‘ಚೌ ಚೌ ಬಾತ್’ ಸಿನಿಮಾದಲ್ಲಿ ಹೈಪರ್ ಲಿಂಕ್ ಪ್ರೇಮಕಥೆ; ಮಾರ್ಚ್ 15ಕ್ಕೆ ರಿಲೀಸ್
‘ಕನ್ನಡದ ಮೊದಲ ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ’ ಎಂಬ ಟ್ಯಾಗ್ ಇಟ್ಟುಕೊಂಡು ಸಿದ್ಧವಾಗಿರುವ ‘ಚೌ ಚೌ ಬಾತ್’ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಕೇಂಜ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಮೂರು ಪ್ರತ್ಯೇಕ ಪ್ರೇಮಕಥೆಗಳು ಇರಲಿವೆ. ಅವುಗಳ ನಡುವೆ ಹೈಪರ್ ಲಿಂಕ್ ಕಾಣಿಸಲಿದೆ ಎಂದು ಹೇಳುವ ಮೂಲಕ ಚಿತ್ರತಂಡದವರು ಕೌತುಕ ಮೂಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈಗ ಹೊಸತನದ ಸಿನಿಮಾಗಳು (Kannada Movies) ಸದ್ದು ಮಾಡುತ್ತಿವೆ. ಈ ವಾರ (ಮಾರ್ಚ್ 15) ಬಿಡುಗಡೆ ಆಗಲಿರುವ ‘ಚೌ ಚೌ ಬಾತ್’ (Chow Chow Bath) ಸಿನಿಮಾ ಕೂಡ ಅದೇ ರೀತಿ ಹೊಸತನವನ್ನು ಹೊತ್ತು ತರುವ ನಿರೀಕ್ಷೆ ಇದೆ. ಈತನಕ ಒಂದಷ್ಟು ಕಾರಣಗಳಿಂದ ಸದ್ದು ಮಾಡುತ್ತಾ, ಸಿನಿಪ್ರಿಯರ ವಲಯದಲ್ಲಿ ಒಂದು ಬಗೆಯ ಕುತೂಹಲ ಮೂಡುವಂತೆ ಮಾಡಿರುವ ಈ ಸಿನಿಮಾಗೆ ಕೇಂಜ ಚೇತನ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಸಾಗರ್ ಗೌಡ, ಸುಶ್ಮಿತಾ ಭಟ್ (Sushmitha Bhat), ಸಂಕಲ್ಪ್ ಶರ್ಮಾ, ಅರುಣಾ ಬಾಲರಾಜ್, ಗೀತಾ ಬಂಗೇರ, ಧನುಶ್ ಬೈಕಂಪಾಡಿ, ಪ್ರಕರ್ಷ ಶಾಸ್ತ್ರಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಚೌ ಚೌ ಬಾತ್’ ಎಂಬ ಶೀರ್ಷಿಕೆ ನೋಡಿದರೆ ಇದು ಬಹಳ ಪರಿಚಿತ ಎನಿಸುತ್ತದೆ. ಆದರೆ ಈ ಸಿನಿಮಾದ ಕಥೆ ಬೇರೆಯದೇ ರೀತಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರೇಕ್ಷಕರು ಸುಲಭವಾಗಿ ಅಂದಾಜಿಸಲು ಸಾಧ್ಯವಾಗದ ಕಹಾನಿ ಈ ಸಿನಿಮಾದಲ್ಲಿ ಇದೆ ಎಂದು ನಿರ್ದೇಶಕ ಕೇಂಜ ಚೇತನ್ ಕುಮಾರ್ ಭರವಸೆ ನೀಡಿದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ಅಂಥದ್ದು ಏನಿರಬಹುದು ಎಂಬ ಕೌತುಕ ಮೂಡಿದೆ. 3 ಪ್ರಕಾರದ ಪ್ರೇಮಕಥೆಗಳು ಈ ಸಿನಿಮಾದಲ್ಲಿ ಇವೆ.
ಈಗಾಗಲೇ ಸಾಂಗ್, ಟ್ರೇಲರ್ ಮೂಲಕ ‘ಚೌ ಚೌ ಬಾತ್’ ಸಿನಿಮಾದ ಝಲಕ್ ಕಾಣಿಸಿದೆ. ಮಾರ್ಚ್ 15ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಕಹಾನಿ ಏನು ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ‘ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ’ ಎನ್ನುವ ಡಿಫರೆಂಟ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ ಎಂದು ಕೂಡ ಹೇಳಲಾಗಿದೆ. ಪರಭಾಷೆಯಲ್ಲಿ ಈ ರೀತಿಯ ಪ್ರಯತ್ನಗಳು ತಕ್ಕಮಟ್ಟಿಗೆ ಆಗಿವೆ. ಕನ್ನಡದ ಪ್ರೇಕ್ಷಕರಿಗೆ ಈ ಸಿನಿಮಾ ಸಂಪೂರ್ಣ ಹೊಸತನದ ಅನುಭವ ನೀಡಲಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.
‘ಚೌ ಚೌ ಬಾತ್’ ಸಿನಿಮಾದಲ್ಲಿ ಮೂವರು ನಾಯಕರು ಹಾಗೂ ನಾಯಕಿಯರು ಇದ್ದಾರೆ. ಅವರ ಪೈಕಿ ಪ್ರತಿ ಜೋಡಿಯ ಕಥೆಯು ಇನ್ನೊಂದು ಜೋಡಿಯ ಕಹಾನಿಯೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಇಂಥಹ ಹೈಪರ್ ಲಿಂಕ್ ಮೂಲಕ ಪ್ರತಿ ಕ್ಷಣವೂ ತಿರುವುಗಳು ಎದುರಾಗುತ್ತವೆ. ಈ ರೀತಿಯ ಅಚ್ಚರಿಗಳನ್ನು ಒಳಗೊಂಡಿರುವ ಸ್ಕ್ರೀನ್ ಪ್ಲೇ ಆದ್ದರಿಂದ ಎಲ್ಲ ವರ್ಗದ ಜನರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ.
ಇದನ್ನೂ ಓದಿ: ಮಸ್ತ್ ಡೈಲಾಗ್ಗಳ ಮೂಲಕ ಗಮನ ಸೆಳೆದ ‘ಚೌ ಚೌ ಬಾತ್’ ಟ್ರೇಲರ್ ಹೇಗಿದೆ ನೋಡಿ…
‘ಹಾರಿಜಾನ್ ಮೂವೀಸ್’ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾವನ್ನು ‘ಸನಾತನಯ್ ಪಿಕ್ಚರ್ಸ್’ ಹಾಗೂ ‘ಕಾಮಧೇನು ಫಿಲಂಸ್’ ಸಂಸ್ಥೆಗಳು ಅರ್ಪಿಸುತ್ತಿವೆ. ಸತೀಶ್ ಎಸ್.ಬಿ, ಪೂರ್ಣಚಂದ್ರ, ಸಂಕಲ್ಪ್ ಶರ್ಮಾ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ. ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣವಿದೆ. ಹೇಮಂತ್ ಜೋಯಿಸ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ರುದ್ರಮೂರ್ತಿ ಬೆಳಗೆರೆ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.