ದರ್ಶನ್​ ವಿದ್ಯಾರ್ಹತೆ ಏನು? ‘ಅನ್​ಎಜುಕೇಟೆಡ್​’ ಎಂದ ಇಂದ್ರಜಿತ್​ಗೆ ಡಿ ಬಾಸ್​ ತಿರುಗೇಟು

Darshan | Indrajit lankesh: ‘ಇಷ್ಟೆಲ್ಲ ಮಾತನಾಡುವ ಇಂದ್ರಜಿತ್​ ತಾನೊಬ್ಬ ನಿರ್ದೇಶಕ ಎಂದು ಹೇಳಿಕೊಳ್ಳುತ್ತಾನೆ. ಅವನು ಯಾರ ಜೊತೆ ಕೆಲಸ ಮಾಡಿದ್ದಾನೆ ಅಂತ ಮೊದಲು ಕೇಳಿ. ನಿರ್ದೇಶನ ಅಷ್ಟು ಸುಲಭ ಅಲ್ಲ’ ಎಂದು ಇಂದ್ರಜಿತ್​ ವಿರುದ್ಧ ದರ್ಶನ್​ ಗುಡುಗಿದ್ದಾರೆ.

ದರ್ಶನ್​ ವಿದ್ಯಾರ್ಹತೆ ಏನು? ‘ಅನ್​ಎಜುಕೇಟೆಡ್​’ ಎಂದ ಇಂದ್ರಜಿತ್​ಗೆ ಡಿ ಬಾಸ್​ ತಿರುಗೇಟು
ನಟ ದರ್ಶನ್​ (ಫೈಲ್ ಚಿತ್ರ)

ದರ್ಶನ್​ ಮತ್ತು ಇಂದ್ರಜಿತ್​ ಲಂಕೇಶ್​ ನಡುವಿನ ಜಟಾಪಟಿ ಜೋರಾಗಿದೆ. ಇಂದ್ರಜಿತ್​ ಲಂಕೇಶ್​ ಅವರು ಸಂದೇಶ್​ ದಿ ಪ್ರಿನ್ಸ್​ ಹೋಟೆಲ್​ ಮಾಲೀಕ ಸಂದೇಶ್​ ಜೊತೆ ಮಾತನಾಡಿದ ಫೋನ್​ ಕಾಲ್​ ರೆಕಾರ್ಡ್​ ವೈರಲ್​ ಆದ ಬೆನ್ನೆಲ್ಲೇ ದರ್ಶನ್​ ಗರಂ ಆಗಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ‘ಅನ್​ ಎಜುಕೇಟೆಡ್​ ಸೆಲೆಬ್ರಿಟಿಗಳು’ ಎಂದು ಇಂದ್ರಜಿತ್​ ಹೇಳಿದ ಮಾತಿಗೆ ಡಿ ಬಾಸ್​ ಕೆಂಡಾಮಂಡಲ ಆಗಿದ್ದಾರೆ. ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ತಕ್ಕ ಉತ್ತರ ನೀಡಿದ್ದಾರೆ.

‘ರೀ ಸ್ವಾಮಿ, ನಾನು 10ನೇ ಕ್ಲಾಸ್​ ಪಾಸ್​ ಮಾಡಿದ್ದೇನೆ. ನೀನಾಸಂ ಸಂಸ್ಥೆಯಲ್ಲಿ ಕಲಿತುಬಂದಿದ್ದೇನೆ. ಚೆನ್ನೈನಲ್ಲಿ ರಜನಿಕಾಂತ್​ ಕಲಿತ ಕಡೆಯೇ ನಾನೂ ಕಲಿತು ಬಂದಿದ್ದೇನೆ. ಶಿವಣ್ಣ ಮತ್ತು ವಿಜಯ್​ ರಾಘವೇಂದ್ರ ಕೂಡ ಅಲ್ಲೇ ಓದಿದ್ದಾರೆ. ಒಬ್ಬ ಕಲಾವಿದ ಆಗಬೇಕು ಎಂದು ನಾನು ಈ ಎಲ್ಲ ಶಿಕ್ಷಣ ಪಡೆದುಕೊಂಡು ಬಂದಿದ್ದೇನೆ. ನನಗೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್​ ಓದೋಕೆ-ಬರೆಯೋಕೆ ಬರುತ್ತೆ. ಸಿನಿಮಾದಲ್ಲಿ ಬದುಕೋಕೆ ನನಗೆ ಇಷ್ಟು ಸಾಕು’ ಎಂದು ದರ್ಶನ್​ ತಿರುಗೇಟು ನೀಡಿದ್ದಾರೆ.

