ದರ್ಶನ ಜಾಮೀನು ಅರ್ಜಿ ವಿಚಾರಣೆ: ತನಿಖೆ ಬಗ್ಗೆ ಅನುಮಾನ ಮೂಡಿಸಿದ ವಕೀಲರ ವಾದ
Darshan Bail: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ನಡೆದಿದೆ. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಇಂದು ವಾದ ಮಂಡಿಸಿದ್ದಾರೆ. ಇಂದು ಮಂಡಿಸಲಾದ ವಾದದ ಮುಖ್ಯಾಂಶಗಳು ಇಲ್ಲಿವೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ದರ್ಶನ್ಗೆ ಈಗಾಗಲೇ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. ಈಗ ಜನರಲ್ ಬೇಲ್ (ನಿಯಮಿತ ಜಾಮೀನು)ಗೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ವಾದ ಮಂಡಿಸಿದ ದರ್ಶನ್ ಪರ ವಕೀಲ ಸಿವಿ ನಾಗೇಶ್, ಪ್ರಕರಣದ ಬಗ್ಗೆ ಹಲವು ಅನುಮಾನಗಳನ್ನು ಎತ್ತಿದರು. ಪೊಲೀಸರ ತನಿಖೆ ಬಗ್ಗೆಯೂ ಅನುಮಾನಗಳನ್ನು ವ್ಯಕ್ತಪಡಿಸಿದರು. ಸಿವಿ ನಾಗೇಶ್ ಅವರು ಇಂದು ಮಾಡಿದ ವಾದದ ಮುಖ್ಯಾಂಶಗಳು ಇಲ್ಲಿವೆ.
* ವಾದ ಆರಂಭಿಸಿದ ನಾಗೇಶ್ ಅವರು ರೇಣುಕಾ ಸ್ವಾಮಿ ಮಹಿಳೆಯರಿಗೆ ಕಳಿಸಿದ್ದಾನೆ ಎನ್ನಲಾದ ಸಂದೇಶಗಳನ್ನು ಓದಿ ಹೇಳಿದರು. ರೇಣುಕಾ ಸ್ವಾಮಿಗೆ ಮಹಿಳೆಯರ ಬಗ್ಗೆ ಗೌರವ ಇರಲಿಲ್ಲ. ಕಾನೂನಿನ ಬಗ್ಗೆಯೂ ಗೌರವ ಇರಲಿಲ್ಲ, ಅಂಥಹಾ ವ್ಯಕ್ತಿಯನ್ನು ವಿಜೃಂಭಿಸಲಾಗಿದೆ.
* ದರ್ಶನ್ ಮೇಲೆ ಅಹರಣ, ಕೊಲೆ ಆರೋಪ ಹೊರಿಸಲಾಗಿದೆ. ಆದರೆ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಲಾಗಿಲ್ಲ. ಆತನನ್ನು ಬಲವಂತದಿಂದ ಬೆಂಗಳೂರಿಗೆ ಕರೆತಂದುದ್ದಕ್ಕೆ ಸಾಕ್ಷ್ಯಗಳಿಲ್ಲ. ಸ್ವತಃ ಆತನೇ ಮನೆಯವರಿಗೆ ಕರೆ ಮಾಡಿ ಸ್ನೇಹಿತರೊಟ್ಟಿಗೆ ಹೋಗುತ್ತಿರುವುದಾಗಿ ಹೇಳಿದ್ದಾನೆ.
* ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುವಾಗ ದುರ್ಗಾ ಬಾರ್ಗೆ ಹೋದರು, ರೇಣುಕಾಸ್ವಾಮಿ ಫೋನ್ ಪೇ ಮೂಲಕ ಬಾರ್ಗೆ ಹಣ ಪಾವತಿಸಿದ್ದಾನೆ, ಈ ಬಗ್ಗೆ ಬಾರ್ನ ಮಾಲೀಕನ ಹೇಳಿಕೆ ದಾಖಲಿಸಲಾಗಿದೆ, ಅಪಹರಣಕ್ಕೊಳಗಾದವನು ಫೋನ್ ಪೇ ಮೂಲಕ ಹಣ ನೀಡಲು ಸಾಧ್ಯವೇ?
