AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜಾಮೀನು ಅರ್ಜಿ: ಸುಪ್ರೀಂ ಕೋರ್ಟ್​​ನಲ್ಲಿ ವಾದ-ಪ್ರತಿವಾದ ಹೀಗಿತ್ತು?

Darshan Bail application: ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ ಇನ್ನೂ ಹಲವು ಕಾರಣಗಳನ್ನು ನೀಡಿ ನಟ ದರ್ಶನ್ ಅವರು ತಮಗೆ ಜಾಮೀನು ನೀಡಬೇಕೆಂದು ಸುಪ್ರೀಂಕೋರ್ಟ್​​ನಲ್ಲಿ ಮನವಿ ಮಾಡಿದ್ದರು. ಇಂದು ನಟ ದರ್ಶನ್ ಪರವಾಗಿ ಖ್ಯಾತ ವಕೀಲ ಮುಕುಲ್ ರೊಹ್ಟಗಿ ವಾದ ಮಂಡಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದರು. ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದದ ಸಂಪೂರ್ಣ ಮಾಹಿತಿ ಇಲ್ಲಿದೆ...

ದರ್ಶನ್ ಜಾಮೀನು ಅರ್ಜಿ: ಸುಪ್ರೀಂ ಕೋರ್ಟ್​​ನಲ್ಲಿ ವಾದ-ಪ್ರತಿವಾದ ಹೀಗಿತ್ತು?
Darshan Case
ಮಂಜುನಾಥ ಸಿ.
|

Updated on:May 15, 2026 | 12:06 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್​​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಜೈಲಿನ ಅವ್ಯವಸ್ಥೆ, ಜೈಲಧಿಕಾರಿಗಳ ತಾರತಮ್ಯ, ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ ಇನ್ನೂ ಹಲವು ಕಾರಣಗಳನ್ನು ನೀಡಿ ನಟ ದರ್ಶನ್ ಅವರು ತಮಗೆ ಜಾಮೀನು ನೀಡಬೇಕೆಂದು ಸುಪ್ರೀಂಕೋರ್ಟ್​​ನಲ್ಲಿ ಮನವಿ ಮಾಡಿದ್ದರು. ಇಂದು ನಟ ದರ್ಶನ್ ಪರವಾಗಿ ಖ್ಯಾತ ವಕೀಲ ಮುಕುಲ್ ರೊಹ್ಟಗಿ ವಾದ ಮಂಡಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದರು.

ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ವಿಜಯ್ ಬಿಷ್ಣೋಯಿ ಅವರ ದ್ವಿಸದಸ್ಯ ಪೀಠವು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಮೊದಲಿಗೆ ವಾದ ಮಂಡಿಸಿದ ದರ್ಶನ್ ಪರ ವಕೀಲ ಮುಕುಲ್ ರೊಹ್ಟಗಿ, ‘ಜೈಲಿನಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ, ಇನ್ನೂ ಕ್ವಾರಂಟೈನ್ ಸೆಲ್​​ನಲ್ಲೇ ಇಟ್ಟಿದ್ದಾರೆ’ ಎಂದರು. ಅದಕ್ಕೆ ನ್ಯಾಯಮೂರ್ತಿಗಳು, ‘ನಿಮಗೆ (ಆರೋಪಿಗೆ) ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜೈಲಧಿಕಾರಿಗಳು ವರದಿ ನೀಡಿದ್ದಾರೆ. 70 ಬಾರಿ ಕುಟುಂಬದವರ ಭೇಟಿಗೆ ಅವಕಾಶ ನೀಡಿದ್ದೇವೆ ಎಂದಿದ್ದಾರೆ ಎಂದರು. ಆದರೆ ರೊಹ್ಟಗಿ, ‘ಕುಟುಂಬದೊಂದಿಗೆ ಮಾತನಾಡುವಾಗ ಪೊಲೀಸರು ಜೊತೆಯಲ್ಲಿರುತ್ತಾರೆ ಎಂದರು.

ಬಳಿಕ ಸಾಕ್ಷ್ಯಗಳ ವಿಚಾರಣೆ ಬಗ್ಗೆ ವಾದ ಮಂಡಿಸಿದ ಮುಕುಲ್ ರೊಹ್ಟಗಿ, 272 ಸಾಕ್ಷ್ಯಗಳ ಪೈಕಿ ಕೇವಲ 10 ಸಾಕ್ಷ್ಯಗಳ ವಿಚಾರಣೆಯನ್ನಷ್ಟೆ ಮಾಡಲಾಗಿದೆ’ ಎಂದರು. ನ್ಯಾಯಮೂರ್ತಿಗಳು ಪ್ರಾಸಿಕ್ಯೂಷನ್ ಅವರನ್ನುದ್ದೇಶಿಸಿ, ವಿಚಾರಣೆ ತಡವಾಗುತ್ತಿರುವುದಕ್ಕೆ ಕಾರಣ ಕೇಳಿದರು. ಅದಕ್ಕೆ ಸಿದ್ಧಾರ್ಥ್ ಲೂತ್ರಾ ಅವರು, ‘ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷ್ಯಗಳ ವಿಚಾರಣೆ ಮಾಡುವುದಾಗಿ ಹೇಳಿದರು. ಬಳಿಕ ದರ್ಶನ್ ಪರ ವಕೀಲರು ಪ್ರತ್ಯಕ್ಷದರ್ಶಿ ಸಾಕ್ಷ್ಯಗಳ ವಿಚಾರಣೆಯನ್ನಾದರೂ ಮಾಡಿ ಎಂದು ನಾವು ಕೇಳುತ್ತಿದ್ದೇವೆ ಎಂದರು. ಅದಕ್ಕೆ ಸಿದ್ಧಾರ್ಥ್ ಲೂಥ್ರಾ, ‘ನೀವು (ಆರೋಪಿಗಳು) ಸಾಕ್ಷ್ಯಗಳಿಗೆ ಏನು ಮಾಡಿದ್ದೀರಿ ಎಂದು ನಾನು ಇಲ್ಲಿ ಹೇಳುವುದಿಲ್ಲ, ನಾನು ಹೇಳಿದರೆ ನಿಮ್ಮ ಜಾಮೀನು ಅರ್ಜಿಯೇ ರದ್ದಾಗಲಿದೆ’ ಎಂದು ಖಾರವಾಗಿ ಹೇಳಿದರು.

