AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ರೀತಿ ರಿತೇಶ್ ದೇಶ್​​ಮುಖ್ ಕೂಡ ರಾಜಕೀಯಕ್ಕೆ ಎಂಟ್ರಿ? ನಟ ಹೇಳಿದ್ದಿಷ್ಟು

ನಟ ರಿತೇಶ್ ದೇಶಮುಖ್ ರಾಜಕೀಯ ಹಿನ್ನೆಲೆ ಹೊಂದಿದ್ದರೂ, ರಾಜಕೀಯ ಪ್ರವೇಶದ ಬಗ್ಗೆ ಸದಾ ಕೇಳಿಬರುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ದಳಪತಿ ವಿಜಯ್ ರಾಜಕೀಯ ಯಶಸ್ಸನ್ನು ಉಲ್ಲೇಖಿಸಿದಾಗಲೂ, ರಿತೇಶ್ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದಾರೆ. ವಂಶಪಾರಂಪರ್ಯ ರಾಜಕಾರಣದ ಚರ್ಚೆಗಳನ್ನು ತಪ್ಪಿಸಲು ತಾವು ಯಾವುದೇ ರಾಜಕೀಯ ಪ್ರಯೋಗಕ್ಕೆ ಕೈಹಾಕುವುದಿಲ್ಲ ಎಂದು ರಿತೇಶ್ ಹೇಳಿದ್ದು, ಇದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಜಯ್ ರೀತಿ ರಿತೇಶ್ ದೇಶ್​​ಮುಖ್ ಕೂಡ ರಾಜಕೀಯಕ್ಕೆ ಎಂಟ್ರಿ? ನಟ ಹೇಳಿದ್ದಿಷ್ಟು
ವಿಜಯ್-ರಿತೇಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jun 09, 2026 | 11:26 AM

Share

ಬಾಲಿವುಡ್​ನ ಖ್ಯಾತ ನಟ ರಿತೇಶ್ ದೇಶಮುಖ್ ಸದ್ಯ ತಮ್ಮ ಬಹುನಿರೀಕ್ಷಿತ ‘ರಾಜಾ ಶಿವಾಜಿ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಬಿಗ್ ಬಾಸ್ ಮರಾಠಿ’ ಶೋ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲೂ ಸಖತ್ ಸೌಂಡ್ ಮಾಡಿದ್ದ ರಿತೇಶ್‌ಗೆ ಚಿತ್ರರಂಗದ ಜೊತೆಗೆ ದೊಡ್ಡ ರಾಜಕೀಯ ಹಿನ್ನೆಲೆಯೂ ಇದೆ. ಇವರ ತಂದೆ ವಿಲಾಸ್ರಾವ್ ದೇಶಮುಖ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದರು. ಅಲ್ಲದೆ ರಿತೇಶ್ ಅವರ ಇಬ್ಬರು ಸಹೋದರರು ಕೂಡ ಸದ್ಯ ರಾಜಕೀಯದಲ್ಲೇ ಸಕ್ರಿಯರಾಗಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸಹೋದರರ ಪರ ಪ್ರಚಾರಕ್ಕೆ ಇಳಿಯುವ ರಿತೇಶ್ ದೇಶಮುಖ್ ಅವರಿಗೆ ಮಹಾರಾಷ್ಟ್ರದಲ್ಲಿ ದೊಡ್ಡ ಜನಬೆಂಬಲವಿದೆ. ಹೀಗಾಗಿ ರಿತೇಶ್ ದೇಶಮುಖ್ ರಾಜಕೀಯಕ್ಕೆ ಬರುವುದು ಯಾವಾಗ? ಎಂಬ ಪ್ರಶ್ನೆ ಸದಾ ಕೇಳಿಬರುತ್ತಿರುತ್ತದೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟನಿಗೆ ಮತ್ತೊಮ್ಮೆ ಇದೇ ಪ್ರಶ್ನೆ ಎದುರಾಯಿತು.

