ಹೊಸ ಹುರುಪಿನಿಂದ ರಿಲೀಸ್ಗೆ ಸಜ್ಜಾದ ‘ಡಿಎನ್ಎ’: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ಮತ್ತೆ ಶುರು
ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ಮಾತ್ರ ತೆರವುಗೊಂಡಿದೆ. ಶೇ.50ರಷ್ಟು ಆಕ್ಯುಪೆನ್ಸಿ ನಿಯಮ ಮುಂದುವರಿದಿದೆ. ಅದರ ನಡುವೆಯೂ ‘ಡಿಎನ್ಎ’ ಚಿತ್ರ ರಿಲೀಸ್ ಆಗುತ್ತಿದೆ.
ಕೊರೊನಾ ವೈರಸ್ ಹಾವಳಿಯಿಂದಾಗಿ ಕನ್ನಡ ಚಿತ್ರರಂಗ (Kannada Film Industry) ಮಂಕಾಗಿತ್ತು. ಕಳೆದ ಮೂರು ವಾರದಿಂದ ಯಾವುದೇ ಹೊಸ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ವೀಕೆಂಡ್ ಕರ್ಫ್ಯೂ ಇದ್ದಿದ್ದರಿಂದ ಚಿತ್ರಗಳ ರಿಲೀಸ್ಗೆ ಯಾವುದೇ ನಿರ್ಮಾಪಕರು ಮುಂದೆ ಬಂದಿರಲಿಲ್ಲ. ಕನ್ನಡದ ‘ಡಿಎನ್ಎ’ (DNA Kannada Movie) ಚಿತ್ರ ಈ ವರ್ಷದ ಆರಂಭದಲ್ಲೇ ತೆರೆಕಾಣಬೇಕಿತ್ತು. ಜ.7ರಂದು ಬಿಡುಗಡೆಯಾಗಲು ಆ ಸಿನಿಮಾ ಸಜ್ಜಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ರಿಲೀಸ್ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ವೀಕೆಂಡ್ ಕರ್ಫ್ಯೂ (Weekend Curfew) ತೆರವುಗೊಂಡಿರುವ ಹಿನ್ನೆಲೆಯಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಜ.28ರಂದು ಸಿನಿಮಾವನ್ನು ತೆರೆಕಾಣಿಸಲು ತಂಡ ನಿರ್ಧರಿಸಿದೆ. ಈ ಚಿತ್ರಕ್ಕೆ ಪ್ರಕಾಶ್ರಾಜ್ ಮೇಹು ನಿರ್ದೇಶನ ಮಾಡಿದ್ದಾರೆ. ಎಂ. ಮೈಲಾರಿ ನಿರ್ಮಾಣ ಮಾಡಿದ್ದು ಎಸ್ತರ್ ನರೋನಾ, ರೋಜರ್ ನಾರಾಯಣ್, ಅನಿತಾ ಭಟ್, ಮಾಸ್ಟರ್ ಆನಂದ್, ಅಚ್ಯುತ್ ಕುಮಾರ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಚಿತ್ರರಂಗದ ಪಾಲಿಗೆ ವೀಕೆಂಡ್ ತುಂಬ ಮುಖ್ಯ. ಶುಕ್ರವಾರ ರಿಲೀಸ್ ಆಗುವ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಶುರುವಾದರೆ ಶನಿವಾರ ಆ ಸಿನಿಮಾಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ. ಶನಿವಾರ ಮತ್ತು ಭಾನುವಾರದ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ನೋಡುತ್ತಾರೆ. ವೀಕೆಂಡ್ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾವನ್ನು ಎಂಜಾಯ್ ಮಾಡುವ ಟ್ರೆಂಡ್ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಹಾಗಾಗಿ ಒಂದು ಸಿನಿಮಾದ ವಹಿವಾಟಿಗೆ ವೀಕೆಂಡ್ ಎಂಬುದು ಸಖತ್ ಮುಖ್ಯ.
ಕೊರೊನಾ ಎರಡನೇ ಅಲೆ ಮುಗಿದ ನಂತರ ನಿಧಾನವಾಗಿ ಚಿತ್ರಮಂದಿರಗಳು ಕಾರ್ಯಾರಂಭ ಮಾಡಿದ್ದವು. ಬಡವ ರಾಸ್ಕಲ್, ಗರುಡ ಗಮನ ವೃಷಭ ವಾಹನ ಮುಂತಾದ ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಜಯಭೇರಿ ಬಾರಿಸಿದ್ದವು. ಅದೇ ಹುಮ್ಮಸ್ಸಿನಲ್ಲಿ ಅನೇಕ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಆದರೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಎಂದು ಸರ್ಕಾರ ಆದೇಶ ಹೊರಡಿಸಿದ ಬಳಿಕ ಹಲವು ಚಿತ್ರಗಳು ತಮ್ಮ ಬಿಡುಗಡೆ ದಿನಾಂಕ ಮುಂದೂಡಿಕೊಂಡವು. ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ಮಾತ್ರ ತೆರವುಗೊಂಡಿದೆ. ಶೇ.50ರಷ್ಟು ಆಕ್ಯುಪೆನ್ಸಿ ನಿಯಮ ಮುಂದುವರಿದಿದೆ. ಅದರ ನಡುವೆಯೂ ‘ಡಿಎನ್ಎ’ ಚಿತ್ರ ರಿಲೀಸ್ ಆಗುತ್ತಿದೆ.
‘ಡಿಎನ್ಎ’ ಸಿನಿಮಾದ ಜೊತೆಗೆ ‘ಒಂಬತ್ತನೇ ದಿಕ್ಕು’ ಚಿತ್ರ ಕೂಡ ಜ.28ರಂದು ರಿಲೀಸ್ ಆಗುತ್ತಿದೆ. ಆ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ ಮುಂತಾದವರು ನಟಿಸಿದ್ದಾರೆ. ಇನ್ನೂ ಅನೇಕ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡಿಕೊಳ್ಳುವುದು ಬಾಕಿ ಇದೆ. ಈ ವರ್ಷ ಮೊದಲು ರಿಲೀಸ್ ಆಗುವ ಸಿನಿಮಾಗಳಿಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅನೇಕ ನಿರ್ಮಾಪಕರು ಕಾದಿದ್ದಾರೆ.
ಇದನ್ನೂ ಓದಿ:
‘ನನ್ನ ಧರ್ಮದ ಬಗ್ಗೆ ಮಾತಾಡ್ಬೇಡಿ’; ಪಕ್ಕದ ಮನೆಯವರಿಗೆ ಎಚ್ಚರಿಕೆ ನೀಡಿ ಕೇಸ್ ಜಡಿದ ಸಲ್ಮಾನ್ ಖಾನ್
‘ಜೇಮ್ಸ್’ ಚಿತ್ರದಲ್ಲಿ ಪುನೀತ್, ಶಿವಣ್ಣ, ರಾಘಣ್ಣ; ಫ್ಯಾನ್ಸ್ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್