ಭರ್ಜರಿಯಾಗಿ ರೆಡಿಯಾಗುತ್ತಿದೆ ಧ್ರುವ ಸರ್ಜಾ ‘ಮಾರ್ಟಿನ್’, ಫೈಟ್ಗೆ 9 ಕೋಟಿ, ಒಂದು ಹಾಡಿಗೆ 3 ಕೋಟಿ
Dhruva Sarja: ಧ್ರುವ ಸರ್ಜಾ ನಟಿಸುತ್ತಿರುವ 'ಮಾರ್ಟಿನ್' ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಫೈಟ್ ಸೀನ್ಗೆ 9 ಕೋಟಿ ಖರ್ಚು ಮಾಡಿದ್ದ ತಂಡ, ಹಾಡಿನ ಚಿತ್ರೀಕರಣಕ್ಕೆ 3 ಕೋಟಿ ಖರ್ಚು ಮಾಡಿದೆಯಂತೆ.
ಈಗೇನಿದ್ದರು ದೊಡ್ಡ ಬಜೆಟ್ (Budget) ಸಿನಿಮಾಗಳ ಕಾಲ. ದೊಡ್ಡದಾಗಿ ಹೂಡಿಕೆ ಮಾಡಿ ದೊಡ್ಡದಾಗಿ ಗಳಿಸಬಹುದು ಎಂಬುದನ್ನು ಸಿನಿಮಾ ಮಂದಿ ಅರ್ಥ ಮಾಡಿಕೊಂಡಿದ್ದಾರೆ. ಸಣ್ಣ, ಮಧ್ಯಮ ಬಜೆಟ್ ಸಿನಿಮಾ ಮಾಡುತ್ತಿದ್ದ ಆರ್.ಚಂದ್ರು ಸಹ ‘ಕಬ್ಜ’ ಮೂಲಕ ದೊಡ್ಡ ಬಜೆಟ್ ಸಿನಿಮಾ ಮಾಡಿ ದೊಡ್ಡ ಜಯವನ್ನೇ ಸಾಧಿಸಿದರು. ಧ್ರುವ ಸರ್ಜಾ ಸಹ ಅದೇ ಹಾದಿಯಲ್ಲಿದ್ದಾರೆ. ಮುಂಚಿನಿಂದಲೂ ಮಧ್ಯಮಕ್ಕಿಂತಲೂ ತುಸು ಹೆಚ್ಚು ಬಜೆಟ್ ಸಿನಿಮಾಗಳನ್ನೇ ಮಾಡುತ್ತಿದ್ದ ಧ್ರುವ ಸರ್ಜಾ (Dhruva Sarja), ಮಾರ್ಟಿನ್ ಮೂಲಕ ಭಾರಿ ಬಜೆಟ್ಗೆ ಕೈ ಹಾಕಿದ್ದಾರೆ.
‘ಮಾರ್ಟಿನ್’ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾವನ್ನು ದೊಡ್ಡ ಸ್ಕೇಲ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಫೈಟ್ ಸೀಕ್ವೆನ್ಸ್ಗೆ ಬರೋಬ್ಬರಿ 9 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ, ಸಿನಿಮಾದ ಹಾಡೊಂದರ ಚಿತ್ರೀಕರಣಕ್ಕೆ ಬರೋಬ್ಬರಿ 3 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ.
‘ಮಾರ್ಟಿನ್’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣವಷ್ಟೆ ಬಾಕಿ ಉಳಿದಿತ್ತು, ಇದೀಗ ಒಂದು ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 3 ಕೋಟಿ ರೂಪಾಯಿಗಳನ್ನು ಚಿತ್ರತಂಡ ಖರ್ಚು ಮಾಡಿದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಒಂದು ಹಾಡಿಗಾಗಿ ಹೈದರಾಬಾದ್ನಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಹಾಡಿಗೆ ಬರೋಬ್ಬರಿ ಮೂರು ಕೋಟಿ ಹಣವನ್ನು ನಿರ್ಮಾಪಕರು ಖರ್ಚು ಮಾಡಿದ್ದು, ಸಾವಿರಾರು ಜ್ಯೂನಿಯರ್ಗಳನ್ನು ಬಳಸಿ ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಮಾಡಲಾಗಿದೆ.
ಇದನ್ನೂ ಓದಿ:ಅತ್ತಿಗೆ ಮೇಘನಾ ರಾಜ್ ಕಮ್ಬ್ಯಾಕ್ಗೆ ಧ್ರುವ ಸರ್ಜಾ ಬೆಂಬಲ
ಈ ಹಾಡಿಗೆ ಬರೋಬ್ಬರಿ 5 ದಿನ ತಾಲೀಮು ಮಾಡಲಾಗಿದೆ. ದೇಸಿ, ವಿದೇಸಿ ಸಹ ಡ್ಯಾನ್ಸರ್ಗಳನ್ನು ಹಾಡಿಗೆ ಬಳಸಿಕೊಳ್ಳಲಾಗಿದೆ. ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಕೊರಿಯೋಗ್ರಾಫ್ ಮಾಡಿದ್ದು ಭಾರಿ ಅದ್ಧೂರಿಯಾಗಿ ಹಾಡು ಮೂಡಿ ಬಂದಿದೆ. ಪಾಕಿಸ್ತಾನದಲ್ಲಿರುವ ಫೀಲ್ ಬರುವಂತೆ ಸೆಟ್ ಅನ್ನು ಡಿಸೈನ್ ಮಾಡಲಾಗಿದ್ದು, ನರ್ತಕಿಯರ, ಎಕ್ಸ್ಟ್ರಾಗಳ ಕಾಸ್ಟೂಮ್ ಅನ್ನು ಅರೆಬಿಕ್ ಮಾದರಿಯಲ್ಲಿಯೇ ಡಿಸೈನ್ ಮಾಡಲಾಗಿದೆ. ಈ ಹಾಡು ಅರೆಬಿಕ್ ಶೈಲಿಯಲ್ಲಿದ್ದು ಜನಪ್ರಿಯ ಸಂಗೀತ ನಿರ್ದೇಶಕ ಮಣಿಶರ್ಮಾ, ಹಾಡಿಗೆ ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ.
ಸುಮಾರು ಮೂರು ದಿನಗಳ ಹಾಡಿನ ಚಿತ್ರೀಕರಣ ಮಾಡಲಾಗಿದೆ. ನಾಲ್ಕು ಹಾಡುಗಳ ಚಿತ್ರೀಕರಣವನ್ನು ಅಕ್ಟೋಬರ್ 10ರ ಒಳಗೆ ಮುಗಿಸುವ ಯೋಚನೆಯಲ್ಲಿ ಚಿತ್ರತಂಡ ಇದೆ. ಆ ಬಳಿಕ ಸಿನಿಮಾದ ಪ್ರಮೋಷನ್, ಬಿಡುಗಡೆ ಇತ್ಯಾದಿ ಕಾರ್ಯಗಳು ನಡೆಯಲಿವೆ. ಸಿನಿಮಾಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು, ದೊಡ್ಡ ಮಟ್ಟದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿರುವ ಜೊತೆಗೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ.
ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾದ ಜೊತೆಗೆ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ಸಂಜಯ್ ದತ್ ಸಹ ನಟಿಸುತ್ತಿದ್ದಾರೆ. ಜಗಪತಿ ಬಾಬು, ,ಮಲಯಾಳಂನ ಸ್ಟಾರ್ ನಟರೊಬ್ಬರು ಸಹ ಇದ್ದಾರೆ ಎನ್ನಲಾಗುತ್ತಿದೆ. ‘ಮಾರ್ಟಿನ್’ ಸಿನಿಮಾ ಬಿಡುಗಡೆ ಬಳಿಕ ‘ಕೆಡಿ’ ಸಿನಿಮಾದ ಪ್ರಚಾರ ಕಾರ್ಯ ಶುರುವಾಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