Sai Pallavi: ‘ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುವ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡೂ ಒಂದೇ’: ಸಾಯಿ ಪಲ್ಲವಿ
Sai Pallavi | Kashmiri Pandits: ‘ನಾನು ಯಾವ ಪಂಥಕ್ಕೂ ಸೇರುವವಳಲ್ಲ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಜೊತೆಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಮಾತನಾಡಲು ಕೂಡ ಅವರು ಹಿಂಜರಿದಿಲ್ಲ.

ನಟಿ ಸಾಯಿ ಪಲ್ಲವಿ (Sai Pallavi) ಅವರು ಸಾಧ್ಯವಾದಷ್ಟು ಕಾಂಟ್ರವರ್ಸಿಯಿಂದ ದೂರ ಇರುತ್ತಾರೆ. ಆದರೆ ಈಗ ಅವರು ನೀಡಿದ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ. ಸಾಯಿ ಪಲ್ಲವಿ ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಯುಕ್ತ ಅನೇಕ ಕಡೆಗಳಲ್ಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ‘ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆ ಮತ್ತು ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ (Lynching) ಎರಡೂ ಒಂದೇ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಅವರ ಹೇಳಿಕೆ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ. ಟ್ವಿಟರ್ನಲ್ಲಿ #SaiPallavi ಹ್ಯಾಶ್ ಟ್ಯಾಗ್ ಟ್ರೆಂಡ್ ಕೂಡ ಆಗಿದೆ. ಕೆಲವರು ಸಾಯಿ ಪಲ್ಲವಿಯ ಹೇಳಿಕೆಗೆ ಭೇಷ್ ಎಂದಿದ್ದಾರೆ. ಇನ್ನೂ ಕೆಲವರು ತೀವ್ರವಾಗಿ ಖಂಡಿಸಿದ್ದಾರೆ.
‘ವಿರಾಟ ಪರ್ವಂ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ನಕ್ಸಲೈಟ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರಿಯಲ್ ಲೈಫ್ನಲ್ಲಿ ನೀವು ಎಡಪಂಥೀಯ ವಿಚಾರಗಳಿಂದ ಪ್ರೇರೇಪಿತರಾಗಿದ್ದೀರಾ’ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಈ ರೀತಿ ಉತ್ತರಿಸಿದ್ದಾರೆ. ‘ನಾನು ಯಾವ ಪಂಥಕ್ಕೂ ಸೇರುವವಳಲ್ಲ’ ಎಂದು ಹೇಳಿದ್ದಾರೆ. ಜೊತೆಗೆ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಮಾತನಾಡಲು ಕೂಡ ಅವರು ಹಿಂಜರಿದಿಲ್ಲ.
ಇದನ್ನೂ ಓದಿ: Sai Pallavi: ಮೈ ಕಾಣುವಂತೆ ಬಟ್ಟೆ ಧರಿಸಬಾರದು ಅಂತ ಸಾಯಿ ಪಲ್ಲವಿ ನಿರ್ಧಾರ ಮಾಡಿದ್ದು ಯಾಕೆ? ಸತ್ಯ ಬಾಯ್ಬಿಟ್ಟ ನಟಿ
ಸಾಯಿ ಪಲ್ಲವಿ ಹೇಳಿದ್ದೇನು?
‘ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಲಾಯಿತು ಎಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಲಾಗಿದೆ. ಅದನ್ನು ನೀವು ಒಂದು ಧಾರ್ಮಿಕ ಸಂಘರ್ಷ ಎಂದು ನೋಡುವುದಾದರೆ, ಇತ್ತೀಚೆಗೆ ಗೋವು ಸಾಗಿಸುತ್ತಿದ್ದ ಒಬ್ಬ ಮುಸ್ಲಿಂ ಡ್ರೈವರ್ ಮೇಲೆ ಹಲ್ಲೆ ಮಾಡಲಾಯಿತು ಹಾಗೂ ಜೈ ಶ್ರೀರಾಮ್ ಎಂದು ಹೇಳುವಂತೆ ಬಲವಂತ ಮಾಡಲಾಯಿತು. ಈ ಎರಡು ಘಟನೆಗಳ ನಡುವೆ ವ್ಯತ್ಯಾಸ ಎಲ್ಲಿದೆ? ನಾವು ಒಳ್ಳೆಯ ಮನುಷ್ಯರಾಗಿರಬೇಕು’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:30 am, Thu, 16 June 22