‘ಆ ಪಾತ್ರದಲ್ಲಿ ನಟಿಸಲ್ಲ’ ಎಂದಿದ್ದೇಕೆ ರಾಧಿಕಾ ಪಂಡಿತ್, ಶ್ರದ್ಧಾ ಶ್ರೀನಾಥ್? ಕಾರಣ ತಿಳಿಸಿದ ‘ಡಿಎನ್ಎ’ ನಿರ್ದೇಶಕ
‘ಕಲಾವಿದರಿಗೋಸ್ಕರ ನಾನು ಕಥೆ ಆಯ್ಕೆ ಮಾಡಿಕೊಂಡಿಲ್ಲ. ಕಥೆಗಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡೆ’ ಎನ್ನುವ ಮೂಲಕ ‘ಡಿಎನ್ಎ’ ಚಿತ್ರದ ಪಾತ್ರವರ್ಗದ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕ ಪ್ರಕಾಶ್ರಾಜ್ ಮೇಹು.
ಕನ್ನಡ ಚಿತ್ರರಂಗದಲ್ಲಿ ನಟಿಯರಾದ ರಾಧಿಕಾ ಪಂಡಿತ್ (Radhika Pandit) ಮತ್ತು ಶ್ರದ್ಧಾ ಶ್ರೀನಾಥ್ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಿರುವ ರಾಧಿಕಾ ಪಂಡಿತ್ ಅವರು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅತ್ತ, ಶ್ರದ್ಧಾ ಶ್ರೀನಾಥ್ (Shraddha Srinath) ಅವರು ಬೇರೆ ಭಾಷೆಯ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಈ ವಾರ (ಜ.28) ಬಿಡುಗಡೆ ಆಗುತ್ತಿರುವ ‘ಡಿಎನ್ಎ’ (DNA Kannada Movie) ಸಿನಿಮಾದಲ್ಲಿ ನಟಿಸುವಂತೆ ಈ ಇಬ್ಬರೂ ನಟಿಯರಿಗೆ ಕೇಳಿಕೊಳ್ಳಲಾಗಿತ್ತು. ನಿರ್ದೇಶಕ ಪ್ರಕಾಶ್ರಾಜ್ ಮೇಹು ಅವರು ಇಬ್ಬರಿಗೂ ಕಥೆ ಹೇಳಿದ್ದರು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ನಂತರ ಆ ಪಾತ್ರ ಎಸ್ತರ್ ನರೋನಾ ಪಾಲಾಯಿತು. ಅಷ್ಟಕ್ಕೂ ಆ ಪಾತ್ರದಲ್ಲಿ ಅಂಥದ್ದೇನಿದೆ? ಶ್ರದ್ಧಾ ಶ್ರೀನಾಥ್ ಮತ್ತು ರಾಧಿಕಾ ಪಂಡಿತ್ ಅವರು ಆ ಪಾತ್ರವನ್ನು ಒಪ್ಪಿಕೊಳ್ಳದೇ ಇರಲು ಕಾರಣ ಏನು? ಈ ವಿಚಾರಗಳ ಬಗ್ಗೆ ನಿರ್ದೇಶಕ ಪ್ರಕಾಶ್ರಾಜ್ ಮೇಹು ಅವರು ವಿವರಿಸಿದ್ದಾರೆ.
‘ಡಿಎನ್ಎ’ ಸಿನಿಮಾದಲ್ಲಿ ತಾಯಿ-ಮಗುವಿನ ಸಂಬಂಧದ ಕಥೆ ಹೇಳಲಾಗಿದೆ. ಮಗುವಿನ ತಾಯಿ ಪಾತ್ರವನ್ನು ಎಸ್ತರ್ ನರೋನಾ ನಿಭಾಯಿಸಿದ್ದಾರೆ. ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಶ್ರದ್ಧಾ ಶ್ರೀನಾಥ್ ಮತ್ತು ರಾಧಿಕಾ ಪಂಡಿತ್ ಅವರು ಆ ಪಾತ್ರವನ್ನು ಮಾಡಲು ಹಿಂದೇಟು ಹಾಕಿದರು.
