ಬಾಲಿವುಡ್ನ ಖ್ಯಾತ ಪನೋರಮಾ ಸ್ಟುಡಿಯೋಸ್ ಪಾಲಾದ ‘ಬನಾರಸ್’ ಸಿನಿಮಾ ವಿತರಣೆ ಹಕ್ಕು
ಇದೀಗ ಹಿಂದಿ ಭಾಷೆಯ ವಿತರಣಾ ಹಕ್ಕು ಇನ್ನೊಂದು ಖ್ಯಾತ ಸಂಸ್ಥೆಯ ಪಾಲಾಗಿದ್ದು ಚಿತ್ರತಂಡದ ಖುಷಿಗೆ ಮತ್ತಷ್ಟು ಮೆರುಗು ತುಂಬಿದೆ.
ಕನ್ನಡವೂ ಸೇರಿ ಪಂಚ ಭಾಷೆಯಲ್ಲಿ ಮೂಡಿಬರುತ್ತಿರುವ ‘ಬನಾರಸ್’ ಚಿತ್ರದ (Banaras Movie) ಬಗೆಗಿನ ಕ್ರೇಜ್ ಬಗ್ಗೆ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಚಿತ್ರದ ಮೋಷನ್ ಪೋಸ್ಟರ್ನಿಂದ ಹಿಡಿದು, ಮಾಯಗಂಗೆ ಎಂಬ ಪ್ರೇಮಜ್ವರ ಹಿಡಿಸಿದ ಹಾಡು, ಕುತೂಹಲ ಹುಟ್ಟಿಸಿದ ಟ್ರೇಲರ್ ಸೇರಿದಂತೆ ಎಲ್ಲವೂ ದಾಖಲೆಯನ್ನೇ ನಿರ್ಮಿಸಿವೆ. ಎಲ್ಲಾ ಭಾಷೆಗಳಲ್ಲಿ ಚಿತ್ರದ ರಿಲೀಸ್ಗಾಗಿ ಎದುರುನೋಡುತ್ತಿದ್ದ ಸಿನಿಪ್ರಿಯರಿಗೆ ಇದೇ ನವೆಂಬರ್4ರಂದು ಚಿತ್ರ ದೇಶದಾದ್ಯಂತ ರಿಲೀಸ್ ಆಗ್ತಿದೆ ಅನ್ನೋ ಸುದ್ದಿಯನ್ನು ಚಿತ್ರತಂಡ ಕೊಟ್ಟಿದ್ದಾಗಿದೆ.
ಈ ಸಮಾಚಾರ ಕೇಳುತ್ತಲೇ ಥ್ರಿಲ್ ಆದವರಿಗೆ ಸಿನಿತಂಡ ಒಂದರ ಹಿಂದೊಂದು ಸರ್ಪ್ರೈಸ್ ನೀಡ್ತಿದೆ. ಕನ್ನಡದಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ್ ಒಡೆತನದ ಡಿ ಬೀಟ್ಸ್ ಕಂಪನಿ ‘ಬನಾರಸ್’ ಚಿತ್ರವನ್ನು ಕರುನಾಡಿಗೆ ಹಂಚುತ್ತಿದೆ. ಇತ್ತ ಕೇರಳದ ತುಂಬೆಲ್ಲಾ ‘ಬನಾರಸ್’ ಹಂಚುವ ಕೆಲಸವನ್ನ ಮಲಯಾಳಂನ ಖ್ಯಾತ ಮುಳುಕುಪಾಡಂ ಸಂಸ್ಥೆ ಖರೀದಿಸಿದ ಸುದ್ದಿಯನ್ನ ಚಿತ್ರತಂಡ ಹಂಚಿಕೊಂಡಿತ್ತು. ಇನ್ನುಳಿದ ಭಾಷೆಗಳ ವಿತರಣಾ ಹಕ್ಕು ಯಾವ ಸಂಸ್ಥೆಗಳ ಪಾಲಾಗತ್ತೆ ಅನ್ನೋ ಕುತೂಹಲವಿತ್ತು. ಇದೀಗ ಹಿಂದಿ ಭಾಷೆಯ ವಿತರಣಾ ಹಕ್ಕು ಇನ್ನೊಂದು ಖ್ಯಾತ ಸಂಸ್ಥೆಯ ಪಾಲಾಗಿದ್ದು ಚಿತ್ರತಂಡದ ಖುಷಿಗೆ ಮತ್ತಷ್ಟು ಮೆರುಗು ತುಂಬಿದೆ.
