‘ನನ್ನ ಹಾಗೂ ಪುನೀತ್ ನಡುವೆ ಮೊದಲಿನಿಂದಲೂ ಒಳ್ಳೆಯ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು. ‘ಅಲಾ ವೈಕುಂಟಪುರಮುಲೋ’ ಸಿನಿಮಾ ಸಂದರ್ಭದಲ್ಲಿ ನನಗೆ ಕರೆ ಮಾಡಿದ್ದರು. ಸಾಂಗ್ ಚೆನ್ನಾಗಿದೆ ಎಂದು ಹೇಳಿದ್ದರು. ಇಬ್ಬರೂ ಭೇಟಿ ಆಗೋ ಆಲೋಚನೆ ಇತ್ತು. ಆದರೆ, ಕೊವಿಡ್ ಲಾಕ್ಡೌನ್ ಕಾರಣದಿಂದ ಅದು ಸಾಧ್ಯವಾಗಲೇ ಇಲ್ಲ. ಅವರ ನಿಧನ ನೋವು ತಂದಿದೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
‘ಪುಷ್ಪ’ ಚಿತ್ರದ ಪ್ರಚಾರದ ಸಮಯದಲ್ಲಿ ಅಲ್ಲು ಅರ್ಜುನ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಆ ಸಂದರ್ಭದಲ್ಲಿ ಪುನೀತ್ ನಿವಾಸಕ್ಕೆ ಭೇಟಿ ನೀಡದಿರಲು ಅವರು ನಿರ್ಧರಿಸಿದ್ದರು. ಅದಕ್ಕೆ ಕಾರಣ ಏನೆಂಬುದನ್ನೂ ಅವರು ವಿವರಿಸಿದ್ದರು. ‘ಪುನೀತ್ ರಾಜ್ಕುಮಾರ್ ಕುಟುಂಬಕ್ಕೆ ನನ್ನ ಸಂತಾಪ ಇದೆ. ‘ಪುಷ್ಪ’ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿರಲಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ. ಅದು ನನ್ನ ಕರ್ತವ್ಯ’ ಎಂದು ಅಲ್ಲು ಅರ್ಜುನ್ ಹೇಳಿದ್ದರು.
‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರದ ಸಮಯದಲ್ಲಿ ಪುನೀತ್ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದರು. ‘ಪುನೀತ್ ರಾಜ್ಕುಮಾರ್ ಅವರು ನನಗೆ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡ್ಯಾನ್ಸ್ ಕಾರ್ಯಕ್ರಮದಲ್ಲಿ ನಾವು ಜಡ್ಜ್ ಆಗಿದ್ದೆವು. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಇಂದು ಸಡನ್ ಆಗಿ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಅಲ್ಲು ಅರ್ಜುನ್ ಹೇಳಿದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ ಶಿವರಾಜ್ಕುಮಾರ್ ನೋಡೋಕೆ ಮುಗಿಬಿದ್ದ ಅಭಿಮಾನಿಗಳು
Allu Arjun: ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ ಅಲ್ಲು ಅರ್ಜುನ್; ಇಲ್ಲಿವೆ ಫೋಟೋಗಳು