‘ಫೋರ್ ವಾಲ್ಸ್ ಆ್ಯಂಡ್ ಟು ನೈಟೀಸ್’; ಶೀರ್ಷಿಕೆ ನೋಡಿ ಇದು ಅಂಥ ಸಿನಿಮಾ ಅಂದುಕೊಳ್ಳಬೇಡಿ: ಕಥೆ ಬೇರೆಯೇ ಇದೆ
ಹುಟ್ಟು, ಸಾವು, ಅಳು, ನಗು ಇವುಗಳೇ ಫೋರ್ ವಾಲ್ಸ್ ಎಂದಿದ್ದಾರೆ ನಿರ್ದೇಶಕರು. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮತ್ತು ಡಾ. ಪವಿತ್ರಾ ಜೋಡಿಯಾಗಿ ನಟಿಸಿದ್ದಾರೆ.
ಅನುಭವಿ ಕಲಾವಿದ ಅಚ್ಯುತ್ ಕುಮಾರ್ (Achyuth Kumar) ಅವರು ‘ಫೋರ್ ವಾಲ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ಮತ್ತು ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಸಾಮಾನ್ಯವಾಗಿ ಪೋಷಕ ಪಾತ್ರಗಳನ್ನು ಮಾಡುವ ಅಚ್ಯುತ್ ಕುಮಾರ್ ಅವರಿಗೆ ‘ಫೋರ್ ವಾಲ್ಸ್’ (Four Walls Movie) ಚಿತ್ರದಲ್ಲಿ ಪ್ರಧಾನ ಪಾತ್ರವಿದೆ. ‘ಆ್ಯಂಡ್ ಟು ನೈಟೀಸ್’ ಎಂಬುದು ಈ ಸಿನಿಮಾದ ಟ್ಯಾಗ್ ಲೈನ್. ತಕ್ಷಣಕ್ಕೆ ಈ ಶೀರ್ಷಿಕೆ ನೋಡಿದರೆ ಮನಸ್ಸಿನಲ್ಲಿ ಬೇರೆ ಬೇರೆ ಕಲ್ಪನೆಗಳು ಮೂಡುವುದು ಸಹಜ. ಆದರೆ ಈ ಸಿನಿಮಾದ (Kannada Movie) ಕಥೆ ಆ ರೀತಿ ಇಲ್ಲ. ಸ್ವತಃ ಅಚ್ಯುತ್ ಕುಮಾರ್ ಅವರಿಗೂ ಮೊದಲ ಬಾರಿಗೆ ಇದೇ ರೀತಿಯ ಅಭಿಪ್ರಾಯ ಇತ್ತಂತೆ. ಬಳಿಕ ನಿರ್ದೇಶಕರು ಕಥೆ ವಿವರಿಸಿದಾಗ ಅವರಿಗೆ ಶೀರ್ಷಿಕೆಯ ಮಹತ್ವ ಅರ್ಥವಾಯ್ತು. ನಂತರ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಸಿನಿಮಾ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಟಿ. ವಿಶ್ವನಾಥ್ ನಾಯಕ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎಸ್.ಎಸ್. ಸಜ್ಜನ್ ನಿರ್ದೇಶನ ಮಾಡಿದ್ದಾರೆ.
‘ನಿರ್ದೇಶಕರು ಕಥೆ ಹೇಳಲು ಬಂದಾಗ ಈ ಚಿತ್ರದ ಶೀರ್ಷಿಕೆ ನೋಡಿ ಇದೇನೋ ಬಿ ಗ್ರೇಡ್ ಸಿನಿಮಾ ಇರಬೇಕು ಅಂದುಕೊಂಡಿದ್ದೆ. ಇದರಲ್ಲಿ ನಟಿಸಿದರೆ ಮಾನ ಮರ್ಯಾದೆ ಹೋಗುತ್ತೆ ಅಂತ ಭಾವಿಸಿದ್ದೆ. ಆದರೆ ನಿರ್ದೇಶಕರು ಪೂರ್ತಿ ಕಥೆ ವಿವರಿಸಿದ ಬಳಿಕ ನನ್ನ ಭಾವನೆ ಬದಲಾಯಿತು. ಇದು ಒಂದು ಫ್ಯಾಮಿಲಿ ಎಂಟರ್ಟೇನರ್ ಸಿನಿಮಾ. ಕುಟುಂಬ ಸಮೇತ ಕುಳಿತು ನೋಡಬಹುದು. ಎಲ್ಲ ಪ್ರೇಕ್ಷಕರಿಗೂ ಈ ಕಥೆ ಕನೆಕ್ಟ್ ಆಗುತ್ತದೆ’ ಎಂದು ಅಚ್ಯುತ್ ಕುಮಾರ್ ಹೇಳಿದ್ದಾರೆ.
ಹುಟ್ಟು, ಸಾವು, ಅಳು, ನಗು ಇವುಗಳೇ ಫೋರ್ ವಾಲ್ಸ್ ಎಂದಿದ್ದಾರೆ ನಿರ್ದೇಶಕರು. ಆದರೆ ಹೆಚ್ಚಿನ ವಿವರವನ್ನು ಅವರು ಬಿಟ್ಟುಕೊಟ್ಟಿಲ್ಲ. ಈ ಸಿನಿಮಾದಲ್ಲಿ ಸುಜಯ್ ಶಾಸ್ತ್ರಿ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅಚ್ಯುತ್ ಕುಮಾರ್ ಜೊತೆ ರಂಗಭೂಮಿ ಕಲಾವಿದೆ ಡಾ. ಪವಿತ್ರಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಡಾ. ಜಾಹ್ನವಿ ಜ್ಯೋತಿ, ಭಾಸ್ಕರ್ ನೀನಾಸಂ, ರಚನಾ ಮುಂತಾದವರು ಅಭಿನಯಿಸಿದ್ದಾರೆ.
ಈ ಸಿನಿಮಾದ ಹಾಡುಗಳಿಗೆ ಆನಂದ್ ರಾಜಾವಿಕ್ರಮ ಅವರು ಸಂಗೀತ ನೀಡಿದ್ದಾರೆ. ‘ರಾಮಾ ರಾಮಾರೇ’ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಅವರ ‘ಸತ್ಯ ಸಿನಿ ಡಿಸ್ಟ್ರಿಬ್ಯೂಷನ್’ ಮೂಲಕ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ನಿರ್ಮಾಪಕರು ರಿಲೀಸ್ ದಿನಾಂಕ ತಿಳಿಸಲಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.
ಈ ಸಿನಿಮಾದ ಕ್ಲೈಮ್ಯಾಕ್ಸ್ ತುಂಬ ಎಮೋಷನಲ್ ಆಗಿದೆ. ಈಗಾಗಲೇ ಸಿನಿಮಾ ನೋಡಿರುವ ಕೆಲವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಲಿದೆ ಎಂದು ‘ಫೋರ್ ವಾಲ್ಸ್’ ತಂಡ ಹೇಳಿಕೊಂಡಿದೆ. ವಿತರಕ/ನಿರ್ದೇಶಕ ಸತ್ಯ ಪ್ರಕಾಶ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:
ಪುನೀತ್ ಬರ್ತ್ಡೇ ಹೇಗೆ ಆಚರಿಸಬೇಕು? ಅಪ್ಪು ಫ್ಯಾನ್ಸ್ಗೆ ರಾಘಣ್ಣ ನೀಡಿದ ವಿಶೇಷ ಸಲಹೆ ಇಲ್ಲಿದೆ..
ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್ ಎಂದು ನಾಮಕರಣ