ದಳಪತಿ ವಿಜಯ್ ಸಿಎಂ ಆದ ಪ್ರಸ್ತಾಪ:

ಈ ವೇಳೆ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಸ್ತಾಪವಾಯಿತು. ಅಲ್ಲಿ ಸ್ಟಾರ್ ನಟ ದಳಪತಿ ವಿಜಯ್ ತಮ್ಮದೇ ಆದ ಹೊಸ ಪಕ್ಷ ಕಟ್ಟಿ, ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿ ನೇರವಾಗಿ ಮುಖ್ಯಮಂತ್ರಿಯಾಗಿದ್ದಾರೆ. ತಮಿಳುನಾಡಿನಲ್ಲಿ ಕಲಾವಿದರು ರಾಜಕೀಯಕ್ಕೆ ಬಂದು ಯಶಸ್ವಿಯಾಗುವುದು ಸಾಮಾನ್ಯ. ‘ನಿಮಗೂ ಅಂತಹದ್ದೇ ದೊಡ್ಡ ರಾಜಕೀಯ ಹಿನ್ನೆಲೆ ಮತ್ತು ಜನಪ್ರಿಯತೆ ಇದೆ. ತಮಿಳುನಾಡು ರಾಜಕೀಯ ಹಾಗೂ ವಿಜಯ್ ಅವರ ಯಶಸ್ಸನ್ನು ನೋಡಿದ ಮೇಲೆ, ನೀವು ಕೂಡ ಒಮ್ಮೆ ಇಂತಹ ಪ್ರಯೋಗವನ್ನು ಮಾಡಬಾರದೇ?’ ಎಂದು ರಿತೇಶ್ ಅವರನ್ನು ಕೇಳಲಾಯಿತು.

ಈ ಪ್ರಶ್ನೆಗೆ ರಿತೇಶ್ ದೇಶಮುಖ್ ಅತ್ಯಂತ ಚುರುಕಾಗಿ ಮತ್ತು ಪವರ್‌ಫುಲ್ ಆಗಿ ಉತ್ತರಿಸಿದ್ದಾರೆ. ‘ನಟ ವಿಜಯ್ ಅವರಿಗೆ ಇರುವ ಜನಪ್ರಿಯತೆ ಹಾಗೂ ಕ್ರೇಜ್ ಏನು ಎಂಬುದು ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ, ನಾನು ಮಾತ್ರ ಖಂಡಿತವಾಗಿಯೂ ಅಂತಹ ಯಾವುದೇ ರಾಜಕೀಯ ಪ್ರಯೋಗಕ್ಕೆ ಕೈ ಹಾಕುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ‘ಸ್ಲಮ್ ಡಾಗ್’ ಟೀಸರ್: ವಿಜಯ್ ಸೇತುಪತಿ ಜೊತೆ ದುನಿಯಾ ವಿಜಯ್ ಪಾತ್ರವೂ ಹೈಲೈಟ್

‘ಒಂದು ವೇಳೆ ನಾನು ರಾಜಕೀಯಕ್ಕೆ ಪ್ರವೇಶಿಸಿದರೆ, ಆಗ ನೀವೇ (ಮಾಧ್ಯಮಗಳು ಮತ್ತು ಜನರು) ಒಂದೇ ಕುಟುಂಬದ ಎಷ್ಟು ಜನ ರಾಜಕೀಯಕ್ಕೆ ಬರುತ್ತಾರೆ? ಎಂದು ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಶುರು ಮಾಡುತ್ತೀರಿ’ ಎಂದು ರಿತೇಶ್ ತಮಾಷೆಯಾಗಿಯೇ ಟಾಂಗ್ ನೀಡಿದ್ದಾರೆ. ಸದ್ಯ ರಾಜಕೀಯ ಎಂಟ್ರಿ ಮತ್ತು ಕುಟುಂಬ ರಾಜಕಾರಣದ ಕುರಿತು ರಿತೇಶ್ ದೇಶಮುಖ್ ನೀಡಿರುವ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:13 am, Tue, 9 June 26

Follow Us