2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು. ತಮ್ಮ ಜತೆ ಅರ್ಜುನ್ ಸರ್ಜಾ (Arjun Sarja) ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮೂರು ವರ್ಷ ತನಿಖೆ ನಡೆಸಿದರೂ ಕೂಡ ಪೊಲೀಸರಿಗೆ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಬಿ-ರಿಪೋರ್ಟ್ (B Report) ಸಲ್ಲಿಸಿದ್ದಾರೆ. ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್. ಮೀಟೂ (Me Too Case) ಪ್ರಕರಣದಲ್ಲಿ ಅರ್ಜುನ್ ಸರ್ಜಾ ಅವರಿಗೆ ರಿಲೀಫ್ ಸಿಕ್ಕಿದೆ. ಈ ಕುರಿತು ಅವರು ಟಿವಿ9 ಕನ್ನಡ ಜತೆ ಮಾತನಾಡಿದ್ದು, ಪ್ರತಿಕ್ರಿಯೆ ನೀಡಿದ್ದಾರೆ.
‘ನನಗೆ ಜಯ ಸಿಗುತ್ತೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಸದ್ಯ ಕೇರಳದಲ್ಲಿ ಶೂಟಿಂಗ್ ಮಾಡುತ್ತಿದ್ದೇನೆ. ಶೀಘ್ರವೇ ಬೆಂಗಳೂರಿಗೆ ಬರುತ್ತೇನೆ. ಬೆಂಗಳೂರಿಗೆ ಬಂದ ನಂತರ ಸುದ್ದಿಗೋಷ್ಠಿ ನಡೆಸುತ್ತೇನೆ. ಮುಂದಿನ ವಾರ ಸಂಪೂರ್ಣ ಮಾಹಿತಿ ನೀಡುತ್ತೇನೆ’ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.
ಅರುಣ್ ವೈದ್ಯನಾಥನ್ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್ವುಡ್ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು. ಅಂಬರೀಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಿ ಸಂಧಾನಕ್ಕೆ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಒಪ್ಪಿರಲಿಲ್ಲ.
‘ವಿಸ್ಮಯ’ ಶೂಟಿಂಗ್ ನಡೆದಿದ್ದು 2015-16ರ ಸಮಯದಲ್ಲಿ. ಮೀಟೂ ಆರೋಪ ಕೇಳಿಬಂದಿದ್ದು 2018ರಲ್ಲಿ. ಘಟನೆ ನಡೆದು ಎರಡು ವರ್ಷ ಕಳೆದ ಬಳಿಕ ದೂರು ನೀಡಿದ್ದರಿಂದ ಸಾಕ್ಷಿ ಹುಡುಕುವುದು ಪೊಲೀಸರಿಗೆ ಕಷ್ಟ ಆಗಿರಬಹುದು. ಮೂರು ವರ್ಷ ತನಿಖೆ ನಡೆಸಿದರೂ ಕೂಡ ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಲಾಗಿದೆ.
ಇದನ್ನೂ ಓದಿ:
ಮೀಟೂ ಕೇಸ್: ಶ್ರುತಿ ಹರಿಹರನ್ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್ ಪ್ರತಿಕ್ರಿಯೆ ಏನು?
‘ಮಾರ್ಟಿನ್ ಚಿತ್ರಕ್ಕಾಗಿ ಧ್ರುವ ಸರ್ಜಾ ಡಿಫರೆಂಟ್ ಹೇರ್ ಸ್ಟೈಲ್: ಇಲ್ಲಿದೆ ಮೇಕಿಂಗ್ ವಿಡಿಯೋ
Published On - 11:51 am, Sat, 11 December 21