ವೈರಲ್ ಅಂಗಳಕ್ಕೆ ಎಂಟ್ರಿ ಕೊಟ್ಟ ‘ಕರಿಮಣಿ ಮಾಲಿಕ ನೀನಲ್ಲ’ ಹಾಡಿನ ಸೃಷ್ಟಿಕರ್ತ ಗುರುಕಿರಣ್
ಸೋಶಿಯಲ್ ಮೀಡಿಯಾದಲ್ಲಿ ‘ಕರಿಮಣಿ ಮಾಲಿಕ ನೀನಲ್ಲ..’ ಎಂಬ ಸಾಲು ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಉಪೇಂದ್ರ’ ಚಿತ್ರದ ‘ಏನಿಲ್ಲ ಏನಿಲ್ಲ..’ ಹಾಡಿನ ನಡುವೆ ಬರುವ ಈ ಸಾಲುಗಳನ್ನು ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈಗ ಗುನುಗಿದ್ದಾರೆ. 25 ವರ್ಷಗಳ ಹಿಂದಿನ ಹಾಡಿಗೆ ಜನರು ಈಗ ತೋರಿಸುತ್ತಿರುವ ಪ್ರೀತಿ ಕಂಡು ಅವರು ಫಿದಾ ಆಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ (Guru Kiran) ಅವರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ನಟನಾಗಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅವರು, ಬಳಿಕ ಸಂಗೀತ ನಿರ್ದೇಶಕನಾಗಿಯೇ ಫೇಮಸ್ ಆದರು. ಅವರು ನೀಡಿದ ಹಾಡುಗಳು ಇಂದಿಗೂ ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. ಅದಕ್ಕೆ ಸಾಕ್ಷಿ ಎಂಬಂತೆ ‘ಏನಿಲ್ಲ.. ಏನಿಲ್ಲ..’ (Enilla Enilla) ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 1999ರಲ್ಲಿ ತೆರೆಕಂಡ ‘ಉಪೇಂದ್ರ’ ಸಿನಿಮಾದಲ್ಲಿನ ಈ ಹಾಡು ತುಂಬ ಮಧುರವಾಗಿದೆ. ಅನೇಕರು ಇದಕ್ಕೆ ರೀಲ್ಸ್ ಮಾಡುತ್ತಿದ್ದಾರೆ. ಈಗ ಸ್ವತಃ ಗುರುಕಿರಣ್ ಕೂಡ ಈ ವೈರಲ್ ಅಂಗಳಕ್ಕೆ ಎಂಟ್ರಿ ನೀಡಿದ್ದಾರೆ. ತಮ್ಮದೇ ಹಾಡನ್ನು ಮತ್ತೊಮ್ಮೆ ಹಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಹೆಚ್ಚಿಸಿದ್ದಾರೆ. ‘ಕರಿಮಣಿ ಮಾಲಿಕ ನೀನಲ್ಲ..’ (Karimani Malika Ninalla) ಎಂಬ ಸಾಲಿಗೆ ಅವರು ತಮ್ಮ ಕಂಠದ ಸ್ಪರ್ಶ ನೀಡಿದ್ದಾರೆ.
‘ಏನಿಲ್ಲ ಏನಿಲ್ಲ..’ ಹಾಡಿನಲ್ಲಿ ಬರುವ ಸಾಲುಗಳಿಗೆ ಎರಡೆರಡು ಅರ್ಥಗಳಿವೆ ಎಂಬುದು ವಿಶೇಷ. ಅದೇ ಕಾರಣಕ್ಕಾಗಿ ಹೊಸ ತಲೆಮಾರಿನ ಕೇಳುಗರು ಕೂಡ ಈ ಗೀತೆಯನ್ನು ಈಗ ಇಷ್ಟಪಡುತ್ತಿದ್ದಾರೆ. ಉಪೇಂದ್ರ ಮತ್ತು ಪ್ರೇಮಾ ಅವರು ಜೋಡಿಯಾಗಿ ಕಾಣಿಸಿಕೊಂಡ ಈ ಹಾಡಿಗೆ ಕಾಡುವ ಗುಣ ಇದೆ. ಸದ್ಯಕ್ಕಂತೂ ಎಲ್ಲೆಲ್ಲೂ ‘ಕರಿಮಣಿ ಮಾಲಿಕ ನೀನಲ್ಲ..’ ಎಂಬ ಸಾಲನ್ನು ಜನರು ಗುನುಗುತ್ತಿದ್ದಾರೆ. 25 ವರ್ಷಗಳ ಹಿಂದೆ ಉಪೇಂದ್ರ ಬರೆದ ಸಾಹಿತ್ಯವನ್ನು ಕೇಳಿ ಹೊಸ ತಲೆಮಾರಿನ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಇದೇ ಹಾಡಿನ ರಿಮಿಕ್ಸ್ ವರ್ಷನ್ ಕೂಡ ಈಗ ಸಖತ್ ಸೌಂಡು ಮಾಡುತ್ತಿದೆ.
