54 ವರ್ಷದ ಬಳಿಕ ‘ಜೇಡರ ಬಲೆ’ ಚಿತ್ರದ ಶೀರ್ಷಿಕೆ ಮರುಬಳಕೆ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

‘ಮಂಗಳವಾರ ರಜಾದಿನ’ ಸಿನಿಮಾವನ್ನು ನಿರ್ದೇಶಿಸಿದ್ದ ಯುವಿನ್ ಅವರು ಈಗ ‘ಜೇಡರ ಬಲೆ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಕಾಸ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

54 ವರ್ಷದ ಬಳಿಕ ‘ಜೇಡರ ಬಲೆ’ ಚಿತ್ರದ ಶೀರ್ಷಿಕೆ ಮರುಬಳಕೆ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ಜೇಡರ ಬಲೆ
TV9kannada Web Team

| Edited By: Madan Kumar

Sep 25, 2022 | 6:25 PM

ಡಾ. ರಾಜ್​ಕುಮಾರ್ (Dr Rajkumar)​ ನಟನೆಯ ಸಿನಿಮಾಗಳು ಇಂದಿಗೂ ಪ್ರೇಕ್ಷಕರ ಫೇವರಿಟ್​ ಪಟ್ಟಿಯಲ್ಲಿವೆ. ಅವರು ನಟಿಸಿರುವ ಚಿತ್ರದ ಶೀರ್ಷಿಕೆಗಳು ಕೂಡ ಆಕರ್ಷಕವಾಗಿವೆ. ಆ ಪೈಕಿ ಕೆಲವು ಟೈಟಲ್​ಗಳನ್ನು ಈಗಾಗಲೇ ಮರುಬಳಕೆ ಮಾಡಿಕೊಳ್ಳಲಾಗಿದೆ. ಈಗ ಅದೇ ರೀತಿ ‘ಜೇಡರ ಬಲೆ’ ಚಿತ್ರದ ಶೀರ್ಷಿಕೆಗೆ ಡಿಮ್ಯಾಂಡ್​ ಬಂದಿದೆ. ಹೌದು, ಈ ಟೈಟಲ್​ ಇಟ್ಟುಕೊಂಡು ಚಂದನವನದಲ್ಲಿ (Sandalwood) ಹೊಸ ಸಿನಿಮಾ ಮಾಡಲಾಗುತ್ತಿದೆ. ‘ಜೇಡರ ಬಲೆ’ (Jedara Bale) ಚಿತ್ರ 1968ರಲ್ಲಿ ಬಿಡುಗಡೆ ಆಗಿತ್ತು. ಬರೋಬ್ಬರಿ 54 ವರ್ಷಗಳ ಬಳಿಕ ಅದೇ ಶೀರ್ಷಿಕೆಯಲ್ಲಿ ಮತ್ತೆ ಸಿನಿಮಾ ನಿರ್ಮಾಣ ಆಗುತ್ತಿರುವುದು ವಿಶೇಷ. ಟೈಟಲ್​ ಕಾರಣದಿಂದ ಈ ಹೊಸ ಚಿತ್ರದ ಮೇಲೆ ಕೌತುಕ ಮೂಡುವಂತಾಗಿದೆ.

ಕನ್ನಡ ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟನ್ನು ಹೊಂದಿರುವ ಯುವ ಉದ್ಯಮಿ ವಿಕಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿದ್ವಿಕ್ ಪ್ರೊಡಕ್ಷನ್ ಎಂಬ ನೂತನ ನಿರ್ಮಾಣ ಸಂಸ್ಥೆಯ ಮೂಲಕ ‘ಜೇಡರ ಬಲೆ’ ಸಿದ್ಧವಾಗಲಿದೆ.  ‘ಮಂಗಳವಾರ ರಜಾದಿನ’ ಸಿನಿಮಾವನ್ನು ನಿರ್ದೇಶಿಸಿದ್ದ ಯುವಿನ್ ಅವರು ಈಗ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ನಾನು ಅಣ್ಣವ್ರ ಅಭಿಮಾನಿ. ಅವರ ಚಿತ್ರಗಳೆಂದರೆ ನನಗೆ ತುಂಬ ಇಷ್ಟ. ನಮ್ಮ ಚಿತ್ರದಲ್ಲೂ ಸಸ್ಪೆನ್ಸ್ ಕಥಾಹಂದರ ಇರುವುದರಿಂದ ‘ಜೇಡರ ಬಲೆ’ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸುತ್ತೇವ’ ಎಂದು     ನಿರ್ಮಾಪಕ ವಿಕಾಸ್ ಗೌಡ ಹೇಳಿದ್ದಾರೆ.

ಸದ್ಯಕ್ಕೆ ಅನಾವರಣ ಆಗಿರುವುದ ಶೀರ್ಷಿಕೆ ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿವರ ಬಿಟ್ಟುಕೊಡುವುದಾಗಿ ಚಿತ್ರತಂಡ ತಿಳಿಸಿದೆ. ಮುಖ್ಯ ಭೂಮಿಕೆಯಲ್ಲಿ ಯಾರು ನಟಿಸಲಿದ್ದಾರೆ? ಯಾವೆಲ್ಲ ತಂತ್ರಜ್ಞರು ಕೆಲಸ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ‘ಜೇಡರ ಬಲೆ’ ಶೀರ್ಷಿಕೆ ವಿನ್ಯಾಸ ಗಮನ ಸೆಳೆಯುತ್ತಿದೆ.

1968ರಲ್ಲಿ ಬಿಡುಗಡೆಯಾದ ‘ಜೇಡರ ಬಲೆ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಡಾ. ರಾಜ್​ಕುಮಾರ್​ ಜೊತೆ ಜಯಂತಿ, ಕೆ.ಎಸ್​. ಅಶ್ವತ್ಥ್​, ಉದಯ್​ಕುಮಾರ್​, ನರಸಿಂಹರಾಜು ಮುಂತಾದವರು ಆ ಚಿತ್ರದಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ದೊರೈ-ಭಗವಾನ್ ಜೊತೆಯಾಗಿ ಆ್ಯಕ್ಷನ್​-ಕಟ್​ ಹೇಳಿದ್ದರು. ಬಾಂಡ್​ ಶೈಲಿಯಲ್ಲಿ ಮೂಡಿಬಂದಿದ್ದ ಆ ಚಿತ್ರಕ್ಕೆ ಜನಮೆಚ್ಚಿಗೆ ಸಿಕ್ಕಿತ್ತು. ಬಳಿಕ ಅದೇ ಮಾದರಿಯ ಅನೇಕ ಸಿನಿಮಾಗಳು ಬಂದವು.

ಡಾ. ರಾಜ್​ಕುಮಾರ್​ ನಟನೆಯ ಸಿನಿಮಾಗಳ ಶೀರ್ಷಿಕೆಗಳನ್ನು ಮರುಬಳಕೆ ಮಾಡಿಕೊಳ್ಳುವುದು ಎಂದರೆ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಂತೆಯೇ ಸರಿ. ಅದನ್ನು ತುಂಬ ಸಮರ್ಥವಾಗಿ ನಿಭಾಯಿಸಬೇಕಾದ್ದು ಚಿತ್ರತಂಡದ ಕರ್ತವ್ಯ. ಸದ್ಯ ಹೊಸ ‘ಜೇಡರ ಬಲೆ’ ತಂಡ ಯಾವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada