RRR: ಬೆಂಗಳೂರಲ್ಲಿ ತೆಲುಗು ನಟರನ್ನು ನೋಡಲು ಮುಗಿಬಿದ್ದ ಜನ; ಆರ್ಆರ್ಆರ್ ಸುದ್ದಿಗೋಷ್ಠಿ ವೇಳೆ ನೂಕುನುಗ್ಗಲು
RRR Movie Press Meet: ‘ಆರ್ಆರ್ಆರ್’ ಸಿನಿಮಾದ ಪ್ರಚಾರಕ್ಕಾಗಿ ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಬೆಂಗಳೂರಿಗೆ ಬರುತ್ತಾರೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಅನೇಕ ಅಭಿಮಾನಿಗಳು ಮಾಲ್ ಆವರಣಕ್ಕೆ ಬಂದು ಜಮಾಯಿಸಿದ್ದರು. ಜನರನ್ನು ನಿಯಂತ್ರಿಸುವುದೇ ಕಷ್ಟವಾಗಿತ್ತು.
ಪರಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡುತ್ತವೆ. ತೆಲುಗು, ತಮಿಳು ಚಿತ್ರಗಳನ್ನು ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತದೆ. ಪರಭಾಷೆ ನಟರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಕರುನಾಡಿನಲ್ಲಿ ಇದ್ದಾರೆ. ಅದರಲ್ಲೂ ಜ್ಯೂ. ಎನ್ಟಿಆರ್ (Jr NTR), ರಾಮ್ ಚರಣ್ (Ram Charan) ಅವರಿಗೆ ಕರ್ನಾಟದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇವರಿಬ್ಬರು ನಟಿಸಿರುವ ‘ಆರ್ಆರ್ಆರ್’ (RRR) ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಆದ್ದರಿಂದ ಕರ್ನಾಟಕದಲ್ಲೂ ಈ ಸಿನಿಮಾವನ್ನು ಪ್ರಚಾರ ಮಾಡಲಾಗುತ್ತಿದೆ. ನಿರ್ದೇಶಕ ರಾಜಮೌಳಿ (SS Rajamouli) ಅವರ ಜತೆ ಕಲಾವಿದರಾದ ಜ್ಯೂ. ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್ ಕೂಡ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಮುಗಿಬಿದ್ದರು.
2022ರ ಜ.7ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಡಿ.9ರಂದು ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜನೆಗೊಂಡಿದೆ. ಯಶವಂತಪುರದಲ್ಲಿ ಇರುವ ಓರಾಯನ್ ಮಾಲ್ಗೆ ಇಡೀ ಆರ್ಆರ್ಆರ್ ತಂಡ ಆಗಮಿಸಿತ್ತು. ಜ್ಯೂ. ಎನ್ಟಿಆರ್, ರಾಮ್ ಚರಣ್ ಬರುತ್ತಾರೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಅನೇಕ ಅಭಿಮಾನಿಗಳು ಮಾಲ್ ಆವರಣಕ್ಕೆ ಬಂದು ಜಮಾಯಿಸಿದ್ದರು.
‘ಬಾಹುಬಲಿ’ ಯಶಸ್ಸಿನ ಬಳಿಕ ರಾಜಮೌಳಿ ನಿರ್ದೇಶಿಸಿರುವ ಸಿನಿಮಾ ಇದಾಗಿರುವುದರಿಂದ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಅಜಯ್ ದೇವಗನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಎಂ.ಎಂ. ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಸೂಪರ್ ಹಿಟ್ ಆಗಿವೆ. ‘ಆರ್ಆರ್ಆರ್’ ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡಿದೆ. ಬಾಕ್ಸ್ ಆಫೀಸ್ನಲ್ಲೂ ಈ ಸಿನಿಮಾ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಪುಷ್ಪ, ಆರ್ಆರ್ಆರ್ ಮೀರಿಸಿ ಟ್ರೆಂಡ್ ಆದ ‘ಗಂಧದ ಗುಡಿ’; ಪುನೀತ್ ಡಾಕ್ಯುಮೆಂಟರಿಗೆ ಬಹುಪರಾಕ್