ಹೊಸ ನಿರ್ದೇಶಕಿ ದೇವಿಕಾ ಜನಿತ್ರಿ ಪ್ರಯತ್ನಕ್ಕೆ ಅಶ್ವಿನಿ ಬೆಂಬಲ; ‘ಚಿಕ್ಕಿಯ ಮೂಗುತಿ’ ಟೀಸರ್ಗೆ ಮೆಚ್ಚುಗೆ
ಬಹುತೇಕ ಹೆಣ್ಣು ಮಕ್ಕಳೇ ಸೇರಿಕೊಂಡು ‘ಚಿಕ್ಕಿಯ ಮೂಗುತಿ’ ಸಿನಿಮಾ ಮಾಡಿದ್ದಾರೆ. ಇದರಲ್ಲಿ ಮಹಿಳಾಪ್ರಧಾನ ಕಥಾಹಂದರ ಇದೆ. ನಿರ್ದೇಶಕಿಯೇ ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ತಾರಾ ಅನುರಾಧಾ, ಭವಾನಿ ಪ್ರಕಾಶ್, ಶ್ವೇತಾ ಶ್ವೀವಾತ್ಸವ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಚಂದನವನಕ್ಕೆ ಪ್ರತಿಭಾವಂತ ನಿರ್ದೇಶಕಿಯರ ಆಗಮನ ಆಗುತ್ತಿದೆ. ಆ ಸಾಲಿಗೆ ಹೊಸ ನಿರ್ದೇಶಕಿ ದೇವಿಕಾ ಜನಿತ್ರಿ (Devika Janitri) ಅವರು ಹೊಸ ಸೇರ್ಪಡೆ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆ, ಕ್ರೈಮ್-ಥ್ರಿಲ್ಲರ್, ಹಾರರ್ ಕಥಾಹಂದರ ಸಿನಿಮಾಗಳಿಗೆ ಕೊರತೆ ಇಲ್ಲ. ಅವುಗಳ ನಡುವೆ ಆಗಾಗ ಡಿಫರೆಂಟ್ ಪರಿಕಲ್ಪನೆಯ ಸಿನಿಮಾಗಳ ಕೂಡ ಗಮನ ಸೆಳೆಯುತ್ತವೆ. ದೇವಿಕಾ ಜನಿತ್ರಿ ಕೂಡ ಅಂಥದ್ದೇ ಒಂದು ಭಿನ್ನವಾದ ಸಿನಿಮಾವನ್ನು ಜನರಿಗೆ ತೋರಿಸಲು ಸಜ್ಜಾಗುತ್ತಿದ್ದಾರೆ. ‘ಚಿಕ್ಕಿಯ ಮೂಗುತಿ’ (Chikkiya Muguti) ಎಂಬುದು ಈ ಸಿನಿಮಾದ ಹೆಸರು. ಭಾನುವಾರ (ಅಕ್ಟೋಬರ್ 15) ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಟೀಸರ್ ಬಿತ್ತರಿಸಲಾಯಿತು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರು ‘ಚಿಕ್ಕಿಯ ಮೂಗುತಿ’ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಸಿನಿಮಾದಲ್ಲಿ ಹಿರಿಯ ನಟಿ ತಾರಾ ಅನುರಾಧಾ ನಟಿಸಿದ್ದಾರೆ.
‘ಚಿಕ್ಕಿಯ ಮೂಗುತಿ’ ಸಿನಿಮಾದ ಟೀಸರ್ ಅಕ್ಟೋಬರ್ 20ರಂದು ‘ಪಿಆರ್ಕೆ ಆಡಿಯೋ’ ಮೂಲಕ ಬಿಡುಗಡೆ ಆಗಲಿದೆ. ಅಂದಹಾಗೆ, ಇದು ಕಾದಂಬರಿ ಆಧಾರಿತ ಸಿನಿಮಾ. ನಿರ್ದೇಶಕಿ ದೇವಿಕಾ ಜನಿತ್ರಿ ಅವರೇ ಬರೆದಿರುವ ‘ಚಿಕ್ಕಿಯ ಮೂಗುತಿ’ ಕಾದಂಬರಿಯನ್ನು ಆಧರಿಸಿ ಈ ಚಿತ್ರ ನಿರ್ಮಾಣ ಆಗಿದೆ. ವಿಶೇಷ ಏನೆಂದರೆ, ಅವರೇ ನಿರ್ಮಾಣ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.