ಇದನ್ನೂ ಓದಿ:Darshan Thoogudeepa: ದರ್ಶನ್​​ಗೆ ಕನಿಷ್ಟ ಒಂದು ವರ್ಷ ಜೈಲು ಖಾಯಂ

ಬಳಿಕ ನ್ಯಾಯಮೂರ್ತಿಗಳು, ಪ್ರಕರಣದ ವಿಚಾರಣೆ ನಡೆಸುತ್ತಿರುವ 57ನೇ ಸಿಸಿಎಚ್​ ನ್ಯಾಯಾಲಯ ನೀಡಿರುವ ವರದಿಯಂತೆ ನವೆಂಬರ್ 3 ರಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಕಳೆದ ಏಳು ತಿಂಗಳಲ್ಲಿ 10 ಸಾಕ್ಷ್ಯಗಳ ವಿಚಾರಣೆ ಮಾಡಿರುವುದಾಗಿ ವರದಿ ನೀಡಿದೆ ಎಂಬುದನ್ನು ಓದಿ ತಿಳಿಸಿದರು. ಬಳಿಕ ಆದೇಶ ಬರೆಸಿದ ನ್ಯಾಯಮೂರ್ತಿಗಳು, ‘ಮುಂದಿನ ಒಂದು ವರ್ಷದಲ್ಲಿ ಪ್ರಮುಖವಾದ 60 ಸಾಕ್ಷ್ಯಗಳ ವಿಚಾರಣೆ ನಡೆಸಬೇಕು, ಅನಗತ್ಯ ಕಾರಣ ನೀಡಿ ವಿಚಾರಣೆ ಮುಂದೂಡಬಾರದು. ಒಂದು ವರ್ಷದ ನಂತರ ಜಾಮೀನು ಅರ್ಜಿಯ ಪರಾಮರ್ಶೆ ಮಾಡಬಹುದು. ಆ ಬಳಿಕ ನೇರವಾಗಿ ವಿಚಾರಣಾ ನ್ಯಾಯಾಲಯದಲ್ಲಿಯೇ ಜಾಮೀನು ಅರ್ಜಿ ಸಲ್ಲಿಸಬಹುದು’ ಎಂದರು.

ಜೈಲಿನಲ್ಲಿ ಸೌಲಭ್ಯ ನೀಡದೇ ಇರುವ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಿದ ನ್ಯಾಯಮೂರ್ತಿಗಳು, ‘ಜೈಲಿನಲ್ಲಿ ಕನಿಷ್ಠ ಮೂಲ ಸವಲತ್ತು ನೀಡಿಲ್ಲವೆಂದು ಆರೋಪಿಸಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರಮಾಣಪತ್ರ ಸಲ್ಲಿಸಿದ್ದಾರೆ, ಜೈಲಿನ ಮುಖ್ಯ ಅಧೀಕ್ಷಕರೇ ಪ್ರಮಾಣಪತ್ರ ಸಲ್ಲಿಸಿದ್ದಾರೆ, ದರ್ಶನ್​ಗೆ ಎಲ್ಲಾ ಕನಿಷ್ಠ ಮೂಲ ಸವಲತ್ತು ನೀಡಬೇಕು, ಜೈಲು ಕೈಪಿಡಿಯಲ್ಲಿ ನಿಗದಿಪಡಿಸಿರುವ ಸವಲತ್ತು ನೀಡಬೇಕು, ಕ್ವಾರಂಟೈನ್ ಸೆಲ್ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು. ಆ ಮೂಲಕ ಇನ್ನು ಕನಿಷ್ಟ ಒಂದು ವರ್ಷ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದಾಗಿದೆ. ಒಂದು ವರ್ಷದಲ್ಲಿ ಸರಿಯಾಗಿ ಸಾಕ್ಷ್ಯಗಳ ವಿಚಾರಣೆ ಆಗದಿದ್ದಲ್ಲಿ ಮಾತ್ರವೇ ದರ್ಶನ್ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ. ಆಗ ನ್ಯಾಯಾಲಯವು ಆ ವರೆಗಿನ ವಿಚಾರಣೆಯನ್ನು ಆಧರಿಸಿ ದರ್ಶನ್​​ಗೆ ಜಾಮೀನು ನೀಡಬೇಕೋ ಬೇಡವೊ ಎಂಬುದನ್ನು ನಿರ್ಧರಿಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Fri, 15 May 26

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More