
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) 14ನೇ ಆರೋಪಿ ಆಗಿರುವ ಪ್ರದೋಷ್ ಈಗ ಮಾಫಿ ಸಾಕ್ಷಿಯಾಗಲು ಕೋರ್ಟ್ ಒಪ್ಪಿಗೆ ಸಿಕ್ಕಿದೆ. ಮಾಫಿ ಸಾಕ್ಷಿಯಾಗಲು ಪ್ರದೋಷ್ (Pradosh) ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು 59ನೇ ಸಿಸಿಹೆಚ್ ಕೋರ್ಟ್ ಅಂಗೀಕರಿಸಿದೆ. ದರ್ಶನ್ (Darshan), ಪವಿತ್ರಾ ಗೌಡ ಮುಂತಾದವರು ಆರೋಪಿಗಳಾಗಿರುವ ಈ ಪ್ರಕರಣದಲ್ಲಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿದೆ. ಇಂದು (ಆಗಸ್ಟ್ 25) ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆದೇಶ ನೀಡಿದ್ದಾರೆ.
ಮಾಫಿ ಸಾಕ್ಷಿ ಆಗಲು ಒಪ್ಪಿರುವ ಪ್ರದೋಷ್ ಅವರಿಗೆ ನ್ಯಾಯಾಲಯ ಕೆಲವು ಷರತ್ತು ವಿಧಿಸಿದೆ. ಪ್ರಕ್ರಿಯೆ ಮುಗಿಯುವವರೆಗೂ ಜೈಲಿನಲ್ಲೇ ಇರಬೇಕು. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ ಸುಳ್ಳು ಸಾಕ್ಷಿ ಹೇಳಿದ ಕೇಸ್ ದಾಖಲಿಸಲಾಗುವುದು ಹಾಗೂ ಮಾಫಿ ಸಾಕ್ಷಿ ಬದಲು ಆರೋಪಿಯನ್ನಾಗಿ ಮಾಡಲಾಗುವುದು ಎಂದು ಕೋರ್ಟ್ ಷರತ್ತು ವಿಧಿಸಿದೆ.
ಎ14 ಆಗಿರುವ ಪ್ರದೋಷ್ ಎಸ್. ರಾವ್, ತನ್ನ ಗಮನದಲ್ಲಿರುವ ಸತ್ಯವಾದ ಅಂಶಗಳನ್ನು ಬಹಿರಂಗಪಡಿಸಬೇಕು. ಸತ್ಯ ಮುಚ್ಚಿಟ್ಟರೆ ಮಾಫಿ ಸಾಕ್ಷಿಯಿಂದ ಆರೋಪಿಯನ್ನಾಗಿಸಲಾಗುವುದು. ಈ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್ಗೆ ರವಾನೆ ಮಾಡಲಾಗಿದೆ. ಈಗ ಪ್ರದೋಷ್ ನೀಡಲಿರುವ ಹೇಳಿಕೆಗಳಿಂದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಗಲಿದೆ.
ಇದನ್ನೂ ಓದಿ: ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ವ್ಯಕ್ತಿ, ವಿಜಯಲಕ್ಷ್ಮಿ ದರ್ಶನ್ ಜೊತೆ ಪ್ರತ್ಯಕ್ಷ
ದರ್ಶನ್ ಅವರಿಗೆ ಪ್ರದೋಷ್ ಅತಿ ಆಪ್ತರಾಗಿದ್ದರು. ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದ ಎಲ್ಲ ವಿವರಗಳು ಪ್ರದೋಷ್ಗೆ ತಿಳಿದಿರುವ ಸಾಧ್ಯತೆ ಇದೆ. ಅದನ್ನು ಜಡ್ಜ್ ಎದುರು ಒಪ್ಪಿಕೊಳ್ಳಲು ಪ್ರದೋಷ್ ಮುಂದಾಗಿದ್ದಾರೆ. ಈಗಾಗಲೇ ಪ್ರದೋಷ್ಗೆ ಹಲವು ಪ್ರಶ್ನೆಗಳನ್ನು ಕೇಳಿ ಕೋರ್ಟ್ ಉತ್ತರ ದಾಖಲಿಸಿಕೊಂಡಿದೆ. ಮಾಫಿ ಸಾಕ್ಷಿಯಾಗಲು ತಮಗೆ ಯಾರದೇ ಪ್ರಭಾವ ಮತ್ತು ಒತ್ತಡವಿಲ್ಲವೆಂದು ಪ್ರದೋಷ್ ಹೇಳಿದ್ದಾರೆ.
ಘಟನೆಯ ಪ್ರತಿ ಹಂತದಲ್ಲೂ ಕೂಡ ಪ್ರದೋಷ್ ಪ್ರತ್ಯಕ್ಷದರ್ಶಿ ಆಗಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಪ್ರದೋಷ್ ನೀಡಲಿರುವ ಸಾಕ್ಷಿ ಬಹಳ ಮುಖ್ಯ ಆಗಲಿದೆ. ಅವರು ನೀಡುವ ಸಾಕ್ಷಿಯ ಮೇಲೆ ಇನ್ನುಳಿದ ಆರೋಪಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣ ಕೂಡ ನಿಗದಿ ಆಗಲಿದೆ. ಮಾಫಿ ಸಾಕ್ಷಿಯ ವಿಚಾರಣೆಯ ಪ್ರಕ್ರಿಯೆ ಈಗ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:34 pm, Tue, 25 August 26