ಶೀರ್ಷಿಕೆ ಸೂಚಿಸುತ್ತಿರುವಂತೆ ‘ಚಿಕ್ಕಿಯ ಮೂಗುತಿ’ ಒಂದು ಮಹಿಳಾ ಪ್ರಧಾನ ಕಥಾಹಂದರ ಇರುವಂತಹ ಸಿನಿಮಾ. ಹೆಣ್ಮಕ್ಕಳ ಹೋರಾಟ, ಶೋಷಣೆ ಮುಂತಾದ ವಿಷಯಗಳ ಕುರಿತಾಗಿ ಇರುವ ಸಿನಿಮಾ ಇದು. ಈ ಸಿನಿಮಾದಲ್ಲಿ ತಾರಾ ಅನುರಾಧಾ, ಭವಾನಿ ಪ್ರಕಾಶ್, ಶ್ವೇತಾ ಶ್ವೀವಾತ್ಸವ್, ಅವಿನಾಶ್, ರಂಗಾಯಣ ರಘು, ತಬಲ ನಾಣಿ, ಭರತ್ ಬೋಪಣ್ಣ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ಗರುಡ ಪುರಾಣ ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಬಹುತೇಕ ಮಹಿಳೆಯರೇ ‘ಚಿಕ್ಕಿಯ ಮೂಗುತಿ’ ಸಿನಿಮಾದಲ್ಲಿ ಕೆಲಸ ಮಾಡಿರುವುದು ವಿಶೇಷ. ಸಿನಿಮಾದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಾರಾ ಅನುರಾಧಾ ಮಾತನಾಡಿದ್ದಾರೆ. ‘ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ರೀತಿಯೇ ಈ ಚಿತ್ರದಲ್ಲೂ ಸ್ತ್ರೀಯರಿಗೆ ಮೀಸಲಾತಿ ನೀಡಲಾಗಿದೆ. ಹೆಣ್ಣು ಮಕ್ಕಳೇ ಸೇರಿಕೊಂಡು ಈ ಸಿನಿಮಾ ಮಾಡಿದ್ದು, ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕಿ ದೇವಿಕಾ ಅವರು ಹೊಸಬರು ಅಂತ ಎನಿಸುವುದಿಲ್ಲ’ ಎಂದು ತಾರಾ ಹೇಳಿದ್ದಾರೆ. ಶ್ವೇತಾ ಶ್ರೀವಾತ್ಸವ್ ಮತ್ತು ಭವಾನಿ ಪ್ರಕಾಶ್ ಅವರಿಗೂ ತಮ್ಮ ಪಾತ್ರದ ಬಗ್ಗೆ ಖುಷಿ ಇದೆ.
ಇದನ್ನೂ ಓದಿ: ಅಂಗಾಂಗ ದಾನದ ಮಹತ್ವ ಸಾರಿದ ಕಾರುಣ್ಯ ರಾಮ್, ಅಶ್ವಿನಿ ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ
‘ಜನಿತ್ರಿ ಪ್ರೊಡಕ್ಷನ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನೀಡುತ್ತಿದ್ದಾರೆ. ವೆಂಕಟೇಶ್ ಆರ್. ಛಾಯಾಗ್ರಹಣ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸುತ್ತಿದ್ದಾರೆ. ಈ ಹಿಂದೆ ನಿರ್ದೇಶಕಿ ದೇವಿಕಿ ಅವರು ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಬರಹಗಾರ್ತಿ ಕೂಡ ಹೌದು. 40ಕ್ಕೂ ಹೆಚ್ಚು ಕಾದಂಬರಿಗಳನ್ನು ಅವರು ಬರೆದಿದ್ದಾರೆ ಎಂಬುದು ವಿಶೇಷ. ಈಗ ತಮ್ಮದೇ ಕಾದಂಬರಿಗೆ ಸಿನಿಮಾ ರೂಪ ನೀಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. 2023ರ ಕೊನೆಯಲ್ಲಿ ಅಥವಾ 2024ರ ಆರಂಭದಲ್ಲಿ ಈ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Mon, 16 October 23