Kantara: ‘ಕಾಂತಾರ ಕಥೆ ಗಿಮಿಕ್, ಹೀರೋ ಪಾತ್ರ ಹಾಸ್ಯಾಸ್ಪದ’: ಕಟು ಟೀಕೆ ಮಾಡಿದ ನಿರ್ದೇಶಕ ಅಭಿರೂಪ್ ಬಸು
Abhiroop Basu | Rishab Shetty: ‘ಕಾಂತಾರ’ ಚಿತ್ರವನ್ನು ನಿರ್ದೇಶಕ ಅಭಿರೂಪ್ ಬಸು ಖಾರವಾಗಿ ಟೀಕಿಸಿದ್ದಾರೆ. ಈ ಸಿನಿಮಾದಲ್ಲಿನ ಅನೇಕ ಅಂಶಗಳ ಕುರಿತು ಅವರು ತಕರಾರು ತೆಗೆದಿದ್ದಾರೆ.
ಕನ್ನಡದ ‘ಕಾಂತಾರ’ (Kantara) ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ನೋಡಿದ ಬಹುತೇಕ ಎಲ್ಲರೂ ಹೊಗಳಿದ್ದಾರೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್, ರಜನಿಕಾಂತ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದು ವರ್ಗದ ಜನರು ಈ ಸಿನಿಮಾದ ಕೆಲವು ಅಂಶಗಳ ಬಗ್ಗೆ ತಕರಾರು ತೆಗೆದಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಹೈಪ್ ಸಿಕ್ಕಿದೆ ಎಂಬುದು ಕೆಲವರ ಅಭಿಪ್ರಾಯ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಅಭಿರೂಪ್ ಬಸು (Abhiroop Basu) ಅವರು, ‘ಕಾಂತಾರ’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ.
ETimesಗೆ ನೀಡಿದ ಸಂದರ್ಶನದಲ್ಲಿ (Source) ಅಭಿರೂಪ್ ಬಸು ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಜನರ ಬುದ್ಧಿವಂತಿಕೆಯನ್ನು ಈ ಸಿನಿಮಾ ಅಣಕಿಸುತ್ತದೆ ಎಂಬ ಭಾವನೆ ನನ್ನದು. ಕಳಪೆಯಾಗಿ ಮಾಡಲಾಗಿದೆ. ಪ್ರಗತಿಪರವಲ್ಲದ ರೀತಿಯಲ್ಲಿದೆ. ಕಥೆಯಲ್ಲಿನ ತಿರುವುಗಳು ತುಂಬ ಅಪ್ರಾಮಾಣಿಕವಾಗಿವೆ. ಕೇವಲ ಗಿಮಿಕ್ ರೀತಿ ಇದೆ. ಹೀರೋ ಪಾತ್ರ ಒಳ್ಳೆಯವನಾಗಿ ಬದಲಾಗುವ ಸನ್ನಿವೇಶ ಹಾಸ್ಯಾಸ್ಪದವಾಗಿದೆ. ಅತಿಯಾಗಿ ಚರ್ಚೆ ಆಗಿರುವ ಕ್ಲೈಮ್ಯಾಕ್ಸ್ ಬಗ್ಗೆ ನನಗೆ ಆಸಕ್ತಿಯೇ ಉಳಿಯಲಿಲ್ಲ’ ಎಂದು ಅಭಿರೂಪ್ ಬಸು ಹೇಳಿದ್ದಾರೆ.
‘ಕಾಂತಾರ’ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿದ ಬಳಿಕ ಅಭಿರೂಪ್ ಬಸು ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಕೂಡ ತಮ್ಮ ಹೇಳಿಕೆಗೆ ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ. ಪೌರಾಣಿಕ ಪಾತ್ರಗಳಿಗೆ ವೈಜ್ಞಾನಿಕ ಪುರಾವೆಯನ್ನು ಹುಡುಕುತ್ತಿರುವ ಪರಿಸ್ಥಿತಿ ದೇಶದಲ್ಲಿ ಇರುವಾಗ ಇದೆಲ್ಲ ಅಚ್ಚರಿ ಏನಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಇತ್ತೀಚೆಗೆ ‘ವರಾಹ ರೂಪಂ..’ ಹಾಡಿನ ಬಗ್ಗೆಯೂ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಮಲಯಾಳಂನ ‘ನವರಸಂ..’ ಗೀತೆಯ ಟ್ಯೂನ್ ಅನ್ನು ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಕಾಪಿ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಕುರಿತು ‘ನವರಸಂ..’ ಗೀತೆಯನ್ನು ನಿರ್ಮಿಸಿದ ‘ತೈಕ್ಕುಡಂ ಬ್ರಿಡ್ಜ್’ ತಂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು.
‘ನಾವು ನಮ್ಮ ಕೇಳುಗರಿಗೆ ತಿಳಿಸುವುದೇನೆಂದರೆ, ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ಮಾಡಿದ ಪೋಸ್ಟ್ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Fri, 28 October 22