ಹೈಕೋರ್ಟ್ನಲ್ಲಿ ದರ್ಶನ್ ಅರ್ಜಿ ತುರ್ತು ವಿಚಾರಣೆ; ಸೆ.2ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಾಗ ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದಾರೆ. ಇಂದು (ಸೆಪ್ಟೆಂಬರ್ 1) ಹೈಕೋರ್ಟ್ನಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದೆ. ಬುಧವಾರ (ಸೆ.2) ಆದೇಶ ಪ್ರಕಟ ಆಗಲಿದೆ. ಆ ಆದೇಶದ ಮೇಲೆ ಮಾಫಿ ಸಾಕ್ಷಿಯ ಮುಂದಿನ ಪ್ರಕ್ರಿಯೆ ನಿರ್ಧಾರ ಆಗಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ (Pradosh) ಮಾಫಿ ಸಾಕ್ಷಿ ಆಗಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿದ್ದು, ಅದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿದೆ. ದರ್ಶನ್ (Darshan) ಪರ ವಕೀಲರು ಈ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಅದರಂತೆ ಇಂದು (ಸೆ.1) ವಿಚಾರಣೆ ನಡೆಸಿರುವ ಹೈಕೋರ್ಟ್ ನಾಳೆಗೆ (ಸೆಪ್ಟೆಂಬರ್ 2) ಆದೇಶ ಕಾಯ್ದಿರಿಸಿದೆ. ಮಾಫಿ ಸಾಕ್ಷಿ (Approver) ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಕಾನೂನಿನಲ್ಲಿಲ್ಲದ ಪ್ರಕ್ರಿಯೆ ಅನುಸರಿಸಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಾಡಿದ್ದಾರೆ.
ಅರ್ಜಿಯಲ್ಲಿ ದರ್ಶನ್ ಅಲಿಯಾಸ್ ಡಿ ಬಾಸ್ ಎಂದಿದೆ. ದರ್ಶನ್ ಅಲಿಯಾಸ್ ಡಿ ಬಾಸ್ ಎಂದರೆ ಏನು ಎಂದು ಹೈಕೋರ್ಟ್ ಪ್ರಶ್ನಿಸಿದೆ. ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಈ ರೀತಿ ನಮೂದಿಸಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದರು. ಪರಿವೀಕ್ಷಣಾ ಅಧಿಕಾರಿಯಿಂದ ಪ್ರದೋಷ್ ಬಗ್ಗೆ ವರದಿ ಕೇಳಿದ್ದಾರೆ. ಪ್ರದೋಷ್ ಒಳ್ಳೆಯ ವ್ಯಕ್ತಿಯೆಂದು ಅಧಿಕಾರಿ ವರದಿ ನೀಡಿದ್ದಾರೆ. ಯಾವ ಪ್ರಕ್ರಿಯೆ ಅನುಸರಿಸಬೇಕೋ ಅದನ್ನೇ ಅನುಸರಿಸಬೇಕು ಎಂದು ವಾದ ಮಾಡಲಾಗಿದೆ.
ನಾವು ಆ ವರದಿ ಇಲ್ಲವೆಂದೇ ಭಾವಿಸಬಹುದಲ್ಲವೇ? ಪರಿವೀಕ್ಷಣಾ ಅಧಿಕಾರಿಯ ವರದಿ ರದ್ದುಪಡಿಸಬಹುದಲ್ಲವೇ? ಅದನ್ನು ಬಿಟ್ಟು ಪ್ರಮಾಣಪತ್ರವನ್ನಷ್ಟೇ ಪಡೆಯಬಹುದಿತ್ತಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಪ್ರಾಸಿಕ್ಯೂಷನ್ ಕೂಡಾ ಈ ಬಗ್ಗೆ ಕೇಳಿರಲಿಲ್ಲ. ಪರಿವೀಕ್ಷಣಾ ಅಧಿಕಾರಿಯಿಂದ ವರದಿ ಕೇಳಿರಲಿಲ್ಲ ಎಂದು ಹೈಕೋರ್ಟ್ಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಬೇರೆ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದರೂ ಮಾಫಿ ಸಾಕ್ಷಿಗೆ ಅವಕಾಶ ನೀಡಿದ್ದಾರೆ. ಬೇರೆ ಸಾಕ್ಷಿಗಳೇ ಇಲ್ಲದಿದ್ದಾಗ ಮಾತ್ರ ಮಾಫಿ ಸಾಕ್ಷಿ ಪರಿಗಣಿಸಬೇಕು. ಆದರೆ ಸಾಕ್ಷಿಗಳಿದ್ದಾಗಲೂ ಮಾಫಿ ಸಾಕ್ಷಿ ಒಪ್ಪಿದ್ದು ಸರಿಯಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಎರಡೂ ಕಡೆಯ ವಾದ ಆಲಿಸಿರುವ ಹೈಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದೆ.
ಇದನ್ನೂ ಓದಿ: ದರ್ಶನ್ ಕೇಸ್: ಸಾಕ್ಷಿಗೆ ಬೆದರಿಕೆ ಹಾಕಿದ ಗೌರವ್ ಶೆಟ್ಟಿ, ಕಿರಣ್ ರೆಡ್ಡಿ ಜತೆ ಪ್ರಭಾವಿ ಮಹಿಳೆ ನಂಟು
ನಾಳೆಯೇ (ಸೆ.2) ಮಾಫಿ ಸಾಕ್ಷಿಯಾಗಿ ಪ್ರದೋಷ್ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯ ಈಗಾಗಲೇ ಸಮನ್ಸ್ ನೀಡಿದೆ. ಹಾಗಾಗಿ ತುರ್ತಾಗಿ ತಮ್ಮ ಅರ್ಜಿಯ ವಿಚಾರಣೆ ಮಾಡಬೇಕು ಎಂದು ಹೈಕೋರ್ಟ್ನಲ್ಲಿ ದರ್ಶನ್ ಪರ ವಕೀಲರು ಮನವಿ ಮಾಡಿದ್ದರಿಂದ ಇಂದು (ಸೆ.1) ಸಂಜೆ ವಿಚಾರಣೆ ನಡೆಸಲಾಯಿತು. ಹೈಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಮಾಫಿ ಸಾಕ್ಷಿ ವಿಷಯ ನಿರ್ಧಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




