14 ವರ್ಷಗಳ ಹಿಂದೆ ಬಂದಿತ್ತು ‘ತಾಜ್ ಮಹಲ್’, ಈಗ ಬರ್ತಿದೆ ‘ತಾಜ್ ಮಹಲ್ 2’
Taj Mahal 2 movie: ‘ತಾಜ್ ಮಹಲ್ 2’ ಸಿನಿಮಾ ಸೆಪ್ಟೆಂಬರ್ 2ರಂದು ಪ್ರೇಕ್ಷಕರ ಎದುರು ಬರಲಿದೆ. ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡದಿಂದ ಸಕಲ ಸಿದ್ಧತೆ ನಡೆಯುತ್ತಿದೆ.
2008ರಲ್ಲಿ ತೆರೆಕಂಡಿದ್ದ ‘ತಾಜ್ ಮಹಲ್’ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈಗ ‘ತಾಜ್ ಮಹಲ್ 2’ (Taj Mahal 2) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶೀರ್ಷಿಕೆಯ ಕಾರಣದಿಂದ ಈ ಚಿತ್ರ ಗಮನ ಸೆಳೆದಿದೆ. ಹಲವು ಕಾರಣದಿಂದ ಈ ಸಿನಿಮಾದ ರಿಲೀಸ್ ತಡವಾಗಿತ್ತು. ಈಗ ಅದಕ್ಕೆ ಸಮಯ ಕೂಡಿಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Kannada Film Chamber) ಅಧ್ಯಕ್ಷರಾದ ಭಾ.ಮ. ಹರೀಶ್ ಅವರು ‘ತಾಜ್ ಮಹಲ್ 2’ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ದೇವರಾಜ್ ಕುಮಾರ್ (Devaraj Kumar) ಅವರು ಈ ಚಿತ್ರಕ್ಕೆ ಹೀರೋ. ಅವರಿಗೆ ಜೋಡಿಯಾಗಿ ಸಮೃದ್ಧಿ ಶುಕ್ಲಾ ನಟಿಸಿದ್ದಾರೆ. ಸೆಪ್ಟೆಂಬರ್ 2ರಂದು ‘ತಾಜ್ ಮಹಲ್ 2’ ರಿಲೀಸ್ ಆಗಲಿದೆ.
ಮೇಕಪ್ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದವರು ದೇವರಾಜ್ ಕುಮಾರ್. ನಂತರದ ದಿನಗಳಲ್ಲಿ ಅವರು ನಿರ್ದೇಶಕರಾದರು. ಡೈರೆಕ್ಷನ್ ಮಾಡುವುದರ ಜೊತೆಗೆ ಹೀರೋ ಆಗಿ ನಟಿಸಲು ಆರಂಭಿಸಿದರು. ಪ್ರಸ್ತುತ ಅವರು ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ತಾಜ್ ಮಹಲ್ 2’ ಸಿನಿಮಾ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ.
‘2019ರಲ್ಲಿ ನಾವು ಈ ಚಿತ್ರವನ್ನು ಆರಂಭಿಸಿದ್ದೆವು. 2020ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ನಂತರ ಬಂದ ಕೊರೊನದಿಂದ ಚಿತ್ರದ ಕೆಲಸ ಮುಗಿಯಲು ವಿಳಂಬವಾಯಿತು. ಇತ್ತೀಚೆಗೆ ನಮ್ಮ ಸಿನಿಮಾದ ಹಾಡೊಂದನ್ನು ಉತ್ತರ ಕರ್ನಾಟಕದಲ್ಲಿ ಜವಳಿ ಸಚಿವರಾದ ಶಂಕರ್ ಪಾಟೀಲ್ ಬಿಡುಗಡೆ ಮಾಡಿದರು. ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ದೇವರಾಜ್ಕುಮಾರ್.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಉಮೇಶ್ ಬಣಕಾರ್ ಅವರು ಸೇರಿದಂತೆ ಹಲವರ ಸಹಕಾರಕ್ಕೆ ದೇವರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಟ್ರೇಲರ್ ನೋಡಿ ಪ್ರೇಕ್ಷಕರು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಒಂದು ಮಿಲಿಯನ್ ವೀಕ್ಷಣೆ ಕಂಡಿರುವುದು ಈ ಟ್ರೇಲರ್ನ ಹೆಚ್ಚುಗಾರಿಕೆ. ಭರ್ಜರಿ ಸಾಹಸ ದೃಶ್ಯಗಳು ಇದರಲ್ಲಿ ಗಮನ ಸೆಳೆದಿವೆ. ಕಾಕ್ರೋಜ್ ಸುಧಿ, ತಬಲ ನಾಣಿ, ಶೋಭರಾಜ್, ಶಿವರಾಂ, ಜಿಮ್ ರವಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.