‘ಇಷ್ಟೆಲ್ಲ ಮಾತನಾಡುವ ಇಂದ್ರಜಿತ್​ ತಾನೊಬ್ಬ ನಿರ್ದೇಶಕ ಎಂದು ಹೇಳಿಕೊಳ್ಳುತ್ತಾನೆ. ಅವನು ಯಾರ ಜೊತೆ ಕೆಲಸ ಮಾಡಿದ್ದಾನೆ ಅಂತ ಮೊದಲು ಕೇಳಿ. ನಿರ್ದೇಶನ ಅಷ್ಟು ಸುಲಭ ಅಲ್ಲ. ನಾನು ಅವನ ಜೊತೆ ಒಂದು ಸಿನಿಮಾ ಮಾಡಿದ್ದೇನೆ. ಆಗಲೇ ಅವನು ಏನು ಅಂತ ನನಗೆ ಗೊತ್ತಾಗಿತ್ತು’ ಎಂದು ಇಂದ್ರಜಿತ್​ ಬಗ್ಗೆ ದರ್ಶನ್​ ಕಿಡಿಕಾರಿದ್ದಾರೆ.

ಪುನೀತ್ ರಾಜ್​​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಅವರ ಆಸ್ತಿಗೆ ಸಂಬಂಧಿಸಿದಂತೆ ದರ್ಶನ್​ ಹೆಸರನ್ನು ಉಮಾಪತಿ ಶ್ರೀನಿವಾಸ್​ ಅವರು ಪ್ರಸ್ತಾಪಿಸಿದ್ದರು. ಅದಕ್ಕೆ ದರ್ಶನ್​ ಉತ್ತರ ನೀಡಿದ್ದಾರೆ. ‘ನಾನು ಟ್ರಿಗರ್​ ಆಗುವುದಿಲ್ಲ. ದೊಡ್ಮನೆ ವಿಚಾರ ಬಂದಿರುವುದಕ್ಕೆ ನಾನು ಮಾತನಾಡುತ್ತಿದ್ದೇನೆ. ರಾಜ್​ಕುಮಾರ್​ ಕುಟುಂಬದಿಂದಲೇ ನಮ್ಮ ಅಪ್ಪ ಅನ್ನ ತಿಂದು ಬಂದವರು. ನಾನು ಕೂಡ ಅಲ್ಲಿಂದಲೇ ಅನ್ನ ತಿಂದುಕೊಂಡು ಬಂದವನು. 175 ರೂ. ಸಂಬಳದಿಂದ ನನ್ನ ವೃತ್ತಿಜೀವನ ಆರಂಭಿಸಿದ್ದೆ. ದೊಡ್ಮನೆಗೂ ನಮಗೂ ಏನೂ ಅಸಮಾಧಾನ ಇಲ್ಲ. ದೊಡ್ಮನೆಯವರ ಬಳಿ ಇಂಥ ಪ್ರಾಪರ್ಟಿ ಸಾವಿರ ಇರಬಹುದು. ಚಿನ್ನದ ಚಮಕ ಬಾಯಲ್ಲಿ ಇಟ್ಟುಕೊಂಡು ಜನಿಸಿದವರು ಅವರು’ ಎಂದು ದರ್ಶನ್​ ಹೇಳಿದ್ದಾರೆ.

ಇದನ್ನೂ ಓದಿ:

‘ನಿಮ್ಮ ಪಯಣ ನರಕವಾಗಲಿ’: ಇಂದ್ರಜಿತ್​ ಫೋಟೋ ಇಟ್ಟು ಶ್ರದ್ಧಾಂಜಲಿ ಕೋರಿದ ದರ್ಶನ್​ ಅಭಿಮಾನಿಗಳು

ದರ್ಶನ್​ ಹಲ್ಲೆ ಪ್ರಕರಣದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಆಡಿಯೋ ಇಲ್ಲಿದೆ