ಮತ್ತೆ ಕನ್ನಡಕ್ಕೆ ಬಂದ ಅದಾ ಶರ್ಮಾ; ‘ರಾಮರಸ’ ಚಿತ್ರದಲ್ಲಿ ‘ರಣ ವಿಕ್ರಮ’ ಬೆಡಗಿ
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ರಾಮರಸ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ಇದೀಗ ಬಾಲಿವುಡ್ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ತಂಡವನ್ನು ಸೇರಿಕೊಂಡಿದ್ದು, ಪ್ರಜ್ವಲ್ ದೇವರಾಜ್, ಶರಣ್ ಹಾಗೂ ಕಾರ್ತಿಕ್ ಮಹೇಶ್ ನಟನೆಯ ಈ ಅದ್ಧೂರಿ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ.

ಮುಖ್ಯಾಂಶಗಳು
- 'ರಾಮರಸ' ಚಿತ್ರಕ್ಕೆ ಬಾಲಿವುಡ್ ಬ್ಯೂಟಿ ಅದಾ ಶರ್ಮಾ ಎಂಟ್ರಿ
- ಪರಾಶಕ್ತಿಯ ಲೀಲೆಯಲ್ಲಿ ಹೊಸ ಅವತಾರ
- ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಗಳ ದಂಡು
ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಅಭಿನಯದ ‘ರಾಮರಸ’ ಸಿನಿಮಾ ಘೋಷಣೆ ಆದಾಗಿನಿಂದಲೂ ಸುದ್ದಿ ಆಗುತ್ತಲೇ ಇದೆ. ಈಗ ಸಿನಿಮಾ ತನ್ನ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಅದ್ಭುತ ದೃಶ್ಯ ವೈಭವವನ್ನು ಬೆಳ್ಳಿಪರದೆಗೆ ತರಲು ಚಿತ್ರತಂಡ ಸಜ್ಜಾಗುತ್ತಿದ್ದು, ಚಿತ್ರ ಪ್ರೇಮಿಗಳಿಗೆ ದೊಡ್ಡ ಸರ್ಪ್ರೈಸ್ ಒಂದನ್ನು ನೀಡಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ನಟಿಸುತ್ತಿದ್ದಾರೆ ಎಂಬ ವಿಷಯವನ್ನು ತಂಡ ರಿವೀಲ್ ಮಾಡಿದೆ.
ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಅದಾ ಶರ್ಮಾ ಈ ಮೊದಲು ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ‘ರಣ ವಿಕ್ರಮ’ ಸಿನಿಮಾದಲ್ಲಿ ಅಭಿನಯಿಸಿದ್ದರು. ‘ರಾಮರಸ’ ತಾರಾಬಳಗದಲ್ಲಿರುವ ವಿಷಯ ರಿವೀಲ್ ಆಗಿದೆ. ಚಿತ್ರದಲ್ಲಿ ಅವರು ಅತ್ಯಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸುವ ಪರಾಶಕ್ತಿಯ ಲೀಲೆಯ ರೂಪದಲ್ಲಿ ಪ್ರೇಕ್ಷಕರ ಎದುರು ಅವರು ಬರಲಿದ್ದಾರೆ. ಇದು ಚಿತ್ರದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.
View this post on Instagram
ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಜೊತೆಗೆ, ಪ್ರಜ್ವಲ್ ದೇವರಾಜ್, ಶರಣ್ ಮತ್ತು ನಟಿ ಹೆಬ್ಬಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಆರಂಭವಷ್ಟೇ ಆಗಿದ್ದು, ಚಿತ್ರದಲ್ಲಿರುವ ಇನ್ನೂ ಹಲವು ಪ್ರಮುಖ ಪಾತ್ರಗಳು ಹಾಗೂ ಅಚ್ಚರಿಯ ಸ್ಟಾರ್ ನಟರ ವಿವರಗಳನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಕಾಯ್ದಿರಿಸಿದ್ದು, ಶೀಘ್ರದಲ್ಲೇ ಒಂದೊಂದಾಗಿ ಅನಾವರಣಗೊಳಿಸಲಿದೆ.
ಇದನ್ನೂ ಓದಿ: ‘ರಾಮರಸ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ಭಿನ್ನ ಪಾತ್ರದಲ್ಲಿ ನಟ
ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬರುತ್ತಿರುವ ಬಿಎಂ ಗಿರಿರಾಜ್ ನಿರ್ದೇಶನ ಇದೆ. ಕೃಷ್ಣ ಕುಮಾರ್ ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ ಹಾಗೂ ಡಾ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ, ಪುನೀತ್ ರಂಗಸ್ವಾಮಿ ಸಾಹಿತ್ಯ ಒದಗಿಸಿದ್ದಾರೆ. ಗುರು ದೇಶಪಾಂಡೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿ ಸಿನಿಮಾಸ್ ಪ್ರೊಡಕ್ಷನ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಸಂಸ್ಥೆಗಳ ಅಡಿಯಲ್ಲಿ ಗುರು ದೇಶಪಾಂಡೆ ಹಾಗೂ ವಿಕ್ರಂ ಆರ್ಯ ಅತ್ಯಂತ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ಟೀಸರ್ ಬಿಡುಗಡೆ ಮಾಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Tue, 22 September 26