* ಮೃತದೇಹದ ಮಹಜರು, ಪೋಸ್ಟ್ ಮಾರ್ಟಂ ವಿಳಂಬ ಮಾಡಲಾಗಿದೆ, 1.5X2.5 ಸೆಂ.ಮೀ. ಗಾಯ ಬಿಟ್ಟರೆ ಉಳಿದವು ರಕ್ತಗಾಯಗಳಲ್ಲ, ಶವ ಶೈತ್ಯಾಗಾರದಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ಸಿಕ್ಕಿಲ್ಲ, ಶವದ ಫೋಟೋ ಆಧಾರದಲ್ಲಿ ಸಾವಿನ ಸಮಯ ಅಂದಾಜಿಸಲಾಗಿದೆ ಅದು ನಿಖರವಾದುದಲ್ಲ, ಶವಪರೀಕ್ಷೆ ವರದಿ ಒಂದು ತಿಂಗಳು ವಿಳಂಬವಾಗಿ ಬಂದಿದೆ ಎಂದು ವಾದಿಸಿದರು.
ಇದನ್ನೂ ಓದಿ:‘ರೇಣುಕಾಸ್ವಾಮಿ ಅಪಹರಣ ಆಗಿರಲಿಲ್ಲ, ಕೊಲೆ ಮಾಡುವ ಉದ್ದೇಶವೂ ಇರಲಿಲ್ಲ’; ದರ್ಶನ್ ಪರ ವಕೀಲರ ವಾದ
* 364 ಅಡಿಯಲ್ಲಿ ಕೊಲೆಯ ಉದ್ದೇಶಕ್ಕಾಗಿ ಅಪಹರಣ ಮಾಡಲಾಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಿರುವುದು, ಸಾಕ್ಷ್ಯನಾಶವಲ್ಲ ಎಂದ ವಕೀಲರು ಅಲಹಾಬಾದ್ ಹೈಕೋರ್ಟ್ನ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿದರು. ಮೃತ ದೇಹವನ್ನು ಸುಟ್ಟುಹಾಕಿದ್ದರೆ ಸಾಕ್ಷ್ಯನಾಶ ಪರಿಗಣಿಸಬಹುದಿತ್ತು ಆದರೆ ಆ ರೀತಿ ಆಗಿಲ್ಲ.
* ಕೃತ್ಯದ ಸ್ಥಳದಿಂದ 2 ಮರದ ಕೊಂಬೆ, ನೈಲಾನ್ ಹಗ್ಗ ವಶಪಡಿಸಿಕೊಳ್ಳಲಾಗಿದೆ, ಆದರೆ ಆ ಹಗ್ಗದಿಂದ ಉಸಿರುಗಟ್ಟಿಸಿ ಕೊಂದ ಆರೋಪವಿಲ್ಲ, ಹೊಡೆದ ಆರೋಪವಿದೆ, ಹಗ್ಗೆದಿಂದ ಹೊಡೆದರೆ ಬಾಸುಂಡೆ ಬರುತ್ತದಷ್ಟೇ. ಅಲ್ಲದೆ ಜೂ.9ರಂದೇ ಕೃತ್ಯ ನಡೆದ ಶೆಡ್ನ್ನು ಪೊಲೀಸರು ಲಾಕ್ ಮಾಡಿದ್ದರು, ಜೂನ್ 13ರಂದು ಕಾವಲುಗಾರನ ಹೇಳಿಕೆಯಲ್ಲಿ ಈ ಅಂಶವಿದೆ.
* ದರ್ಶನ್ ಹೇಳಿಕೆಯನ್ನು ಜೂನ್ 11ರಂದೇ ಪಡೆಯಲಾಗಿದೆ. ಜೂನ್ 12 ರಂದು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೂ.9ರಂದೇ ಸ್ಥಳಕ್ಕೆ ಪೊಲೀಸರು ಬಂದರೂ ಈ ವಸ್ತುಗಳನ್ನೇಕೆ ವಶಕ್ಕೆ ಪಡೆದಿಲ್ಲ? ಸಾಕ್ಷ್ಯಾಧಾರ ಸೃಷ್ಟಿಸಲು ಪೊಲೀಸರು ಹೀಗೆ ಮಾಡಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ ನಾಗೇಶ್.
