ಮತ್ತೆ ಕ್ಷಮೆ ಕೇಳಿದ ಕಾಮಿಡಿಯನ್ ಸಮಯ್ ರೈನಾ; ಒಪ್ಪಲು ಸಾಧ್ಯವಿಲ್ಲ ಎಂದ ಫ್ಯಾನ್ಸ್
ಹಾಸ್ಯಗಾರ ಸಮಯ್ ರೈನಾ ತಮ್ಮ ವಿವಾದಾತ್ಮಕ ಜೋಕ್‌ಗಳಿಗಾಗಿ ಮತ್ತೆ ಕ್ಷಮೆಯಾಚಿಸಿದ್ದಾರೆ. ವಿಕಲಚೇತನರ ಬಗ್ಗೆ ಮಾಡಿದ ಅಸಭ್ಯ ಕಾಮೆಂಟ್‌ಗಳ ಕುರಿತು ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಅವರು ಹುಟ್ಟುಹಬ್ಬದಂದೇ ಕ್ಷಮೆ ಕೋರಿದ್ದಾರೆ. ಅವರ ಹಿಂದಿನ 'ಇಂಡಿಯಾಸ್ ಗಾಟ್ ಲೇಟೆಂಟ್' ಶೋ ಬಂದ್ ಆಗಲು ಇದೇ ರೀತಿಯ ವಿವಾದಗಳು ಕಾರಣವಾಗಿದ್ದವು.

ಕಾಮಿಡಿಯನ್ ಸಮಯ್ ರೈನಾ ಅವರು ವಿವಾದದ ಮೇಲೆ ವಿವಾದ ಮಾಡಿಕೊಂಡಿದ್ದು ಗೊತ್ತೇ ಇದೆ. ಇದರಿಂದ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಸಂಪೂರ್ಣವಾಗಿ ಬಂದ್ ಆಯಿತು. ಪಾಲಕರ ಲೈಂಗಿಕತೆ ಬಗ್ಗೆ ಶೋನಲ್ಲಿ ಮಾಡಿದ ಕಾಮಿಡಿ ಇದಕ್ಕೆ ಕಾರಣ. ಈಗ ಅವರು ಮತ್ತೆ ಕ್ಷಮೆ ಕೇಳುವ ಪರಿಸ್ಥಿತಿ ಬಂದಿದೆ. ತಮ್ಮ ಜನ್ಮದಿನ ಆಚರಣೆ ಮಾಡಿಕೊಳ್ಳುವ ಬದಲು ಕ್ಷಮೆ ಕೇಳಿದ್ದಾರೆ.
ವಿಕಲನಚೇತರ ಬಗ್ಗೆ ಸಮಯ್ ರೈನಾ ಈ ಮೊದಲು ಹೇಳಿಕೆ ನೀಡಿದ್ದರು. ತಮ್ಮದೇ ಶೋ ‘ಇಂಡಿಯಾಸ್ ಗಾಟ್ ಲೇಟೆಂಟ್’ನಲ್ಲಿ ಈ ಹೇಳಿಕೆ ನೀಡಲಾಗಿತ್ತು. 2 ತಿಂಗಳ ಮಗು ಒಂದಕ್ಕೆ ಅಪರೂಪದ ಕಾಯಿಲೆ ಇತ್ತು. ಇದಕ್ಕೆ 16 ಕೋಟಿ ರೂ. ವೆಚ್ಚದ ಇಂಜೆಕ್ಷನ್ ಅಗತ್ಯವಿತ್ತು. ಇದರ ಬಗ್ಗೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ಜೋಕ್ ಮಾಡಿದ್ದರು. ಈ ಪ್ರಕರಣದಲ್ಲಿ ಕ್ಷಮೆ ಕೇಳುವಂತೆ ಸುಪ್ರೀಂ ಕೋರ್ಟ್ ಸಮಯ್ಗೆ ಸೂಚಿಸಿತ್ತು.
ತಮ್ಮ ಹುಟ್ಟುಹಬ್ಬದಂದು ಈ ಬಗ್ಗೆ ಹೇಳಿಕೆಯನ್ನು ಹಂಚಿಕೊಂಡ ಸಮಯ್, ಈ ಹಿಂದಿನ ಕಾಮೆಂಟ್‌ಗಳಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ‘ಇಂದು ನನ್ನ ಹುಟ್ಟುಹಬ್ಬ ಮತ್ತು ಇದನ್ನು ಆಚರಿಸುವ ಬದಲು, ವರ್ಷದ ಅತ್ಯಂತ ವಿಶೇಷ ದಿನವನ್ನು ವಿಶೇಷ ಚೇತನರಿಗೆ ಕ್ಷಮೆಯಾಚಿಸಲು ಬಳಸುತ್ತೇನೆ’ ಎಂದು ಅವರು ಹೇಳಿದ್ದಾರೆ.
‘ನನ್ನ ಜೊತೆ ಇದ್ದ ವಿಪುಲ್ ಗೋಯಲ್, ಸೋನಾಲಿ ಠಕ್ಕರ್, ನಿಶಾಂತ್ ತನ್ವರ್, ಬಲರಾಜ್ ಘಾಯ್ ಅವರಿಂದ ಉಂಟಾದ ನೋವಿಗೆ ತೀವ್ರವಾಗಿ ವಿಷಾದಿಸುತ್ತೇವೆ. ಮುಂದೆ, ನಾವು ಹೆಚ್ಚು ಜಾಗರೂಕರಾಗಿರುತ್ತೇವೆ. ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನಿಮ್ಮ ಶಕ್ತಿ ನಮಗೆ ಬೆಳೆಯಲು ಸ್ಫೂರ್ತಿ ನೀಡುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ‘ಇಂಡಿಯಾಸ್ ಗಾಟ್ ಲೇಟೆಂಟ್’ ಪುನರಾರಂಭ ಯಾವಾಗ? ಸಮಯ್ ರೈನಾ ಉತ್ತರವೇನು?
‘ನ್ಯಾಯಾಲಯವು ಅವರ ಕಾಮೆಂಟ್‌ಗಳನ್ನು ಟೀಕಿಸಿ ಸಮಯ್ ಬಳಿ ಕ್ಷಮೆ ಕೇಳಲು ಸೂಚಿಸಿತ್ತು. ಈ ಕಾರಣದಿಂದ ಮಾತ್ರ ಸಮಯ್ ಕ್ಷಮೆ ಕೇಳಿದ್ದಾರೆ, ಇಲ್ಲದಿದ್ದರೆ ಆ ಕೆಲಸವನ್ನು ಅವರು ಮಾಡುತ್ತಿರಲಿಲ್ಲ’ ಎಂದು ಅನೇಕರು ಹೇಳಿಕೆ ನೀಡಿದ್ದಾರೆ. ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