ಇದನ್ನೂ ಓದಿ: ‘ಕರಿಮಣಿ ಮಾಲಿಕ ನೀನಲ್ಲ..’ ಹಾಡು ಹುಟ್ಟಿದ ಸಂದರ್ಭದಲ್ಲಿ ಹರಡಿತ್ತು ಒಂದು ಗಾಸಿಪ್
‘ಉಪೇಂದ್ರ’ ಸಿನಿಮಾದಲ್ಲಿ ‘ಏನಿಲ್ಲ.. ಏನಿಲ್ಲ..’ ಗೀತೆಯನ್ನು ಹಾಡಿದ ಮೂಲ ಗಾಯಕಿ ಪ್ರತಿಮಾ ರಾವ್. ಈಗ ಗುರುಕಿರಣ್ ಅವರು ಈ ಗೀತೆಯ ಒಂದು ಸಾಲನ್ನು ಹಾಡಿದ್ದಾರೆ. ಅದನ್ನು ತಮ್ಮದೇ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘25 ವರ್ಷಗಳ ಹಿಂದೆ ಸಂಗೀತ ಸಂಯೋಜಿಸಿದ ಹಾಡು. ಈಗಲೂ ಅಷ್ಟೇ ಪ್ರೀತಿ ಇದೆ’ ಎಂದು ಗುರುಕಿರಣ್ ಅವರು ಕ್ಯಾಪ್ಷನ್ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ, ಅನುಶ್ರೀ ಮುಂತಾದ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ.
ಗುರುಕಿರಣ್ ಸೋಶಿಯಲ್ ಮೀಡಿಯಾ ಪೋಸ್ಟ್:
View this post on Instagram
ಗುರುಕಿರಣ್ ಮತ್ತು ಉಪೇಂದ್ರ ಅವರ ಕಾಂಬಿನೇಷನ್ನಲ್ಲಿ ಬಂದ ಹಾಡುಗಳು ಆ ಕಾಲದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದವು. ‘ಎ’, ‘ಉಪೇಂದ್ರ’ ಸಿನಿಮಾಗಳ ಆಡಿಯೋ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದ್ದವು. ‘ಸುಮ್ ಸುಮ್ನೇ ನಗ್ತಾಳೆ..’, ‘ಮಸ್ತು ಮಸ್ತು ಹುಡುಗಿ ಬಂದ್ಲು..’, ‘ಮಾರಿಕಣ್ಣು ಹೋರಿಮ್ಯಾಗೆ..’, ‘ಟು ತೌಸೆಂಡ್ ಎಡಿ ಲೇಡಿಯೇ..’ ಮುಂತಾದ ಹಾಡುಗಳು ಎಂದಿಗೂ ಹಳೆಯದಾಗುವುದೇ ಇಲ್ಲ. ಅಷ್ಟರಮಟ್ಟಿಗೆ ಅವು ಈಗಲೂ ತಮ್ಮ ಸ್ಥಾನ ಭದ್ರಪಡಿಸಿಕೊಂಡಿವೆ.
‘ಉಪೇಂದ್ರ’ ಸಿನಿಮಾದ ‘ಏನಿಲ್ಲ.. ಏನಿಲ್ಲ..’ ಹಾಡು:
‘ಅಪ್ಪು’, ‘ಕರಿಯ’, ‘ಜೋಗಿ’, ‘ಪಲ್ಲಕ್ಕಿ’, ‘ಆಪ್ತಮಿತ್ರ’, ‘ಆಪ್ತರಕ್ಷಕ’ ಸೇರಿದಂತೆ ಹಲವಾರು ಮ್ಯೂಸಿಕಲ್ ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ಗುರುಕಿರಣ್ ಅವರಿಗೆ ಸಲ್ಲುತ್ತದೆ. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ವಿಶೇಷ ಕಂಠದ ಮೂಲಕ ಜನರನ್ನು ರಂಜಿಸಿದ್ದಾರೆ. ಅನೇಕ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Mon, 5 February 24