ಬಿ.ಎಂ. ಗಿರಿರಾಜ್ ನಿರ್ದೇಶನದಲ್ಲಿ ಹೊಸ ಸಿನಿಮಾ ‘ಕಲ್ಯಾಣಿ’: ಏನಿದರ ವಿಶೇಷತೆ?
ಸಾಮ್ರಾಟ್ ಶೆಟ್ಟಿ ಮತ್ತು ಸಿಮ್ರನ್ ಅವರು ‘ಕಲ್ಯಾಣಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಾಹಿತ್ಯ ಕೃತಿ ಆಧಾರಿತ ಈ ಸಿನಿಮಾಗೆ ಬಿ.ಎಂ. ಗಿರಿರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಮುಖ್ಯಾಂಶಗಳು
- ರಂಗಭೂಮಿ ಹಿನ್ನೆಲೆ ಇರುವ ನಟ ಸಾಮ್ರಾಟ್ ಶೆಟ್ಟಿ ‘ಕಲ್ಯಾಣಿ’ ಚಿತ್ರಕ್ಕೆ ಹೀರೋ.
- ಬಸವ ರೆಡ್ಡಿ ಅವರು ಬರೆದ ಕಥೆಗೆ ಸಿನಿಮಾ ರೂಪ ನೀಡುತ್ತಿರುವ ಬಿ.ಎಂ. ಗಿರಿರಾಜ್.
- ಬಿ.ಜೆ. ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಬರಲಿದೆ ‘ಕಲ್ಯಾಣಿ’ ಹಾಡುಗಳು.
ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ.ಎಂ. ಗಿರಿರಾಜ್ (BM Giriraj) ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. ಲೇಖಕ ಬಸವ ರೆಡ್ಡಿ ಅವರು ಬರೆದ ಕಥೆಗೆ ಬಿ.ಎಂ. ಗಿರಿರಾಜ್ ಅವರು ಸಿನಿಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ (Kalyani) ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಕೆಲವು ತಿಂಗಳ ಹಿಂದೆಯೇ ಸದ್ದಿಲ್ಲದೆ ಸೆಟ್ಟೇರಿದ್ದ ಈ ಸಿನಿಮಾ, ಸದ್ಯ ಪೂರ್ತಿ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಚಿತ್ರತಂಡದವರು ಸಿನಿಮಾದ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದರು. ಈ ವೇಳೆ ಚಿತ್ರದ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಲೇಖಕ ಬಸವ ರೆಡ್ಡಿ ಕಥೆ ಬರೆದಿರುವ, ಬಿ.ಎಂ. ಗಿರಿರಾಜ್ ನಿರ್ದೇಶನದ ಈ ಸಿನಿಮಾಗೆ ಕುಮಾರಸ್ವಾಮಿ ಆರ್. ಅವರು ಬಂಡವಾಳ ಹೂಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು 3 ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅವರು ‘ಆರ್.ಕೆ. ಸಿನಿಮಾಸ್’ ಬ್ಯಾನರ್ ಮೂಲಕ ನಿರ್ಮಿಸುತ್ತಿದ್ದಾರೆ.
‘ಕಲ್ಯಾಣಿ’ ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?
ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ಯುವ ನಟ ಸಾಮ್ರಾಟ್ ಶೆಟ್ಟಿ ಅವರು ‘ಕಲ್ಯಾಣಿ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಭಾರತದ ನಟಿ ಸಿಮ್ರನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ.ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಮುಂತಾದ ರಂಗಭೂಮಿ ಕಲಾವಿದರು ‘ಕಲ್ಯಾಣಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ:
ಉತ್ತರ ಭಾರತ ಮತ್ತು ದಕ್ಷಿಣದ ಸಂಸ್ಕೃತಿಗಳ ಕಥೆ:
ಸಿನಿಮಾದ ಬಗ್ಗೆ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರು ಮಾತನಾಡಿದರು. ‘ನವಿರಾದ ಒಲವಿನ ಕಥೆ ಮುನ್ನೆಲೆಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದರಲ್ಲಿ ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳು ಇವೆ. ಬೇರೆ ಬೇರೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾ. ಉತ್ತರ ಭಾರತದಿಂದ ಬರುವ ಹುಡುಗಿ ಮತ್ತು ದಕ್ಷಿಣ ಭಾರತದ ಹುಡುಗನ ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣದ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತಹ ಸಿನಿಮಾ ಇದಾಗಿದೆ’ ಎಂದು ಗಿರಿರಾಜ್ ಅವರು ಹೇಳಿದ್ದಾರೆ.
ಇದನ್ನೂ ಓದಿ:
‘ಕಲ್ಯಾಣಿ’ ಚಿತ್ರಕ್ಕೆ ಜಿ.ಜೆ. ಭರತ್ ಸಂಗೀತ:
ಬಿ.ಜೆ. ಭರತ್ ಅವರು ‘ಕಲ್ಯಾಣಿ’ ಸಿನಿಮಾದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪ್ರಶಾಂತ ಲಾಗರ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನವಿದೆ. ಭಟ್ಕಳ, ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ದೃಶ್ಯಗಳ ಶೂಟಿಂಗ್ ಮಾಡಲಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




