ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರೋಗ್ಯ ಸಚಿವ ಡಾ. ಸುಧಾಕರ್; ಯಾವ ಸಿನಿಮಾ?
‘ತನುಜಾ’ ಇದು ರಿಯಲ್ ಲೈಫ್ ಘಟನೆ ಆಧರಿಸಿದ ಸಿನಿಮಾ. ಕೊವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ.
ಬಣ್ಣದ ಲೋಕ (Cinema Industry) ಅನೇಕರನ್ನು ಸೆಳೆದುಕೊಳ್ಳುತ್ತದೆ. ಕ್ರೀಡೆ, ರಾಜಕೀಯ ಹೀಗೆ ಅನೇಕ ಕ್ಷೇತ್ರದ ಜನರು ಬಣ್ಣದ ಲೋಕದ ಜತೆಗೆ ಒಳ್ಳೆಯ ನಂಟು ಹೊಂದಿದ್ದಾರೆ. ಕ್ರಿಕೆಟ್ನಲ್ಲಿ ನಿವೃತ್ತಿ ಪಡೆದ ಕೆಲವರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆ. ಅದೇ ರೀತಿ, ರಾಜಕೀಯ ನಾಯಕರು ಸಿನಿಮಾದಲ್ಲಿ ನಟಿಸಿದ ನಿದರ್ಶನ ಇದೆ. ಈಗ ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು (Dr K Sudhakar) ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರು ‘ತನುಜಾ’ (Tanuja Movie) ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸುವುದಕ್ಕೆ ಒಂದು ಮಹತ್ವದ ಕಾರಣ ಕೂಡ ಇದೆ. ಅದೇನು ಎಂಬುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ.
‘ತನುಜಾ’ ಇದು ರಿಯಲ್ ಲೈಫ್ ಘಟನೆ ಆಧರಿಸಿದ ಸಿನಿಮಾ. ಕೊವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ. ಆ ಘಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೇ ಒನ್ಲೈನ್ ಸ್ಟೋರಿ ಆಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿಯವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅದರಲ್ಲಿ ಬಿ.ಎಸ್. ಯಡಿಯೂರಪ್ಪ ನಟಿಸುತ್ತಿರುವ ಬಗ್ಗೆ ಈ ಮೊದಲು ಘೋಷಣೆ ಆಗಿತ್ತು. ಈಗ ಸುಧಾಕರ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ.
ತನುಜಾ ಎಂಬ ಹುಡುಗಿ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಸುದ್ದಿ ಆಗಿತ್ತು. ಆ ಘಟನೆ ನಡೆದಾಗ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದರೆ, ಡಾ. ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದರು. ತಮ್ಮ ರಿಯಲ್ ಲೈಫ್ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದು ಸಿನಿಪ್ರಿಯರ ಮತ್ತು ರಾಜಕೀಯ ವಲಯದವರಲ್ಲಿ ನಿರೀಕ್ಷೆ ಮೂಡಿಸಿದೆ.
ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ತಾರಾಗಣದಲ್ಲಿ ಇದ್ದಾರೆ. ದ್ಯೋತನ್ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ, ಉಮೇಶ್ ಆರ್.ಬಿ. ಸಂಕಲನ, ಆರ್. ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಹರೀಶ್ ಎಂ.ಡಿ ಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದು, ‘ಬಿಯಾಂಡ್ ವಿಷನ್ಸ್ ಸಿನಿಮಾಸ್’ ಸಂಸ್ಥೆ ಮೂಲಕ ಈ ಚಿತ್ರ ತಯಾರಾಗುತ್ತಿದೆ.
ಇದನ್ನೂ ಓದಿ: ಸಿನಿಮಾದಲ್ಲಿ ನಟಿಸಿದ ಬಿಎಸ್ ಯಡಿಯೂರಪ್ಪ; ಮಾಜಿ ಮುಖ್ಯಮಂತ್ರಿ ಒಪ್ಪಿಕೊಂಡ ಆ ಕಥೆ ಯಾವುದು?
‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ
Published On - 3:06 pm, Thu, 7 April 22