‘ಅಸೂಯೆಗೆ ನನ್ನಲ್ಲಿ ಜಾಗವಿಲ್ಲ’; ಮಾಜಿ ಪತಿಯ ಮದುವೆ ಬಗ್ಗೆ ಸಮಂತಾ ಪ್ರತಿಕ್ರಿಯೆ
ಸಮಂತಾ ರೂತ್ ಪ್ರಭು ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಅವರ ಮರುಮದುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಯಾವುದೇ ಅಸೂಯೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರೂ, ಧನಾತ್ಮಕವಾಗಿರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಸೂಯೆ ಅನಾರೋಗ್ಯಕರ ಎಂದು ಅವರು ನಂಬುತ್ತಾರೆ.

ನಟಿ ಸಮಂತಾ ಅವರು ಹೊಸ ಸಿನಿಮಾಗಳನ್ನು ಘೋಷಿಸುತ್ತಿಲ್ಲ. ಇದರ ಜೊತೆಗೆ ಅನಾರೋಗ್ಯ ಸಮಸ್ಯೆ. ಹೀಗೆ ವಿಚ್ಛೇದನದ ಬಳಿಕ ಸಮಂತಾ ಅವರು ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ. ಈ ಮಧ್ಯೆ ನಾಗ ಚೈತನ್ಯ ಅವರ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವರು ಎರಡನೇ ಮದುವೆ ಕೂಡ ಆಗಿದ್ದಾರೆ. ಈ ವಿಚಾರದಲ್ಲಿ ಸಮಂತಾಗೆ ಅಸೂಯೆ ಇದೆಯೇ? ಈ ಬಗ್ಗೆ ಅವರು ಮೌನ ಮುರಿದಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ‘ಅಸೂಯೆಗೆ ನನ್ನಲ್ಲಿ ಜಾಗವಿಲ್ಲ’ ಎಂದಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಪ್ರೀತಿಸಿ ಮದುವೆ ಆದರು. ಆದರೆ, ನಾಲ್ಕು ವರ್ಷಕ್ಕೆ ಇವರ ಸಂಸಾರ ಕೊನೆ ಆಯಿತು. 2021ರಲ್ಲಿ ಇಬ್ಬರೂ ಬೇರೆ ಆದರು. ಈಗ ನಾಗ ಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ್ ಅವರನ್ನು ವಿವಾಹ ಆಗಿದ್ದಾರೆ. ‘ಜಿಕ್ಯೂ’ಗೆ ನೀಡಿದ ಸಂದರ್ಶನದಲ್ಲಿ ಸಮಂತಾಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ.
‘ನಿಮ್ಮ ಎಕ್ಸ್ (ಮಾಜಿ ಪತಿ) ಜೀವನದಲ್ಲಿ ಎಲ್ಲವನ್ನೂ ಮರೆತು ಮುಂದೆ ಹೋಗಿದ್ದಾರೆ. ಮತ್ತೊಂದು ಸಂಬಂಧದಲ್ಲಿ ಇದ್ದಾರೆ. ಈ ಬಗ್ಗೆ ನಿಮಗೆ ಅಸೂಯೆ ಇದೆಯೇ’ ಎಂದು ಕೇಳಲಾಗಿದೆ. ಇದಕ್ಕೆ ಸಮಂತಾ ನೇರ ಮಾತುಗಳಲ್ಲಿ ಉತ್ತರ ನೀಡಿದ್ದಾರೆ. ‘ನನ್ನ ಹೃದಯದಲ್ಲಿ ಅಸೂಯೆಗೆ ಜಾಗವೇ ಇಲ್ಲ’ ಎಂದು ಸಮಂತಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಫೋಟೋ ಹಂಚಿಕೊಂಡ ನಟಿ
‘ನನ್ನ ಜೀವನದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ನೋಡಿದ್ದೇನೆ. ಆದಾಗ್ಯೂ ಒಳ್ಳೆಯದು ಮಾಡಬೇಕು ಎಂಬುದು ನನ್ನ ಉದ್ದೇಶ. ನಾನು ಅಸೂಯೆಯಿಂದ ಸಂಪೂರ್ಣವಾಗಿ ದೂರವೇ ಇದ್ದೇನೆ. ಅದು ನನ್ನ ಅಂತರಂಗದ ಭಾಗವಾಗಿರಲು ನನಗೆ ಇಷ್ಟ ಇಲ್ಲ. ಏನೇ ಕೆಡುಕಾದರೂ ಅದಕ್ಕೆ ಅಸೂಯೆ ಮೂಲ ಕಾರಣ ಎಂದು ನಾನು ಭಾವಿಸುತ್ತೇನೆ. ಉಳಿದಂತೆ ಎಲ್ಲವೂ ಚೆನ್ನಾಗಿದೆ. ಅಸೂಯೆಯಷ್ಟು ಅನಾರೋಗ್ಯಕರವಾದ ವಿಚಾರಕ್ಕೆ ನನ್ನಲ್ಲಿ ಜಾಗವಿಲ್ಲ’ ಎಂದು ಸಮಂತಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.