SS Rajamouli: ರಾಮ್ ಚರಣ್, ಜೂ. ಎನ್ಟಿಆರ್ಗೆ ಮಣೆಹಾಕಿ ರಾಜಮೌಳಿಯನ್ನು ಕಡೆಗಣಿಸಿದ ಆಸ್ಕರ್; ಅಭಿಮಾನಿಗಳಿಗೆ ಅಸಮಾಧಾನ
Academy Members: ಜಾಗತಿಕ ಮಟ್ಟದಲ್ಲಿ ‘ಆರ್ಆರ್ಆರ್’ ಸಿನಿಮಾಗೆ ಮನ್ನಣೆ ಸಿಗಲು ರಾಜಮೌಳಿ ಅವರ ಕೊಡುಗೆ ದೊಡ್ಡದು. ಅವರಿಗೆ ಆಸ್ಕರ್ ಸದಸ್ಯತ್ವ ಸಿಗಬೇಕು ಎಂಬುದು ಫ್ಯಾನ್ಸ್ ಒತ್ತಾಯ.
ಭಾರತದಲ್ಲಿ ಆಸ್ಕರ್ ಪ್ರಶಸ್ತಿ (Oscars) ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ. ಕೆಲವೇ ತಿಂಗಳ ಹಿಂದೆ ‘ಆರ್ಆರ್ಆರ್’ (RRR Movie) ಸಿನಿಮಾದ ‘ನಾಟು ನಾಟು..’ ಹಾಡಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಾಗ ಎಲ್ಲರೂ ಸಂಭ್ರಮಿಸಿದ್ದರು. ಆ ಹಾಡಿನಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಮಾಡಿದ ಡ್ಯಾನ್ಸ್ ಸಖತ್ ಟ್ರೆಂಡ್ ಆಗಿತ್ತು. ಆಸ್ಕರ್ ವೇದಿಕೆ ಏರಿದ್ದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಗೀತರಚನಾಕಾರ ಚಂದ್ರಬೋಸ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿತ್ತು. ಈಗ ಇನ್ನೂ ಹೆಚ್ಚು ಖುಷಿಪಡುವಂತಹ ಬೆಳವಣಿಗೆ ಆಗಿದೆ. ‘ಆರ್ಆರ್ಆರ್’ ತಂಡದ 6 ಜನರಿಗೆ ಆಸ್ಕರ್ ಸದಸ್ಯತ್ವ ನೀಡಲಾಗಿದೆ. ಆದರೆ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರಿಗೆ ಈ ಗೌರವ ಸಿಕ್ಕಿಲ್ಲ ಎಂಬುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಸಾಹಿತಿ ಚಂದ್ರಬೋಸ್, ಕ್ಯಾಮೆರಾಮ್ಯಾನ್ ಸೆಂಥಿಲ್ ಕುಮಾರ್ ಮತ್ತು ಪ್ರೊಡಕ್ಷನ್ ಡಿಸೈನರ್ ಸಾಬು ಸಿರೀಲ್ ಅವರಿಗೆ ಆಸ್ಕರ್ ಸದಸ್ಯತ್ವ ಸಿಕ್ಕಿದೆ. ಮುಂದಿನ ವರ್ಷ ಆಸ್ಕರ್ ಪ್ರಶಸ್ತಿಗೆ ಹಣಾಹಣಿ ನಡೆಸುವ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಈ ಸದಸ್ಯರು ವೋಟ್ ಮಾಡುವ ಅಧಿಕಾರ ಪಡೆದಿದ್ದಾರೆ. ಆದರೆ ಆಸ್ಕರ್ ಸಮಿತಿಯವರು ರಾಜಮೌಳಿಯನ್ನು ಕಡೆಗಣಿಸಿರುವುದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: SS Rajamouli: ಆಸ್ಕರ್ ಸದಸ್ಯತ್ವ ಪಡೆದವರಿಗೆ ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ
ಜಾಗತಿಕ ಮಟ್ಟದಲ್ಲಿ ‘ಆರ್ಆರ್ಆರ್’ ಸಿನಿಮಾಗೆ ಮನ್ನಣೆ ಸಿಗಲು ರಾಜಮೌಳಿ ಅವರ ಕೊಡುಗೆ ಜಾಸ್ತಿ ಇದೆ. ದೊಡ್ಡ ಕ್ಯಾನ್ವಾಸ್ನಲ್ಲಿ ಸಿನಿಮಾ ಮಾಡುವುದು ಹೇಗೆ ಎಂಬ ಕಲೆ ಅವರಿಗೆ ಸಿದ್ಧಿಸಿದೆ. ಬಿಗ್ ಪ್ರಾಜೆಕ್ಟ್ಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಅವರು ಈಗ ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ‘ಆರ್ಆರ್ಆರ್’ ಚಿತ್ರದ ಮಾಸ್ಟರ್ ಮೈಂಡ್ ಅವರು. ಅಂಥ ನಿರ್ದೇಶಕನಿಗೆ ಆಸ್ಕರ್ ಸದಸ್ಯತ್ವ ಸಿಗಬೇಕು ಎಂಬುದು ಫ್ಯಾನ್ಸ್ ಒತ್ತಾಯ.
ಇದನ್ನೂ ಓದಿ: SS Rajamouli: ಡಬಲ್ ರೋಲ್ನಲ್ಲಿ ಮಿಂಚಿದ ನಟ ಎಸ್.ಎಸ್. ರಾಜಮೌಳಿ; ಅರೆ ಇದೇನಿದು ಹೊಸ ಅಪ್ಡೇಟ್?
ತಮಗೆ ಆಸ್ಕರ್ ಸದಸ್ಯತ್ವ ಸಿಕ್ಕಿಲ್ಲ ಎಂದು ರಾಜಮೌಳಿ ಕಿಂಚಿತ್ತೂ ಬೇಸರ ಮಾಡಿಕೊಳ್ಳಲಿಲ್ಲ. ತಮ್ಮ ತಂಡದವರಿಗೆ ಗೌರವ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ‘ಆಸ್ಕರ್ ಸದಸ್ಯತ್ವ ಪಡೆಯಲು ನಮ್ಮ RRR ಸಿನಿಮಾ ತಂಡದ 6 ಜನರಿಗೆ ಈ ವರ್ಷ ಆಹ್ವಾನ ಬಂದಿರುವುದಕ್ಕೆ ನನಗೆ ತುಂಬ ಹೆಮ್ಮೆಯೆನಿಸುತ್ತಿದೆ. ತಾರಕ್, ಚರಣ್, ಪೆದ್ದಣ್ಣ, ಸಾಬು ಸರ್, ಸೇಂಥಿಲ್ ಹಾಗೂ ಚಂದ್ರಬೋಸ್ ಅವರಿಗೆ ನನ್ನ ಅಭಿನಂದನೆ. ಆಸ್ಕರ್ ಸದಸ್ಯತ್ವಕ್ಕೆ ಆಹ್ವಾನಿತರಾಗಿರುವ ಭಾರತೀಯ ಚಿತ್ರರಂಗದ ಇತರರಿಗೂ ಅಭಿನಂದನೆ ತಿಳಿಸುತ್ತೇನೆ’ ಎಂದು ರಾಜಮೌಳಿ ಪೋಸ್ಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.