* ಜೂನ್ 09, 10 ರಂದು ಸಾಕ್ಷ್ಯಗಳನ್ನು ಏಕೆ ವಶಕ್ಕೆ ಪಡೆದಿಲ್ಲ, ದರ್ಶನ್ ಹೇಳಿಕೆ ದಾಖಲು ಮಾಡಿದ ಬಳಿಕವೇ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಕಾರಣ ಏನು?
ಇದನ್ನೂ ಓದಿ:ದರ್ಶನ್ ಅನ್ನು ಪ್ರಕರಣದಲ್ಲಿ ಸಿಕ್ಕಿಸುವ ಯತ್ನ: ವಕೀಲ ಸಿವಿ ನಾಗೇಶ್ ವಾದ
* ಪಿಎಸ್ಐ ವಿನಯ್ 122 ಕರೆಗಳನ್ನು ಎ14ಗೆ ಮಾಡಿದ್ದಾರೆ, ಪಿಎಸ್ಐ ವಿನಯ್ ಮೊಬೈಲ್ನಿಂದ ಫೋಟೋ ರವಾನೆಯಾಗಿದೆ ಆದರೆ ಈ ಫೋಟೋಗಳನ್ನು ಪೊಲೀಸರು ರಿಕವರಿ ಮಾಡಿಲ್ಲ, PSI ವಿನಯ್ ಮೊಬೈಲ್ನಿಂದ ರಿಕವರಿ ಮಾಡಬೇಕಿತ್ತು ಮಾಡಿಲ್ಲ ಎಂಬುದು ಪ್ರಶ್ನೆ.
* ದರ್ಶನ್ ಬಟ್ಟೆ ಮತ್ತು ಶೂಗಳನ್ನು ವಶಪಡೆಯಲಾಗಿದೆ. ಪಂಚನಾಮೆಯಲ್ಲಿ ಅವುಗಳ ಮೇಲೆ ರಕ್ತದ ಕಲೆಗಳು ಇರುವ ಬಗ್ಗೆ ಉಲ್ಲೇಖ ಇಲ್ಲ. ಆದರೆ ಎಫ್ಎಸ್ಎಲ್ ವರದಿಯಲ್ಲಿ ಬಟ್ಟೆ ಹಾಗೂ ಶೂಗಳ ಮೇಲೆ ರಕ್ತದ ಕಲೆಗಳು ಇವೆ ಎಂದು ಹೇಳಲಾಗಿದೆ.
* ದರ್ಶನ್ ಬಟ್ಟೆಯನ್ನು ತಿಕ್ಕಿ-ತಿಕ್ಕಿ ತೊಳೆಯಲಾಗಿದೆ. ಹಾಗಿದ್ದ ಮೇಲೆ ರಕ್ತದ ಕಲೆ ಹೇಗೆ ಉಳಿಯುತ್ತದೆ. ಅಲ್ಲದೆ, ರೇಣುಕಾ ಸ್ವಾಮಿಯ ರಕ್ತವನ್ನು ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲಿ, ದರ್ಶನ್ ಬಟ್ಟೆ ಮತ್ತು ಶೂಗಳ ಮೇಲೆ ರಕ್ತ ಹಾಕಿರುವ ಸಾಧ್ಯತೆ ಇದೆ ಎಂದಿದ್ದಾರೆ ವಕೀಲ ನಾಗೇಶ್.
* 37 ಲಕ್ಷ ಹಣವನ್ನು ಸಾಕ್ಷ್ಯ ನಾಶಕ್ಕೆ ಇಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಆ ಹಣವನ್ನು ಮೇ ತಿಂಗಳಲ್ಲೆ ದರ್ಶನ್ ಇಟ್ಟುಕೊಂಡಿದ್ದರು. ಸ್ಟೋನಿ ಬ್ರೂಕ್ನಲ್ಲಿ ಕೊಲೆಗೆ ಯೋಜನೆ ಹಾಕಲಾಗಿತ್ತು ಎನ್ನಲಾಗಿದೆ. ಆದರೆ ಚಿಕ್ಕಣ್ಣ ನೀಡಿರುವ ಹೇಳಿಕೆಯಂತೆ ಅಲ್ಲಿ ಸಿನಿಮಾ ಬಗ್ಗೆ ಮಾತ್ರ ಮಾತನಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Tue, 26 November 24