‘ಕಲಾವಿದರಿಗೋಸ್ಕರ ನಾನು ಕಥೆ ಆಯ್ಕೆ ಮಾಡಿಕೊಂಡಿಲ್ಲ. ಕಥೆಗಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡೆ. ‘ಯು ಟರ್ನ್’ ಸಿನಿಮಾ ನೋಡಿದ ಬಳಿಕ ರೋಜರ್ ನಾರಾಯಣ್ ಅವರ ಸೂಕ್ಷ್ಮವಾದ ಅಭಿನಯ ಇಷ್ಟ ಆಗಿತ್ತು. ಹಾಗಾಗಿ ಅವರನ್ನು ನಮ್ಮ ಸಿನಿಮಾದ ಒಂದು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆ. ನೇರವಾಗಿ ಹೆಸರು ಹೇಳಬೇಕು ಎಂದರೆ ನಾನು ರಾಧಿಕಾ ಪಂಡಿತ್ ಅವರನ್ನು ಒಪ್ಪಿಸೋಕೆ ಪ್ರಯತ್ನಿಸಿದೆ. ಅವರು ಕಥೆ ಕೇಳಿ ಇಷ್ಟಪಟ್ಟರು. ಆದರೆ ಮಗುವಿನ ತಾಯಿಯ ಪಾತ್ರ ಮಾಡಬೇಕಾ ಎಂಬ ಕಾರಣಕ್ಕೆ ಹಿಂದೇಟು ಹಾಕಿದರು. ನಂತರ ಶ್ರದ್ಧಾ ಶ್ರೀನಾಥ್ ಕೂಡ ಅದೇ ಕಾರಣ ನೀಡಿದರು’ ಎಂದಿದ್ದಾರೆ ನಿರ್ದೇಶಕರು.
ಅಂತಿಮವಾಗಿ ಆ ಪಾತ್ರ ಎಸ್ತರ್ ನರೋನಾ ಪಾಲಾಯಿತು. ಅವರ ಜೊತೆ ರೋಜರ್ ನಾರಾಯಣ್, ಯಮುನಾ, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ‘ಆರಂಭದಲ್ಲಿ ಎಸ್ತರ್ ನರೋನಾ ಅವರನ್ನು ಆಯ್ಕೆ ಮಾಡಿಕೊಂಡಾಗ ನನಗೆ ಭಯ ಇತ್ತು. ಆದರೆ ಅವರ ನಟನೆ ನೋಡಿದ ಬಳಿಕ ಅವರು ಕೂಡ ಸೂಕ್ತ ನಟಿ ಎನಿಸಿತು’ ಎಂದು ನಿರ್ದೇಶಕರು ಹೇಳಿದ್ದಾರೆ.
‘ಪರಮಾತ್ಮ’, ‘ನಾಗಮಂಡಲ’, ‘ತಾಯಿ ಸಾಹೇಬ’, ‘ದೇವೀರಿ’ ಸೇರಿದಂತೆ ಅನೇಕ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಪ್ರಕಾಶ್ ರಾಜ್ ಮೇಹು ಅವರಿಗೆ ಇದೆ. ಕಲಾತ್ಮಕ ಹಾದಿಯಲ್ಲಿ ಒಂದು ವ್ಯಾಪಾರಿ ಸಿನಿಮಾ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದ ಅವರು ಈಗ ‘ಡಿಎನ್ಎ’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
‘ಈಗಾಗಲೇ ನಮ್ಮ ಸಿನಿಮಾವನ್ನು ನಾವು ಕೆಲವು ಪ್ರೇಕ್ಷಕರಿಗೆ ತೋರಿಸಿದ್ದೇವೆ. ಮುಖ್ಯವಾಗಿ ಮಹಿಳಾ ಪ್ರೇಕ್ಷಕರಿಗೆ ತುಂಬ ಇಷ್ಟ ಆಗಿದೆ. ಚಿತ್ರಮಂದಿರಲ್ಲೂ ಕೌಟುಂಬಿಕ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಇಷ್ಟ ಆಗಲಿದೆ ಎಂಬ ಭರವಸೆ ಇದೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ:
ಹೊಸ ಹುರುಪಿನಿಂದ ರಿಲೀಸ್ಗೆ ಸಜ್ಜಾದ ‘ಡಿಎನ್ಎ’: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ಮತ್ತೆ ಶುರು
ರಾಧಿಕಾ ಪಂಡಿತ್ ಮೊಬೈಲ್ನಲ್ಲಿ ಯಶ್ ಹೆಸರು ಏನೆಂದು ಸೇವ್ ಆಗಿದೆ? ವೈರಲ್ ಆಯ್ತು ವಿಡಿಯೋ