ಉತ್ತರ ಭಾರತದಲ್ಲಿ ‘ಬನಾರಸ್’ ವಿತರಣಾ ಹಕ್ಕು ಪನೋರಮಾ ಸ್ಟುಡಿಯೋಸ್ ಪಾಲಾಗಿದೆ. ಪನೋರಮಾ ಸ್ಟುಡಿಯೋಸ್ ಬಾಲಿವುಡ್ ಮಟ್ಟದಲ್ಲಿ ಬಹುದೊಡ್ಡ ಹೆಸರು ಮಾಡಿರುವ ವಿತರಣಾ ಸಂಸ್ಥೆ. ಈಗಾಗಲೇ ಅದೆಷ್ಟೋ ಸ್ಟಾರ್ ಕಲಾವಿದರ ಚಿತ್ರಗಳು ಪನೋರಮಾ ಮೂಲಕವೇ ಬಿಡುಗಡೆಗೊಂಡು ಯಶಸ್ಸು ಕಂಡ ಉದಾಹರಣೆಗಳಿವೆ. ಹಾಗೆಂದ ಮಾತ್ರಕ್ಕೆ, ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಅಂದ್ರೆ ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ಸಂಗತಿಯಲ್ಲ. ಈ ಸಂಸ್ಥೆ ವಿತರಣೆ ಹಕ್ಕು ಪಡೆದಿದೆಯೆಂದರೆ ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿಯೇ ಸರಿ. ಏಕೆಂದರೆ ಕಥೆ, ಮೇಕಿಂಗ್, ನಟನೆ, ನಿರೂಪಣೆ, ಸಂಭಾಷಣೆ ಎಲ್ಲಾ ರೀತಿಯಲ್ಲೂ ಪರಿಪೂರ್ಣವಾಗಿ ಪಕ್ವವೆನಿಸಿ, ಗೆಲುವಿನ ಮೆಟ್ಟಿಲಲ್ಲಿ ನಿಂತಿರುವ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ವಿತರಿಸುವ ಹಕ್ಕನ್ನ ಖರೀದಿಸುತ್ತದೆ. ಇದೀಗ ‘ಬನಾರಸ್’ ವಿತರಣಾ ಹಕ್ಕು ಪನೋರಮಾ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆ ಉತ್ತರದಾದ್ಯಂತ ಹಬ್ಬಿಕೊಳ್ಳುವಂತೆ ಮಾಡಿದೆ.
ಇನ್ನೊಂದು ವಿಶೇಷವೆಂದರೆ, ಈ ಸಂಸ್ಥೆಯಲ್ಲಿ ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಪಾಲುದಾರರಾಗಿದ್ದಾರೆ. ಈ ಮೂಲಕ ಕನ್ನಡ ಮೂಲದ ಚಿತ್ರವೊಂದಕ್ಕೆ ಅಜಯ್ ದೇವಗನ್ ಹಂಚಿಕೆಯ ಸಾರಥ್ಯ ವಹಿಸಿದಂತಾಗಿದೆ. ‘ಬನಾರಸ್’ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ, ಭರವಸೆಯಿಂದ ಈ ಸಂಸ್ಥೆ ‘ಬನಾರಸ್’ನ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿರೋದು ಚಿತ್ರದ ಕ್ವಾಲಿಟಿ ಮತ್ತು ಯಾವ ಮಟ್ಟಿಗೆ ಅದು ಮೂಡಿ ಬಂದಿದೆ ಅನ್ನೋದನ್ನ ಹೇಳುತ್ತಿದೆ.
ಈ ವಿದ್ಯಮಾನದಿಂದ ಚಿತ್ರದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್, ನಾಯಕ ನಟ ಝೈದ್ ಖಾನ್, ನಾಯಕಿ ಸೋನಲ್, ನಿರ್ದೇಶಕ ಜಯತೀರ್ಥ ಸೇರಿದಂತೆ ಒಂದಿಡೀ ಚಿತ್ರತಂಡವೇ ಖುಷಿಗೊಂಡಿದೆ. ಒಟ್ನಲ್ಲಿ ಈಗಾಗಲೇ ಕನ್ನಡ,ಮಲೆಯಾಳಂ, ಹಿಂದಿ ಭಾಷೆಯ ವಿತರಣೆ ಹಕ್ಕು ಖ್ಯಾತ ಸಂಸ್ಥೆಗಳ ಪಾಲಾಗಿದ್ದು, ಇನ್ನುಳಿದ ತೆಲುಗು, ತಮಿಳು ಭಾಷೆಗಳ ‘ಬನಾರಸ್’ ಹಂಚಿಕೆ ಯಾರ ಮಡಿಲು ಸೇರಲಿದೆ ಅನ್ನೋ ಕಾತುರ ಇನ್ನೂ ಹೆಚ್ಚಾಗ್ತಿದೆ. ಈ ಪ್ರಶ್ನೆಗೂ ಸದ್ಯದಲ್ಲೇ ಸರ್ಪೈಸಿಂಗ್ ಉತ್ತರವೇ ದೊರಕಲಿದ್ದು, ಅಂದಹಾಗೆ, ಈ ಚಿತ್ರ ನವೆಂಬರ್ 4ಕ್ಕೆ ದೇಶಾದ್ಯಂತ ಅದ್ದೂರಿಯಾಗಿ ತೆರೆಕಾಣೋಕೆ ಸಜ್ಜಾಗ್ತಿದೆ.
Published On - 7:40 pm, Mon, 10 October 22