುನ್ನವೇ ಈ ಸಿನಿಮಾ ಲಾಭ ಕಂಡಿದೆ.

ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯರಿಗೆ ಮಾತ್ರವಲ್ಲದೇ ನಿರ್ದೇಶಕರಿಗೂ ಒಳ್ಳೆಯ ಸಂಭಾವನೆ ಸಿಗುತ್ತದೆ. ನಿರ್ದೇಶಕರು ಮಾಡಿದ ಕೆಲಸ ನಿರ್ಮಾಪಕರಿಗೆ ಇಷ್ಟವಾದರೆ ಖುಷಿಯಿಂದ ಸಂಭಾವನೆ ನೀಡುತ್ತಾರೆ. ಈ ರೀತಿ ಆಗಿದ್ದಕ್ಕೆ ಹಲವು ಉದಾಹರಣೆಗಳಿವೆ. ಟಾಲಿವುಡ್ನ ‘ಕಿಲಾಡಿ’ (Khiladi Movie) ಸಿನಿಮಾ ನಿರ್ದೇಶಕ ರಮೇಶ್ ವರ್ಮಾ ಅವರಿಗೂ ಅಂಥ ಲುಕ್ ಖುದುರಿದೆ. ಅವರು ಮಾಡಿದ ಕೆಲಸವನ್ನು ನಿರ್ಮಾಪಕ ಕೊನೆರು ಸತ್ಯನಾರಾಯಣ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ನಿರ್ದೇಶಕ ರಮೇಶ್ ವರ್ಮಾಗೆ ಅವರು ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯಕ್ಕಂತೂ ಟಾಲಿವುಡ್ (Tollywood News) ಅಂಗಳದಲ್ಲಿ ಎಲ್ಲರ ಬಾಯಲ್ಲೂ ಇದೇ ಸುದ್ದಿ. ವಿಶೇಷ ಏನೆಂದರೆ, ‘ಕಿಲಾಡಿ’ ಸಿನಿಮಾ ಇನ್ನೂ ಬಿಡುಗಡೆಯೇ ಆಗಿಲ್ಲ! ಅಷ್ಟರಲ್ಲಾಗಲೇ ನಿರ್ಮಾಪಕರು ಹ್ಯಾಪಿ ಮೂಡ್ನಲ್ಲಿ ಇದ್ದಾರೆ. ಈ ಚಿತ್ರಕ್ಕೆ ರವಿ ತೇಜ (Ravi Teja) ಹೀರೋ. ಅವರ ಜೊತೆ ಡಿಂಪಲ್ ಹಯಾತಿ, ಮೀನಾಕ್ಷಿ ಚೌದರಿ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದಿಂದ ನಿರ್ದೇಶಕರಿಗೆ ಭಾರಿ ಪ್ರಶಂಸೆ ಸಿಗುತ್ತಿದೆ.
ಫೆ.11ರಂದು ಕಿಲಾಡಿ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್ ಆಗಿವೆ. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್ ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್ಗೂ ಮುನ್ನವೇ ನಿರ್ಮಾಪಕರು ಲಾಭದಲ್ಲಿದ್ದಾರೆ. ಇದಕ್ಕೆ ಕಾರಣವಾದ ನಿರ್ದೇಶಕರಿಗೆ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. 1.5 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರನ್ನು ನಿರ್ದೇಶಕ ರಮೇಶ್ ವರ್ಮಾಗೆ ನಿರ್ಮಾಪಕರು ಕೊಟ್ಟಿದ್ದಾರೆ.
ನಿರ್ದೇಶಕರು ಕಾರನ್ನು ಉಡುಗೊರೆಯಾಗಿ ಪಡೆಯುತ್ತಿರುವ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರೇ ‘ಕಿಲಾಡಿ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಹೈಪ್ ಸೃಷ್ಟಿ ಆಗಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಕಿಲಾಡಿ’ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಧೂಳೆಬ್ಬಿಸುತ್ತಿವೆ. ಈ ಚಿತ್ರದ ‘ಫುಲ್ ಕಿಕ್..’ ಹಾಡು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಆಯಿತು. ಮೂರೇ ದಿನದಲ್ಲಿ 44 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಹಾಡಿನ ಹೆಚ್ಚುಗಾರಿಕೆ. ಇದರಿಂದ ‘ಕಿಲಾಡಿ’ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಪ್ರತಿದಿನ ಒಂದೊಂದು ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
ಇದನ್ನೂ ಓದಿ:
ಟಾಲಿವುಡ್ ಅಂಗಳದಲ್ಲಿ ಕಿಚ್ಚ ಸುದೀಪ್; ಫೆಬ್ರವರಿ 4ರಂದು ರಿಲೀಸ್ ಆಗುತ್ತಿದೆ ಸಿನಿಮಾ
ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್ ಸೀಕ್ರೆಟ್ ಇಲ್ಲಿದೆ..




